ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಿ:ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ್

ವಿಜಯಪುರ ನ.04: ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇರುವುದರಿಂದ ಉದ್ಭವಿಸಬಹುದಾದ ಸಮಸ್ಯೆಗಳನ್ನು ಯೋಜನಾಬದ್ಧವಾಗಿ ಹಾಗೂ ವ್ಯವಸ್ಥಿತವಾಗಿ ಯಾವುದೇ ಸಮಸ್ಯೆ ಬಾರದ ರೀತಿಯಲ್ಲಿ ನಿರ್ವಹಿಸುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸರ್ಕಾರದ ಕಾರ್ಯದರ್ಶಿಗಳಾದ ವಿಜಯಪುರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಬರ ಪರಿಸ್ಥಿತಿಯಿರುವುದರಿಂದ ಎಲ್ಲ ಅಧಿಕಾರಿಗಳು ಜವಾಬ್ದಾರಿಯಿಂದ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಯಾವುದೇ ಲೋಪಗಳಿಗೆ ಆಸ್ಪದ ನೀಡದೆ ಶಿಸ್ತುಬದ್ಧ-ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವ ಮೂಲಕ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಬೇಕು. ಕುಡಿಯುವ ನೀರು, ಉದ್ಯೋಗ ಇತ್ಯಾದಿ ಸಮಸ್ಯೆಗಳು ಉದ್ಭವಿಸದಂತೆ ಪೂರ್ವಸಿದ್ಧತೆಯೊಂದಿಗೆ ಕಾರ್ಯನಿರ್ವಹಿಸಬೇಕು. ಜನರಿಂದ ಬರುವ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿ, ನಿಮ್ಮ ಹಂತದಲ್ಲಿಯೇ ಪರಿಹಾರ ದೊರಕಿಸಲು ಪ್ರಯತ್ನಿಸಬೇಕು. ಈ ಕುರಿತು ಮೇಲಾಧಿಕಾರಿಗಳಿಗೆ ತತಕ್ಷಣ್ ವರದಿ ಸಲ್ಲಿಸಬೇಕು. ಯಾವುದೇ ನಿರ್ಲಕ್ಷ್ಯ ವಹಿಸಬಾರದು ಎಂದು ಅವರು ಹೇಳಿದರು.
ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ, ಜಿಲ್ಲೆಯಲ್ಲಿ ಗುಳೆ ಹೋಗುವುದನ್ನು ತಪ್ಪಿಸಬೇಕು. ಜನರಿಗೆ ಬೇಕಾಗುವ ಉದ್ಯೋಗ ದೊರಕಿಸಿಕೊಡಬೇಕು. ಜಾನುವಾರುಗಳಿಗೆ ಡಿಸೆಂಬರ್ ಅಂತ್ಯದವರೆಗೆ ಮೇವಿನ ಸಮಸ್ಯೆಯಾಗುವುದಿಲ್ಲ. ನಂತರ ದಿನಗಳಲ್ಲಿ ಜಾನುವಾರುಗಳಿಗೆ ಸಾಕಷ್ಟು ಮೇವಿನ ಲಭ್ಯತೆಯನ್ನು ಹೊಂದಲು ಈಗಿನಿಂದಲೇ ಕಾರ್ಯಯೋಜನೆ ಸಿದ್ಧಪಡಿಸಿಕೊಳ್ಳುವಂತೆ ಪಶುಸಂಗೋಪನೆ ಹಾಗೂ ಪಶುವೈದ್ಯ ಅಧಿಕಾರಿಗಳಿಗೆ ಸೂಚಿಸಿದರು.
ನಗರ ಪ್ರದೇಶಗಳಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಒದಗಿಸಲು ಆದ್ಯತೆ ನೀಡಿ, ನೀರು ಪೂರೈಸಲು ಕ್ರಮ ವಹಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಸಮಸ್ಯೆಯಾಗದಂತೆ ಗ್ರಾಮಾಧಿಕಾರಿಗಳು, ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ಕಾರ್ಯಪಡೆ ಸಮಿತಿ ಕಾಲಕಾಲಕ್ಕೆ ಸಭೆಗಳನ್ನು ನಡೆಸಿ, ನೀರಿನ ಸಮಸ್ಯೆಯಾಗಬಹುದಾದ ಗ್ರಾಮ-ವಸತಿ ಪ್ರದೇಶಗಳನ್ನು ಗುರುತಿಸಿಟ್ಟುಕೊಳ್ಳಬೇಕು. ಗಂಭೀರ ಸಮಸ್ಯೆ ಇದ್ದಲ್ಲಿ ಟ್ಯಾಂಕರ್ ಮೂಲಕ ನೀರೊದಗಿಸಬೇಕು. ಖಾಸಗಿ ಕೊಳವೆ ಬಾವಿ, ಹೊಸದಾಗಿ ಕೊಳವೆಬಾವಿ ಕೊರೆಯಿಸಲು ಅಗತ್ಯಾನುಸಾರ ಕ್ರಮ ವಹಿಸಿ, ಕೈಗೊಂಡ ಕ್ರಮದ ಕುರಿತು ವರದಿ ಸಲ್ಲಿಸುವಂತೆ ಸೂಚಿಸಿದ ಅವರು, ಕಲುಷಿತ ನೀರು ಪೂರೈಕೆಯಾಗದಂತೆ ಎಚ್ಚರಿಕೆ ವಹಿಸಬೇಕು. ನೀರು ಪರೀಕ್ಷಿಸಿದ ನಂತರ ಪೂರೈಸಲು ಕ್ರಮ ವಹಿಸಬೇಕು ಎಂದು ಅವರು ಹೇಳಿದರು.
ಮಹಾನಗರ ಪಾಲಿಕೆ ವ್ಯಾಪ್ತಿ, ನಗರ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ವ್ಯವಸ್ಥಿತವಾಗಿ ನಿರ್ವಹಣೆ ಮಾಡಬೇಕು. ಪೌರಕಾರ್ಮಿಕರಿಗೆ ಸಕಾಲದಲ್ಲಿ ವೇತನ ಪಾವತಿಸಬೇಕು. ಪೌರಕಾರ್ಮಿಕರ ಸಮಸ್ಯೆಗಳಿಗೆ ನಿಮ್ಮ ಹಂತದಲ್ಲಿಯೇ ಪರಿಹಾರ ಒದಗಿಸಿ ಘನತ್ಯಾಜ್ಯ ವಿಲೇವಾರಿ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ತಾಳಿಕೋಟೆ, ಕೊಲ್ಹಾರ, ತಿಕೋಟಾ ಕ್ರೀಡಾಂಗಣಕ್ಕಾಗಿ ಜಾಗ ಗುರುತಿಸಬೇಕು. ಕಂದಾಯ ಇಲಾಖೆಯಿಂದ ಸ್ವಾಧೀನಕ್ಕೆ ಪಡೆದುಕೊಳ್ಳಬೇಕು. ತಾಲೂಕಿನ ಸಮೀಪದಲ್ಲಿರುವ ಸರ್ಕಾರಿ ಜಾಗ ಪಡೆಯಲು ಕ್ರಮ ವಹಿಸಬೇಕು.
ಜಿಲ್ಲೆಯಲ್ಲಿರುವ ಎಲ್ಲ ವಸತಿ ಶಾಲೆ-ನಿಲಯಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ವಸತಿ ಶಾಲೆಗಳಲ್ಲಿ ವಾರ್ಡಗಳ ಪಾತ್ರ ಅತಿಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ವಾರ್ಡನ್‍ಗಳ ಮೂಲಕ ಪಾಠಬೋಧನೆ ಮಾಡಿಸಿ, ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಕ್ರಮ ವಹಿಸಬೇಕು. ಗಣಕಯಂತ್ರ ಜ್ಞಾನ ಹೊಂದಲು ಅವಕಾಸ ಕಲ್ಪಿಸಬೇಕು. ಮಕ್ಕಳಲ್ಲಿ ಗುಣಾತ್ಮಕ ಮತ್ತು ಪರಿಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಬೇಕು. ಶ್ರಮದಾನ ಸಾಮಾಜಿಕ ಕಾರ್ಯಚಟುವಟಿಕೆ, ಸ್ವಚ್ಛತಾ ಕಾರ್ಯ ಆಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಬೆಳೆಸಬೇಕು. ಗಿಡಗಳನ್ನು ನೆಡುವ ಮೂಲಕ ಅರಣ್ಯೀಕರಣ ಮಹತ್ವದ ಕಾರ್ಯಗಳನ್ನು ನಿರಂತರವಾಗಿ ಕೈಗೊಳ್ಳಬೇಕು. ವಸತಿ ನಿಲಯಗಳಲ್ಲಿ ಸಮರ್ಪಕ ಕುಡಿಯುವ ನೀರು, ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಸೂಚನೆ ನೀಡಿದರು.
ಈಗಾಗಲೇ ಜಿಲ್ಲೆಯಲ್ಲಿ ಆನ್‍ಲೈನ್ ತರಗತಿಗಳನ್ನು ಆರಂಭಿಸಲಾಗಿದೆ. ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡು ತಮ್ಮ ಶೈಕ್ಷಣಿಕ ಗುಣಮಟ್ಟ ಸುಧಾರಿಸಿಕೊಳ್ಳುತ್ತಿದ್ದಾರೆ. ವಾರಕ್ಕೆರಡು ದಿನ ತರಬೇತಿ ನೀಡಲಾಗುತ್ತಿದೆ. ಸರ್ಕಾರಿ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ಹೊಂದಿರುವ ವಿದ್ಯಾರ್ಥಿಗಳ ಜ್ಞಾನ ಹೆಚ್ಚಿಸಲು ಚೇತನ ಸಂಜೆ ಆನ್‍ಲೈನ್ ಕಾರ್ಯಕ್ರಮ ಮೂಲಕ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂದೆ ಅವರು ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯ ಎಲ್ಲ ಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ಕ್ರಮ ವಹಿಸಬೇಕು. ದುರಸ್ತಿ ಇರುವ ಶಾಲೆಗಳನ್ನು ಕೂಡಲೇ ದುರಸ್ತಿಗೆ ಕ್ರಮ ವಹಿಸಿ, ವಿದಾರ್ಥಿಗಳ ಕಲಿಕೆಗೆ ಶಾಲಾ ಕೊಠಡಿಗಳು ಸುಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದ ಅವರು, ಸ್ವಂತ ಜಾಗ ಇಲ್ಲದೇ ಇರುವ ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಸೂಕ್ತ ಜಾಗ ಗುರುತಿಸಬೇಕು. ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ತಿಂಗಳಿಗೆ ಕನಿಷ್ಠ 25 ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಬಾಲ್ಯವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತಂಡವನ್ನು ರಚಿಸಿ ಸೂಕ್ತ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಮದುವೆ ಆರಂಭದ ದಿನಗಳಲ್ಲಿ ಗ್ರಾಮೀಣ ಮಟ್ಟದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು. ಬಾಲ್ಯ ವಿವಾಹಗಳು ನಡೆಯದಂತೆ ತೀವ್ರ ನಿಗಾ ವಹಿಸಬೇಕು ಎಂದು ಅವರು ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಮಹಾನಗರ ಪಾಲಿಕೆ ಆಯುಕ್ತ ಬದ್ರುದ್ದೀನ್ ಸೌದಾಗರ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ, ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ವಿಜಯಪುರ ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ, ಇಂಡಿ ಉಪವಿಭಾಗಾಧಿಕಾರಿ ಆಬೀದ್ ಗದ್ಯಾಳ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.