ಕಲಬುರಗಿ,ಜು.30: ಬರಹಗಾರ ಒಂದು ಪ್ರಾಂತ, ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಾಗದೆ ತನ್ನ ಗಟ್ಟಿಸಾಹಿತ್ಯ ಕೃತಿಯ ಮೂಲಕ ಸೀಮಾತೀತವಾಗಿ ಬೆಳೆಯಬೇಕು ; ಕಾಲಾತೀತವಾಗಿ ಉಳಿಯಬೇಕು . ಅತ್ಯುತ್ತಮ ಕೃತಿಗಳು ಸದಾ ಓದುಗರ-ವಿಮರ್ಶಕರ ಮನಸ್ಸಿನಲ್ಲಿ ಉಳಿದುಕೊಳ್ಳುತ್ತವೆ ಹೊರತು, ಪ್ರಶಸ್ತಿ-ಪುರಸ್ಕಾರ ಮತ್ತುಸನ್ಮಾನಗಳಲ್ಲ. ಹಲವು ವರ್ಷ ಕಳೆದ ಬಳಿಕ ಬರಹಗಾರನ ಪ್ರಶಸ್ತಿ- ಸನ್ಮಾನದ ಶಾಲು-ಹಾರಗಳು ಎಲ್ಲೋ ಬಿದ್ದು ಹೋಗಬಹುದು. ಆದರೆ , ಅತ್ಯುತ್ತಮ ಸಾಹಿತ್ಯ ಕೃತಿ ಮುಂದಿನ ತಲೆಮಾರಿನವರೆಗೆ ಉಳಿದುಕೊಳ್ಳುತ್ತದೆ ಎಂದು ಕಲಬುರಗಿಯ ಇಂಗ್ಲಿಷ ಪ್ರಾಧ್ಯಾಪಕ ಹಾಗೂ ನಾಡಿನ ಪ್ರಮುಖ ಕಥೆಗಾರರಾದ ಸಿ.ಎಸ್.ಆನಂದ ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ವಿಭಾಗ ಆಯೋಜಿಸಿದ್ದ ಕಥೆಗಾರರೊಡನೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಚರಿತ್ರೆಗೆ ಬಹು ದೊಡ್ಡ ಇತಿಹಾಸವಿದೆ. ಅದರಲ್ಲೂ ಆಧುನಿಕ ಕನ್ನಡ ಸಾಹಿತ್ಯದ ಸೃಜನಶೀಲ ಪ್ರಕಾರಗಳಲ್ಲಿ ಕಥಾ ಸಾಹಿತ್ಯ ಇಂದು ಹೆಮ್ಮರವಾಗಿ ಬೆಳೆದಿದೆ. ಕಾವ್ಯದ ಗ್ಲ್ಯಾಮರ್ ಈ ಪ್ರಕಾರಕ್ಕಿಲ್ಲವಾದರೂ ಹೆಚ್ಚು ಓದುಗರನ್ನು ಹೊಂದಿರುವ ಸಾಹಿತ್ಯ ಪ್ರಕಾರ ಇದಾಗಿದೆ. ಸಣ್ಣ ಕಥೆ ರಚನೆಗೆ ಅದರದೆಯಾದ ಸ್ವರೂಪ, ಲಕ್ಷಣ, ಭಾಷಾ ಬಳಕೆ, ವಸ್ತು ಆಯ್ಕೆ ಮತ್ತು ತಂತ್ರಗಾರಿಕೆ ಮಹತ್ವದ್ದಾಗಿದ್ದು, ಇವುಗಳ ಅಧ್ಯಯನದ ಜೊತೆಗೆ ಹಿರಿಯ ತಲೆಮಾರಿನ ಕಥೆಗಾರರ ಕಥೆ ಮತ್ತು ಕಾದಂಬರಿಗಳ ಓದು ಇಂದಿನ ಯುವ ಕಥೆಗಾರರಿಗೆ ಅಗತ್ಯ ವಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಶೈಲಜಾ ಕೊಪ್ಪರ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಾಹಿತಿಗಳು , ಹಿರಿಯ ಕನ್ನಡ ಪ್ರಾಧ್ಯಾಪಕರಾದ ಡಾ.ಮಹಾದೇವ ಬಡಿಗೇರ ಉಪಸ್ಥಿತರಿದ್ದರು. ಕಾಲೇಜಿನ ಬಹುಪಾಲು ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗವಹಿಸಿ ಕಥೆ ರಚನೆಯ ಕುರಿತು ಅನೇಕ ಪ್ರಶ್ನೆಗಳನ್ನು ಕಥೆಗಾರರಿಗೆ ಕೇಳಿ ಉತ್ತರ ಪಡೆದುಕೊಂಡರು. ಉಪನ್ಯಾಸಕರಾದ ಡಾ. ಸುವರ್ಣಾ ಹಿರೇಮಠ ಸ್ವಾಗತಿಸಿದರು. ಡಾ.ಶರಣಮ್ಮ ಪಾಟೀಲ ನಿರೂಪಿಸಿದರು. ಡಾ.ಪ್ರಿಯದರ್ಶಿನಿ ಅವರು ವಂದಿಸಿದರು.