ಬರುವ ವರ್ಷ 700 ಕೋಟಿ ರೂ ಸಾಲ ನೀಡುವ ಗುರಿ: ಚಂದ್ರಶೇಖರಯ್ಯ

ಬಳ್ಳಾರಿ ಡಿ 25 : ಬರುವ ವರ್ಷದಲ್ಲಿ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿಂದ 70 ಸಾವಿರ ಜನರಿಗೆ 7 ನೂರು ಕೋಟಿ ರೂಪಾಯಿ ಸಾಲ ನೀಡುವ ಗುರಿ ಹೊಂದಿದೆ ಎಂದು ಬ್ಯಾಂಕಿನ ಅಧ್ಯಕ್ಷ ಟಿ.ಎಂ. ಚಂದ್ರಶೇಖರಯ್ಯ ಹೇಳಿದ್ದಾರೆ.
ಅವರು ಇಂದು ಬ್ಯಾಂಕು ಪ್ರಧಾನ ಕಚೇರಿ‌ಹೊಂದಿರುವ ಹೊಸಪೇಟೆಯಲ್ಲಿ ಸುದ್ದಿಗೋಷ್ಟಿ ನಡೆಸಿ ಈ ವಿಷಯ ತಿಳಿಸಿದರು. ಸಾಲವನ್ನು ರೈತರು, ಬೀದಿ ವ್ಯಾಪಾರಿಗಳು ಹಾಗೂ ಸ್ವಸಹಾಯ ಸಂಘಗಳಲ್ಲಿ ಕೆಲಸ ಮಾಡುವವರಿಗೆ ನೀಡಲಿದೆ. ಸದ್ಯ ಬ್ಯಾಂಕ್‌ 70 ಕೋಟಿ ಷೇರು ಬಂಡವಾಳ ಹೊಂದಿದೆ. 1,056.94 ಕೋಟಿ ರೂ ಒಟ್ಟು ಠೇವಣಿ ಹೊಂದಿದೆ. ಸಾಲದ ಒಟ್ಟು ಹೊರಬಾಕಿ 1,033.14 ಕೋಟಿ ರೂ ಇದೆ. 1,636.41 ಕೋಟಿ ರೂ ದುಡಿಯುವ ಬಂಡವಾಳ ಇದೆ. ಪ್ರಸಕ್ತ ವರ್ಷ ಲಾಕ್‌ಡೌನ್‌ ಇದ್ದರೂ 2.74 ಕೋಟಿ ರೂ ಲಾಭವಾಗಿದೆ. ಕಳೆದ ವರ್ಷ ಬ್ಯಾಂಕಿಗೆ 7 ಕೋಟಿ ರೂ ಲಾಭ ಬಂದಿತ್ತು. ಬ್ಯಾಂಕ್‌ ಸತತ 44 ವರ್ಷಗಳಿಂದ ಲಾಭದಲ್ಲಿ ಮುನ್ನಡೆಯುತ್ತಿದೆ. ಲೆಕ್ಕಪತ್ರದಲ್ಲಿ ಬ್ಯಾಂಕಿಗೆ ‘ಎ’ ಗ್ರೇಡ್‌ ಸಿಕ್ಕಿದೆ ಎಂದು ಹೇಳಿದ್ದಾರೆ.
ಬ್ಯಾಂಕಿನಿಂದ 64 ಸಾವಿರ ಜನರಿಗೆ ಸಾಲ ಮನ್ನಾದ ಪ್ರಯೋಜನವಾಗಿದೆ. ತಾಂತ್ರಿಕ ಕಾರಣಗಳಿಂದ ಇನ್ನೂ ಆರು ಸಾವಿರ ರೈತರ ಸಾಲ ಮನ್ನಾ ಆಗಿಲ್ಲ. ಅದನ್ನು ಸರಿಪಡಿಸಿ ಯೋಜನೆಯ ಪ್ರಯೋಜನ ಎಲ್ಲರಿಗೂ ದೊರಕಿಸಿಕೊಡಲಾಗುವುದು. ಲಾಕ್‌ಡೌನ್‌ ವೇಳೆ ಆಶಾ ಕಾರ್ಯಕರ್ತೆಯರಿಗೆ ಒಟ್ಟು 25 ಲಕ್ಷ ರೂ ಸಹಾಯ ಧನ ನೀಡಲಾಗಿದೆ. ಬ್ಯಾಂಕಿನ ಶತಮಾನೋತ್ಸವವನ್ನು ಬರುವ ದಿನಗಳಲ್ಲಿ ಸಂಭ್ರಮದಿಂದ ಆಚರಿಸಲು ತೀರ್ಮಾನಿಸಲಾಗಿದೆ. ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಹಕಾರ ಸಂಘಗಳನ್ನು ಸತ್ಕರಿಸಲಾಗುವುದೆಂದು ಹೇಳಿದ್ದಾರೆ.
ಬ್ಯಾಂಕಿನ ಉಪಾಧ್ಯಕ್ಷ ಗುಂಡಮುಣುಗು ಕೆ. ತಿಪ್ಪೇಸ್ವಾಮಿ, ನಿರ್ದೇಶಕರಾದ ಜೆ.ಎಂ. ವೃಷಭೇಂದ್ರಯ್ಯ, ಎಂ. ಗುರುಸಿದ್ದನಗೌಡ, ಡಿ. ಭೋಗಾರೆಡ್ಡಿ, ಕೋಳೂರು ಮಲ್ಲಿಕಾರ್ಜುನಗೌಡ, ಎಲ್‌.ಎಸ್‌. ಆನಂದ್‌, ಕೆ. ರವೀಂದ್ರನಾಥ, ಚಿದಾನಂದಪ್ಪ ಐಗೋಳ, ಬಿ.ಕೆ. ಪ್ರಕಾಶ್‌, ಎನ್‌. ಭರತ್‌ ರೆಡ್ಡಿ, ಜೆ.ಎಂ. ಗಂಗಾಧರ, ಸಿ. ಎರ್ರಿಸ್ವಾಮಿ, ಸುನೀತಾ ಸಿದ್ರಾಮ್‌, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜಶ್ರೀ ಬಿ. ಅಗಸ ಮೊದಲಾದವರು ಇದ್ದರು.