ಬರಹ ಆತ್ಮಾನಂದನೀಡುವಂತಿರಲಿ: ಪ್ರೊ.ಪೋತೆ

ಕಲಬುರಗಿ,ಮಾ.27-ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಕವಿ-ಕಾವ್ಯ-ಕೃತಿಗಳ ಅನುಸಂಧಾನ-ಸರಣಿ ಮಾತುಕತೆ ಮಾಲಿಕೆ-2 ಸಮಾರಂಭದಲ್ಲಿ ಸಿದ್ರಾಮ ಹೊನ್ಕಲ್ ಅವರ ‘ನಿನ್ನ ಪ್ರೇಮವಿಲ್ಲದೆ ಸಾಕಿ’ ಕೃತಿಯನ್ನು ಡಾ.ಸೂರ್ಯಕಾಂತ ಸುಜ್ಯಾತ್ ಅವರು ಅನುಸಂಧಾನ ಮಾಡುತ್ತಾ ಇತ್ತಿಚೆಗೆ ಕನ್ನಡ ಸಾಹಿತ್ಯದಲ್ಲಿ ಗಜಲ್ ಪ್ರಕಾರ ಪ್ರಚಾರಗೊಳುತ್ತಿರುವದಕ್ಕೆ ತುಂಬಾ ಸಂತೋಷವೆನಿಸುತ್ತದೆ ಎಂದರು. ಗಾಲಿಬ್ ಹೇಳಿದ ಚಿಂತನೆಗಳು ಬದುಕಿಗೆ ಬೇಕಾದ ಮಾತುಗಳು ಪ್ರಸ್ತುತವೆನಿಸುತ್ತವೆ. ಗಜಲ್‍ಗಳು ಮನಸ್ಸಿಗೆ ಮುದನೀಡಿ, ಚೈತನ್ಯ, ಮನೋರಂಜನೆ ನೀಡುವ ನಿಟ್ಟಿನಲ್ಲಿ ರಚನೆಗೊಂಡಿವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಗಜಲ್ ಬರಹಗಾರರು ನೂರಕ್ಕಿಂತಲೂ ಹೆಚ್ಚು ಜನರಿದ್ದಾರೆ. ತನ್ನದೆಯಾದ ಗೇಯ ಅರ್ಥವಂತಿಕೆಯಿಂದ ಪ್ರತಿಯೊಬ್ಬರ ಬದುಕಿಗೆ ಅವಶ್ಯಕವಾದ ಚಿಂತನೆಗಳು ಒಡಮೂಡಿವೆ. ಇಸ್ಕ್ ಅಂದರೆ ಪ್ರೀತಿ-ಪ್ರೇಮ ಪದಗಳು ಬಳಕೆಗೊಂಡಿವೆ. ಶಾಂತರಸರವರಿಗೆ ಉರ್ದುವಿನಿಂದ ಕನ್ನಡ ಪ್ರಕಾರಕ್ಕೆ ಗಜಲ್ ತಂದ ಕೀರ್ತಿ ಸಲ್ಲುತ್ತದೆ ಎಂದರು.
ಸಿದ್ರಾಮ ಹೊನ್ಕಲ್ ಅವರ ಕೃತಿ ‘ನಿನ್ನ ಪ್ರೇಮವಿಲ್ಲದೆ ಸಾಕಿ’ ಯಲ್ಲಿನ ಸಾಕಿ ಎಂಬುದು ಮದ್ಯ ಸುರಿಸುವ ಹೆಣ್ಣು ಎಂಬ ಅರ್ಥದಲ್ಲಿ ಗುರುತಿಸುವದಲ್ಲ. ಅದರ ಒಳಾರ್ಥವನ್ನು ನಾವು ಹೆಕ್ಕಿ ತೆಗೆಯಬೇಕೆಂದರು. ಪ್ರೇಮವೆಂಬುದು ವಾಸನೆ ರಹಿತವಾದುದು. ಕೌಟುಂಬಿಕ ಚಿಂತನೆಗಳಿಗೆ ಹೆಚ್ಚು ಒತ್ತುಕೊಟ್ಟದು ಕಾಣುತ್ತೆವೆ. ವಾಸ್ತವ ಜಗತ್ತಿನ ತಲ್ಲಣ ಸಂಕಟಗಳಿಗೆ ಪರಿಹಾರೋಪಾಯ ಕಂಡುಕೊಳ್ಳುವ ರೀತಿಯಲ್ಲಿ ಇವರ ಗಜಲ್‍ಗಳು ರಚನೆಗೊಂಡಿವೆ. ಒಪ್ಪಿತ ಒಲ್ಲದ ಭಾವನೆಗಳಿಗೆ ಗಜಲ್ ರೂಪ ಕೊಡುವ ತಾತ್ವಿಕ ಚಿಂತನೆಯಾಗಿ ಮೂಡಿದೆ. ಸಿಟ್ಟು ಸಿಡುಕು ನೋವು ಸಂಕಟಗಳ ಸಂದರ್ಭದಲ್ಲಿ ಮನಸ್ಸಿಗೆ ಹಿತಕರವಾದ ಮುದ ನೀಡುವ ಗೇಯತೆ ಗಜಲ್‍ದಲ್ಲಿದೆ. ಪ್ರಸ್ತುತ ದಿನಮಾನಗಳಿಗೆ ಬೇಕಾದ ಶಾಂತಿ, ಸಹನೆ, ತಾಳ್ಮೆ ಮೈಗೂಡಿಸಕೊಳ್ಳಬೇಕೆಂಬುದು ಮತ್ತು ಸಾಮರಸ್ಯತೆ, ಅನೋನ್ಯತೆ, ಸೌಹಾರ್ದತೆ ಮೂಡಿಸುವ ನಿಟ್ಟಿನಲ್ಲಿ ನಿನ್ನ ಪ್ರೇಮವಿಲ್ಲದೆ ಸಾಕಿ ಎಂಬ ಕೃತಿಯಲ್ಲಿ ಮೂಡಿದೆ. ಸಮಕಾಲೀನ ಸಮಸ್ಯೆಗಳಿಗೂ ಕಿವಿಗೊಡುವ ಜನ ಜಾಗೃತಿ ಮೂಡಿಸುವ ಚಿಂತನಶೀಲ ವಿಚಾರಗಳು ಗಜಲ್‍ದಲ್ಲಿ ಒಡಮೂಡಿವೆ ಎಂದರು.
ಪ್ರಭುಲಿಂಗ ನೀಲೂರೆ ಅವರ ‘ಸುಬೇದಾರ ರಾಮಜೀ ಸಕ್ಪಾಲ’ ಅವರ ಕೃತಿಯನ್ನು ಪ್ರೊ. ವಿಕ್ರಮ ವಿಸಾಜಿ ಅವರು ಅನುಸಂದಾನ ಮಾಡುತ್ತಾ ಯುಗಧರ್ಮ ಆಧಾರದಲ್ಲಿ ಸಾಹಿತ್ಯ ಕೇಂದ್ರ ವಸ್ತುಗಳು ಬದಲಾವಣೆಗೊಂಡವು. ಈ ಕೃತಿಯಲ್ಲಿ ಕನ್ನಡ ಸಾಹಿತ್ಯಕ್ಕೆ ಅಪರಿಚಿತವಾಗಿರುವ ವ್ಯಕ್ತಿಯ ಚಿಂತನೆ, ವ್ಯಕ್ತಿತ್ವವನ್ನು ಗುರುತಿಸುವಂತಹ ಕೆಲಸ ಈ ಕೃತಿಯಲ್ಲಾಗಿದೆ. ಡಾ. ಅಂಬೇಡ್ಕರ್ ಚಿಂತನೆಗೆ ಅವರ ಅಗಾಧ ಜ್ಞಾನದ ಶಕ್ತಿಯಾದುದ್ದು ತಂದೆ ರಾಮಜೀ ಸಕ್ಪಾಲರ ವ್ಯಕ್ತಿತ್ವ, ಸಹೃದಯತನ ಸದ್ಧಿಲ್ಲದೆ ಒಂದು ಪ್ರತಿಭೆಯನ್ನು ರೂಪಿಸಿದ್ದು ಕೃತಿಕಾರರು ಹಿಡಿದಿಟ್ಟಿದ್ದಾರೆ. ಮಾರಾಠಿ ಸಾಹಿತ್ಯದಲ್ಲಿನ ರಾಮಜೀ ಸಕ್ಪಾಲ ವಿಚಾರಗಳು ಘನತೆಯಿಂದ ಬದುಕಿದ ವ್ಯಕ್ತಿತ್ವ ಅಂಬೇಡ್ಕರ್ ಅವರನ್ನು ಇಡೀ ವಿಶ್ವವೇ ಬೆರಗಾಗಿ ನೋಡುವಂತೆ ಬೆಳಸಿದು ಒಂದು ಚರಿತ್ರೆ. ಅಂಬೇಡ್ಕರ್ ಅವರ ಪೂರ್ವಜರಲ್ಲಿರುವ ಸೈನ್ಯ, ಹೋರಾಟ, ಸಾಹಸತನ, ಯುದ್ಧದಲ್ಲಿ ತೊಡಗಿಸಿಕೊಳ್ಳಬೇಕೆಂಬ ಭಾವನೆ ಬಂದದ್ದು ಕಾಣಬಹುದು. ಡಾ. ಅಂಬೇಡ್ಕರ್ ಅವರ ಮನೆತನದಲ್ಲಿ ಸೈನ್ಯವೃತ್ತಿ ಮತ್ತು ಆಧ್ಯಾತ್ಮ ಹೆಚ್ಚು ಪ್ರಭಾವ ಬೀರಿವೆ. ಉದಾ: ಕಬೀರದಾಸ, ಚೊಕಾಮೇಳಾ, ದೋಹೆ, ಸೈನ್ಯ ಮುಂತಾದವು. ಈ ಕೃತಿಯಲ್ಲಿ ಅಂಬೇಡ್ಕರ್ ಮನೆಯಲ್ಲಿನ ಸುಸಂಸ್ಕೃತಿಕ ವಿಚಾರಗಳು, ವೈಚಾರಿಕ ಚಿಂತನೆಗಳು, ದೂರದೃಷ್ಟಿ ವ್ಯಕ್ತಿತ್ವದ ವಿಚಾರಗಳು ಲೇಖಕರು ಅತ್ಯಂತ ಸರಳವಾಗಿ ನಿರೂಪಿಸಿದ್ದಾರೆ ಎಂದರು.
ಪ್ರೊ. ಎಚ್.ಟಿ ಪೋತೆ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ ಒಂದು ಬರಹ ಆತ್ಮಾನಂದವನ್ನು ಉಂಟುಮಾಡಬೇಕು. ಸ್ವವಿಮರ್ಶೆ ಮಾಡಿ ಬರಹದಲ್ಲಿ ತೊಡಗಿಸಿಕೊಂಡಾಗ ಸತ್ವಯುತ ಮೌಲ್ಯಗಳು ಹೊರಹೊಮ್ಮುತ್ತವೆ. ಇವತ್ತಿಗೂ ಕೂಡ ಶೂದ್ರವರ್ಗದ ಜನರು ಮಕ್ಕಳು ಸೈನಿಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ರಾಮಜೀ ಸಕ್ಪಾಲ ಪಟ್ಟ ಕಷ್ಟ-ಸಂಕಷ್ಟ ಪರಿಶ್ರಮದಿಂದಾಗಿ ಡಾ. ಅಂಬೇಡ್ಕರ್ ಫಲವಾಗಿ ಹೊರಹೊಮ್ಮಿದರು. ಇಂದಿನ ಮಹಿಳಾ ಚಳುವಳಿಗಳಲ್ಲಿ ಅಂಬೇಡ್ಕರ್ ಚಿಂತನೆಗಳು ಗೈರು ಹಾಜರಾಗಿವೆ ಎಂದು ವಿಷಾದ ವ್ಯಕ್ತಪಡಿಸಿದರು. ಮಂಡಿವಂತಿಕೆ ಕಾರಣಕ್ಕಾಗಿ ಚಿಂತನೆ, ಜ್ಞಾನ ವಿಚಾರಗಳು ಹೊರಗಿಟ್ಟರೆ ಸಮಾಜ ಅಪೂರ್ಣವಾಗುತ್ತದೆ. ಇಂದಿನ ಸರ್ಕಾರಗಳು ಜನಸಾಮಾನ್ಯರನ್ನು ಆರ್ಥಿಕವಾಗಿ ಶಕ್ತಿ ಹೀನರಾಗಿಸದ ಹೊರತು ದೇಶ ಜನರನ್ನು ಹತೋಟಿಯಲ್ಲಿಡಲು ಸಾಧ್ಯವಿಲ್ಲ ಎಂಬಂತೆ ನಡೆದುಕೊಳ್ಳುತ್ತಿರುವದು ವಿಷಾದನೀಯ ಎಂದರು.
ಕಾರ್ಯಕ್ರಮದಲ್ಲಿ ‘ಸುಬೇದಾರ ರಾಮಜೀ ಸಕ್ಪಾಲ’ ಕೃತಿಯ ಲೇಖಕ ಪ್ರಭುಲಿಂಗ ನೀಲೂರೆ, ನಿನ್ನ ಪ್ರೇಮವಿಲ್ಲದೆ ಸಾಕಿ ಕೃತಿ ಲೇಖಕ ಸಿದ್ರಾಮ ಹೊನ್ಕಲ್ ವೇದಿಕೆಯಲ್ಲಿ ಉಪಸ್ಥಿರಿದ್ದರು. ನಗರದಿಂದ ಆಗಮಿಸಿದ ಸಾಹಿತ್ಯ ಆಸಕ್ತರು ಸಂಶೋಧನ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು, ಕನ್ನಡ ಅತಿಥಿ ಉಪನ್ಯಾಸಕರು, ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನು ಡಾ. ಶಿವಪುತ್ರ ಮಾವಿನ ವಂದಿಸಿದರು. ಡಾ. ಎಂ.ಬಿ. ಕಟ್ಟಿ ಸ್ವಾಗತಿಸಿದರು, ಡಾ. ಸಂತೋಷಕುಮಾರ ಕಂಬಾರ ನಿರೂಪಿಸಿದರು.