
ಕಲಬುರಗಿ: ಮಾ.17:ಬರವಣಿಗೆ ಮತ್ತು ಬದುಕಿನಲ್ಲಿ ಸಾಮ್ಯತೆಯಿರುವವರು ಬೆರಳಣಿಕೆಯಷ್ಟು. ಜೀವನದ ನೈಜತೆ, ಮೌಲ್ಯಗಳು, ಮೇರು ಸಂದೇಶವನ್ನು ತಮ್ಮ ಅನುಭಾವದ ಸಾಹಿತ್ಯ ಮೂಲಕ ಸಾರಿದ ಡಿ.ವಿ.ಗುಂಡಪ್ಪನವರು ತಾವು ಬರೆದಂತೆ ಬದುಕಿದ ಅಪರೂಪದ ಸಾಹಿತಿಗಳಾಗಿದ್ದಾರೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ಶೆಟ್ಟಿ ಕಾಂಪೆಕ್ಸ್‍ನಲ್ಲಿರುವ 'ಬಸವೇಶ್ವರ ಪದವಿ ಕಾಲೇಜು' ಮತ್ತು 'ಅಕ್ಕಮಹಾದೇವಿ ಮಹಿಳಾ ಪದವಿ ಕಾಲೇಜ್'ನಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಶುಕ್ರವಾರ ಜರುಗಿದ ಮೇರು ಸಾಹಿತಿಗಳಾದ 'ಡಿ.ವಿ.ಗುಂಡಪ್ಪ ಮತ್ತು ಪು.ತಿ.ನರಸಿಂಹಚಾರ್ಯರ ಜನ್ಮದಿನಾಚರಣೆ'ಯ ಕಾರ್ಯಕ್ರಮದಲ್ಲಿ ಉಭಯ ಮಹನೀಯರ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
‘ಕಗ್ಗ ಕವಿ’ ಎಂದೇ ಖ್ಯಾತಿ ಪಡೆದಿರುವ ಡಾ.ಡಿ.ವಿ.ಗುಂಡಪ್ಪನವರು ಬಹುಮುಖ ವ್ಯಕ್ತಿತ್ವವನ್ನು ಹೊಂದಿದ್ದರು. ಸಂಸ್ಕøತ, ಕನ್ನಡ, ಇಂಗ್ಲಿಷ್ ಭಾಷೆಗಳಲ್ಲಿ ಅಸಾಧಾರಣ ಪಾಂಡಿತ್ಯವನ್ನು ಪಡೆದ ಅವರು, ಸಾಹಿತ್ಯ, ರಾಜಕೀಯ, ಪತ್ರಿಕೋದ್ಯಮ ಮತ್ತು ಸಾಮಾಜಿಕ ಕೇತ್ರ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸುಮಾರು ಏಳು ದಶಕಗಳಷ್ಟು ಸುಧೀರ್ಘಕಾಲ ಸೇವೆ ಸಲ್ಲಿಸಿದ್ದಾರೆ ಎಂದರು.
ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ, ಕಾರ್ಯದರ್ಶಿ ನಾಗೇಶ ತಿಮಾಜಿ ಬೆಳಮಗಿ ಮಾತನಾಡುತ್ತಾ, ಕನ್ನಡ ಸಾರಸತ್ವ ಲೋಕದ ಚಿರಕೃತಿ ಎಂದರೆ 'ಮಂಕುತಿಮ್ಮನ ಕಗ್ಗ'ವಾಗಿದೆ. ಈ ಗ್ರಂಥದ ಬಗ್ಗೆ ಕನ್ನಡಿಗರಿಗೆಲ್ಲ ಅಪಾರವಾದ ತುಂಬು ಹೃದಯದ ಅಭಿಮಾನವಿದೆ. ಪು.ತಿ.ನರಸಿಂಹಚಾರ್ಯ ಅವರು ಭಾವಗೀತೆ, ಗೀತನಾಟಕ, ಭಾವನಾ ಚಿತ್ರ, ರಸಚಿತ್ರ, ಸಂಗೀತರೂಪಕ, ಪ್ರಬಂಧ, ವಿಚಾರ ಸಾಹಿತ್ಯ, ಸಣ್ಣಕಥೆ, ಗದ್ಯನಾಟಕ, ಮಹಾಕಾವ್ಯ ಸೇರಿದಂತೆ ಹತ್ತು ಹಲವು ಪ್ರಕಾರದಲ್ಲಿ ಸಾಹಿತ್ಯ ಕೃಷಿ ಮಾಡುವ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಪಂಡಿತರಾಯ ಕಲಶೆಟ್ಟಿ, ಸಿದ್ದರಾಮ ಎಸ್.ಕಲಶೆಟ್ಟಿ, ಪ್ರೀತಿ ಶೀಲವಂತ, ಅಭಿಷೇಕ ಹಳಕೆ, ಕಿರಣ ಕಲ್ಲುರ, ಅನಿಲ ಕಲ್ಲಹಂಗರಗಾ, ಸರಸ್ವತಿ ಸುತಾರ, ಯಶೋಧ, ರಕ್ಷೀತಾ ಹಾಗೂ ಎರಡು ಕಾಲೇಜಿನ ವಿದ್ಯಾರ್ಥಿಗಳಿದ್ದರು.