ಬರಹಕ್ಕೆ ಚುಟುಕು ಸಾಹಿತ್ಯ ಪ್ರೇರಣೆ

ಕುಂದಗೋಳ ಮಾ. 27 : ಕಲ್ಯಾಣಪುರ ಮಠದಲ್ಲಿ ಧಾರವಾಡ ಜಿಲ್ಲಾ ಚುಸಾಪ ಪ್ರೇರಣೆಯಿಂದ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಶರಣ ಸಾಹಿತ್ಯ ಪರಿಷತ್ತು ಹಾಗೂ ಗುರುಗೋವಿಂದ ಶಿಕ್ಷಣ ಸೇವಾ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕು 5 ನೇ ಚುಟಕು ಸಾಹಿತ್ಯ ಸಮ್ಮೇಳನ ಹಾಗೂ ಗುರುಗೋವಿಂದ ರಾಜ್ಯ ಪ್ರಶಸ್ತಿ ವಿತರಣಾ ಮತ್ತು ಶಿಕ್ಷಕಸಿರಿ ಪ್ರಶಸ್ತಿ ಪ್ರದಾನ ಜತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರ ಸನ್ಮಾನ, ಕವಿ ಗೋಷ್ಠಿ, 4 ಕವನ ಸಂಕಲನಗಳ ಬಿಡುಗಡೆ ಸಮಾರಂಭ ಶನಿವಾರ ಜರುಗಿತು.
ಸಮಾರಂಭಕ್ಕೆ ಚಾಲನೆ ನೀಡಿದ ಕಚುಸಾಪ ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಅವರು ಮಾತನಾಡಿ ಬರಹಕ್ಕೆ ಚುಟುಕು ಸಾಹಿತ್ಯವೇ ಪ್ರೇರಣೆಯಾಗಿದ್ದು, ಚಿಕ್ಕ-ಚೊಕ್ಕ ಬರಹದೊಂದಿಗೆ ಉದಯೋನ್ಮುಖ ಸಾಹಿತಿಗಳು ಬೆಳೆದು-ಬಾಳಲಿ ಎಂದು ಹಾರೈಸಿದರು.
ಸಮ್ಮೇಳನದ ಸರ್ವಾಧ್ಯಕ್ಷ ಜಿ. ಡಿ. ಘೋರ್ಪಡೆ ಅವರು ಮಾತನಾಡಿ ಕುಂದಗೊಳಕ್ಕೆ ಹಿಂದುಳಿದ ತಾಲೂಕೆಂಬ ಹಣೆಪಟ್ಟಿ ಇದ್ದು, ಇಲ್ಲಿ ಸರ್ವಾಭಿವೃದ್ದಿ ಆಗಬೇಕಿದ್ದು, ನಮ್ಮಲ್ಲಿ ಒಣ ಬೇಸಾಯಕ್ಕೆ ಹೆಚ್ಚು ಒತ್ತು ನೀಡಬೆಕಾಗಿದೆ. ಯುವಕರಿಗೆ ಉದ್ಯೋಗಗಳನ್ನು ಸೃಷ್ಟಿ ಮಾಡುವ ಮೂಲಕ ನಿರುದ್ಯೋಗ ದೂರಗೊಳಿಸಬೇಕಿದೆ. ನಮ್ಮಲ್ಲಿ ಮೇಣಸಿನಕಾಯಿ ಪ್ರಮುಖ ಬೆಳೆಯಾದ್ದರಿಂದ ಸರ್ಕಾರ ಸಂಸ್ಕರಣ ಘಟಕ ಸ್ಥಾಪಿಸಲು ಮುಂದಾಗಬೇಕು. ವಿನೂತನ ಪ್ರಯೋಗದಿಂದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯಾಗುವುದು ಅವಶ್ಯವಾಗಿದೆ ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಿಕ್ಷಕ ಎಸ್. ಸಿ. ಶಾನವಾಡ ಅವರು ಮಾತನಾಡಿ ಕುಂದಗೋಳವು ಸಂಗೀತ ಸಾಹಿತ್ಯದ ಸಾಮ್ರಾಜ್ಯವಾಗಿದ್ದು ಇಲ್ಲಿ ನಿರಂತರವಾಗಿ ಸಾಹಿತ್ಯ ಚಟವಟಿಕೆಗಳು ಜರಗುತ್ತವೆ. ಚುಟಕು ಸಾಹಿತ್ಯ ಜೀವನದ ಲಾಲಿತ್ಯವಾಗಿದೆ ಸಾಹಿತ್ಯವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ನಾವು ಕಲೆ, ಸಾಹಿತ್ಯ,ಸಂಗೀತ ಕ್ಷೇತ್ರಗಳನ್ನು ಬೆಳಗಬೇಕಿದೆ ಎಂದರು.
ಸಾನಿಧ್ಯ ವಹಿಸಿದ್ದ ಬಸವಣ್ಣಜ್ಜನವರಿಗೆ `ಚುಟುಕು ತಪಸ್ವಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಚುಸಾಪ ಪ್ರಸಾರಾಂಗ ನಿರ್ದೇಶಕ ಚನ್ನಬಸಪ್ಪ ಧಾರವಾಡಶಟ್ರ, ಶ್ರೇಯಾ ಜನಸೇವಾ ಫೌಂಡೇಶನ್ ರಾಜ್ಯಾಧ್ಯಕ್ಷ ವ್ಹಿ.ಜಿ.ಪಾಟಿಲ್, ಶಸಾಪ ಮಾಜಿ ಅಧ್ಯಕ್ಷ ಸಿ.ಬಿ.ಪಾಟಿಲ್, ಸಾಹಿತಿ ಎ.ಎ.ದರ್ಗಾ, ಪ.ಪಂ ಮಾಜಿ ಅಧ್ಯಕ್ಷ ಈಶ್ವರಪ್ಪ ಗಂಗಾಯಿ, ಕರವೇ ಅಧ್ಯಕ್ಷ ಕಲ್ಲಪ್ಪ ಹರಕುಣಿ, ಎಎಪಿ ತಾಲೂಕು ಅಧ್ಯಕ್ಷ ನಿರಂಜನ ಮಣಕಟ್ಟಿಮಠ, ಕೃಷಿಕ ಸಮಾಜ ರಾಜ್ಯಾಧ್ಯಕ್ಷೆ ಮಾಣಿಕ್ಯ ಚಿಲ್ಲೂರ, ವೈದ್ಯ-ಸಾಹಿತಿ ಡಾ. ರಾ.ಆ. ಅಳಗುಂಡಗಿ, ಹನಮಂತಭಟ್ಟ ಜೋಶಿ, ಶಿವು ಪೂಜಾರ, ಜೋತಿಬಾ ಖೈರೋಜಿ, ಎಂ.ಎಂ.ಘೋಡ್ಕೆ, ಸಿ.ಟಿ.ತಿಮ್ಮನಗೌಡ್ರ, ಅಶೋಕ ಘೋರ್ಪಡೆ, ಶಂಕರಗೌಡ ದೊಡಮನಿ, ಬಿ.ಎಲ್.ಪಾಟೀಲ, ಹೊನ್ನಪ್ಪ ಕರೆಕನ್ನಮ್ಮನವರ ವೇದಿಕೆ ಗೌರವ ಪಡೆದರು.
ತಾಲೂಕ ಚುಸಾಪ ಅಧ್ಯಕ್ಷ ವಾಯ್. ಡಿ.ಹೊಸೂರ ಪ್ರಾರ್ಥಿಸಿ, ಸ್ವಾಗತಿಸಿದರು. ರಾಘವೇಂದ್ರ ನರ್ತಿ, ಶಾಂತಾ ಹೂಗಾರ, ಬಿ.ಬಿ.ಹರ್ತಿ ನಿರೂಪಿಸಿದರು. ಬಸವರಾಜ ಗುಡ್ಡದಕೇರಿ, ಗಣೇಶ ಏಸುಗಡೆ, ಸಂತೋಷ ಬಡಿಗೇರ ನಿರ್ವಹಿಸಿ, ವಂದಿಸಿದರು.