ಬರವಣಿಗೆಗಳು ಸದಾ ಕಾಲ ಪ್ರಸ್ತುತ : ಗುತ್ತೇದಾರ

ಚಿತ್ತಾಪೂರ:ನ.13: ರವಿ ಬೆಳಗೆರೆ ಅವರ ಕಾಲವಾದರೂ ಕೂಡಾ ಅವರ ಬರವಣಿಗೆಗಳು ಸದಾ ಕಾಲ ಪ್ರಸ್ತುತವಾಗಿವೆ ಎಂದು ಪತ್ರಕರ್ತ ಕಾಶಿನಾಥ ಗುತ್ತೇದಾರ ಹೇಳಿದರು.

ಪಟ್ಟಣದ ಭುವನೇಶ್ವರಿ ವೃತ್ತದಲ್ಲಿ ರವಿ ಬೆಳಗೆರೆ ಅಭಿಮಾನಿ ಬಳಗ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ರಂಗದ ಭೀಷ್ಮ ದಿ.ರವಿ ಬೆಳಗೆರೆ ರವರ ದ್ವಿತೀಯ ಪುಣ್ಯ ಸ್ಮರಣೆ ನಿಮಿತ್ಯ ಅವರ ಭಾವಚಿತ್ರಕ್ಕೆ ಪುಸ್ಪನಮನ ಸಲ್ಲಿಸಿ ಶ್ರಮಜೀವಿಗಳಿಗೆ ಸಮವಸ್ತ್ರ ವಿತರಣೆ ಮಾಡಿ ಮಾತನಾಡಿದ ಅವರು ಅಸಂಖ್ಯಾತ ಕನ್ನಡಿಗರ ಮನದಲ್ಲಿ ಅಕ್ಷರದ ಮೂಲಕವೇ ರೋಮಾಂಚನ ಮೂಡಿಸಿದ ಪ್ರತಿಭೆಯಾಗಿದ್ದಾರೆ ಎಂದರು.

ರವಿ ಬೆಳಗೆರೆ ಅಭಿಮಾನಿಗಳ ಸಂಘದ ಅಧ್ಯಕ್ಷ ರವಿ ಇವಣಿ ಮಾತನಾಡಿ ರವಿ ಬೆಳಗೆರೆಯಂಥ ಮತ್ತೊಬ್ಬ ಶ್ರಮಿಕ ಪತ್ರಕರ್ತ, ಅಕ್ಷರ ಯೋಗಿ ಹುಟ್ಟಿಬರಲು ಸಾಧ್ಯವಿಲ್ಲ. ಕನ್ನಡ ಪತ್ರಿಕಾರಂಗ ಕಂಡ ಅತ್ಯಂತ ವರ್ಚಸ್ವಿ, ಡೈನಾಮಿಕ್ ಮತ್ತು ಮಾನವೀಯ ಸಂವೇದಿ ಪತ್ರಕರ್ತ ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ರವಿ ಬೆಳಗೆರೆ ಕೈಯಾಡಿಸದ ರಂಗವೂ ಇಲ್ಲ. ಉಪನ್ಯಾಸಕನಾಗಿ, ಪತ್ರಿಕೋದ್ಯಮಿಯಾಗಿ, ಬರಹಗಾರನಾಗಿ, ವಿಶೇಷ ಕಾರ್ಯಕ್ರಮಗಳ ನಿರೂಪಕನಾಗಿ, ಧಾರಾವಾಹಿ ನಿರ್ಮಾಪಕನಾಗಿ, ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬ ವ್ಯಕ್ತಿಯಾಗಿ ರವಿ ಬೆಳಗೆರೆಯಂತೆ ಆವರಿಸಿಕೊಂಡ ವ್ಯಕ್ತಿಯನ್ನು ಹುಡುಕುವುದು ಕಷ್ಟವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಆನಂದ ನರಬೋಳಿ, ಕರವೇ ಜಿಲ್ಲಾಧ್ಯಕ್ಷ ಮಹೇಶ ಕಾಶಿ, ಪತ್ರಕರ್ತ ಕಾಶಿನಾಥ ಗುತ್ತೇದಾರ್, ರವೀಂದ್ರ ಸಜ್ಜನಶೆಟ್ಟಿ, ಕೋಟೇಶ್ವರ ರೇಷ್ಮೆ, ಬಾಬು ಕಾಶಿ, ನಾಗರಾಜ ಗುಂಡಗುರ್ತಿ, ಬಸವರಾಜ ಮಡಿವಾಳ, ಶರಣು ಯಾಧವ್, ನಾಗಣ್ಣ ಹಡಪದ ಸಾತನೂರ, ಮಹ್ಮದ ಯುನುಸ್, ಪ್ರಭು ಗಂಗಾಣಿ, ಪತ್ರಕರ್ತರಾದ ರವಿಶಂಕರ ಬುರ್ಲಿ, ಎಂ.ಡಿ ಮಶಾಖ್, ಜಗದೇವ ಕುಂಬಾರ, ಸಂತೋಷ ಕಟ್ಟಿಮನಿ, ಅನಂದ ರೆಡ್ಡಿ, ಪೃಥ್ವಿರಾಜ ಸಾಗರ, ಸೇರಿದಂತೆ ಇತರರು ಇದ್ದರು.