ಬರೆದಂತೆ ಬದುಕಿದ ವೀರಶೆಟ್ಟಿ ಬಾವುಗೆಯವರು : ಡಾ. ಬಸವಲಿಂಗ ಪಟ್ಟದ್ದೇವರು

ಭಾಲ್ಕಿ:ನ.8:ಬರೆದಂತೆ ಬದುಕಿದ, ಬದುಕಿದಂತೆ ಬರೆದ ಆದರ್ಶ ಶಿಕ್ಷಕ, ಸಾಹಿತಿ, ಶರಣಜೀವಿ ಶ್ರೀವೀರಶೆಟ್ಟಿ ಬಾವುಗೆಯವರಾಗಿದ್ದಾರೆ ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷರಾದ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು. ಅವರು ಬಸವ ಸಿರಿ ಪ್ರಕಾಶನ ಭಾಲ್ಕಿಯ ವತಿಯಿಂದ ಶ್ರೀ ವೀರಶೆಟ್ಟಿ ಬಾವುಗೆಯವರ ಬದುಕು ಬರಹ ಕುರಿತ ‘ಅರಿವಿನ ಗುರು’ ಗ್ರಂಥ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತ ಇಂದು ಅನೇಕ ಸಾಹಿತಿಗಳು ಬದುಕೇ ಬೇರೆ ಬರಹವೇ ಬೇರೆಯೆಂದು ಸಮರ್ಥನೆ ಮಾಡಿಕೊಳ್ಳವಂತಹವರಿದ್ದಾರೆ. ಬದುಕು-ಬರಹ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಆದರ್ಶ ಕವಿಯ ಬರಹ ಕೂಡ ಅಷ್ಟೇ ಆರೋಗ್ಯಕರ ಸಮಾಜದ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದು ನುಡಿದರು. ‘ಅರಿವಿನ ಗುರು’ ಕೃತಿಯನ್ನು ಲೋಕಾರ್ಪಣೆಗೈದ ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿಗಳು ಡಾ. ಶಿವಾನಂದ ಮಹಾಸ್ವಾಮಿಗಳು ವೀರಶೆಟ್ಟಿ ಬಾವುಗೆಯವರು ನಾಡು ನುಡಿಗೆ ನೀಡಿದ ಕೊಡುಗೆ ಅನನ್ಯವಾಗಿದೆ. ಅವರ ಆದರ್ಶ ಸಮಾಜಕ್ಕೆ ಅನಿವಾರ್ಯವಾಗಿದೆ. ಮನುಷ್ಯನ ಬದುಕು ಬರಹ ಒಂದಾಗಬೇಕಾದ ಅನಿವಾರ್ಯತೆಯಿದೆ. ಹೀಗಾಗಿ ಈ ಅರಿವಿನ ಗುರು ಕೃತಿ ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೃತಿಯಾಗಿದೆ ಎಂದು ನುಡಿದರು. ವೇದಿಕೆಯಲ್ಲಿ ಪೂಜ್ಯರಾದ ಸಾಯಗಾಂವ ಶ್ರೀಗಳು ಬಸವಗುರುವಿನ ಪೂಜೆಸಲ್ಲಿಸಿದರು. ಕೃತಿ ವಿಮರ್ಶೆಯನ್ನು ಹಿರಿಯ ಸಾಹಿತಿಗಳಾದ ಡಾ. ಸೋಮನಾಥ ನುಚ್ಚಾರವರು ಅಮೂಲಾಗ್ರವಾಗಿ ಮಾಡಿ ಇಡಿಯಾಗಿ ಕೃತಿಯ ಒಳಹೊರಗನ್ನು ಮನೋಜ್ಞವಾಗಿ ವಿಮರ್ಶಿಸಿದರು. ‘ಅರಿವಿನ ಗುರು’ ಕೃತಿ ಕನ್ನಡ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸುವ ಕೃತಿಯಾಗಿದೆ, ವೀರಶೆಟ್ಟಿ ಬಾವುಗೆಯವರ ವಚನಗಳೊಂದಿಗೆ ವಿವರಿಸಿದರು. ನಂತರ ಕೃತಿಯ ಪ್ರಧಾನ ಸಂಪಾದಕರಾದ ಡಾ. ರಘುಶಂಖ ಭಾತಂಬ್ರಾರವರು ಮಾತನಾಡಿದರು. ಸಂಪಾದಕರಾದ ಡಾ. ರಾಮಚಂದ್ರ ಗಣಾಪೂರರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಸಿದ್ರಾಮಪ್ಪ ಮಾಸಿಮಾಡೆಯವರು ವಹಿಸಿದ್ದರು. ಸಮಾರಂಭದಲ್ಲಿ ಕೃತಿಯ ಸಂಪಾದಕರಿಗೂ ಹಾಗೂ ಎಲ್ಲಾ ಲೇಖನಗಳ ಲೇಖಕರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಸಹ ಸಂಪಾದಕರಾದ ಶ್ರೀ ಗಣಪತಿ ಭೂರೆಯವರು ಸರ್ವರನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಶ್ರೀ ವೀರಶೆಟ್ಟಿ ಬಾವುಗೆ ದಂಪತಿಗಳನ್ನು ಪೂಜ್ಯರು ಹಾಗೂ ಅಭಿಮಾನಿಗಳು ಸನ್ಮಾನಿಸಿದರು. ವೇದಿಕೆಯಲ್ಲಿ ಸಹ ಸಂಪಾದಕರಾದ ಶ್ರೀ ರುಕ್ಮೋದ್ದಿನ ಇಸ್ಲಾಂಪೂರರವರ ಉಪಸ್ಥಿತರಿದ್ದರು ಶ್ರೀಮತಿ ಅಕ್ಕನಾಗಮ್ಮ ವಿಕ್ರಮ ಖಳ್ಳಾಳೆಯವರು ವಂದಿಸಿದರು. ಶ್ರೀ ನಿರಂಜಪ್ಪ ಪಾತ್ರೆಯವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.