
ನವಲಗುಂದ,ನ.8: ಅಂತರಾಷ್ಟ್ರೀಯ ಜಲ ತಜ್ಞ ನೀರಿನ ಗಾಂಧಿ ಎಂದೇ ಹೆಸರಾಗಿರುವ ವಿಶ್ವಸಂಸ್ಥೆಯ ಬರ ಮತ್ತು ನೆರೆ ಅಧ್ಯಯನ ಸಮಿತಿಯ ಚೇರಮನ್ ಡಾ: ರಾಜೇಂದ್ರ ಸಿಂಗ್ ಅವರು ನವಲಗುಂದ ಮತಕ್ಷೇತ್ರಕ್ಕೆ ಭೇಟಿ ನೀಡಿ ನಮ್ಮ ಹೊಲ ನಮ್ಮ ರಸ್ತೆ ಮಾದರಿಯಲ್ಲಿ ನಿರ್ಮಾಣವಾಗುತ್ತಿರುವ ರಸ್ತೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಎನ್.ಹೆಚ್. ಕೋನರಡ್ಡಿ ಅವರು ರಾಜೇಂದ್ರ ಸಿಂಗ್ ಅವರಿಗೆ ಕ್ಷೇತ್ರದ ಪಡೆಸೂರ, ತಿರ್ಲಾಪುರ ಸೇರಿ ಎಲ್ಲ ಚಕ್ಕಡಿ ರಸ್ತೆಗಳನ್ನು ತೋರಿಸಿ ಇದಕ್ಕೆ ಸ್ಥಳೀಯ ಮೊರಂ ಮತ್ತು ಅದಕ್ಕೆ ಬೇಕಾಗುವ ಎಲ್ಲ ಸಾಮಗ್ರಿಗಳನ್ನು ಸ್ಥಳೀಯವಾಗಿಯೇ ಉಪಯೋಗಿಸಲಾಗುತ್ತಿದೆ. ಟೆಂಡರ್ ಹಾಗೂ ಇನ್ನಿತರ ಸಮೀಕ್ಷೆ ಯಾವುದೇ ತರಹದ ರೈತರ ಸಹಭಾಗಿತ್ವದೊಂದಿಗೆ ಜನರ ಸಹಕಾರದೊಂದಿಗೆ ಈ ಕೆಲಸ ನಡೆಯುತ್ತಿದೆ ಎಂದು ವಿವರಿಸಿದರು.
5 ವರ್ಷಗಳ ಅವಧಿಯಲ್ಲಿ 500 ಕಿ.ಮೀ. ರೈತರ ಹೊಲಗಳಿಗೆ ರಸ್ತೆ ನಿರ್ಮಿಸುವ ಉದ್ದೇಶ ಹೊಂದಲಾಗಿದ್ದು ಈಗಾಗಲೇ 110 ಕಿ.ಮೀ. ಗೂ ಹೆಚ್ಚು ರಸ್ತೆಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು. ಇದಕ್ಕೆ ರಾಜೇಂದ್ರ ಸಿಂಗ್ ಅವರು ಸಂತಸ ವ್ಯಕ್ತಪಡಿಸಿ ರೈತರ ಸಹಭಾಗಿತ್ವ ಇದ್ದರೆ ಇಂತಹ ಮಾದರಿ ಕೆಲಸಗಳು ಆಗುತ್ತವೆ ಎಂದು ಉದಹರಣೆಯೊಂದಿಗೆ ವಿವರಿಸಿದರು.
ರಸ್ತೆ ಮತ್ತು ನೀರು ರೈತರಿಗೆ ಅತ್ಯಂತ ಅವಶ್ಯಕವಾಗಿ ಪ್ರತಿ ಹಂತದಲ್ಲಿಯೂ ಜೊತೆಗಾರನಾಗಿರುತ್ತದೆ. ಇವೆರಡು ಇದ್ದರೆ ಅಲ್ಲಿಯ ರೈತರು ಸಮೃದ್ಧಿಯನ್ನು ಕಾಣುತ್ತಾರೆ. ಆ ಕೆಲಸ ಇಲ್ಲಿ ನಡೆಯುತ್ತಿವೆ, ಬರಲಿರುವ ದಿನಗಳಲ್ಲಿ ಇಂತಹ ರಚನಾತ್ಮಕ ಕೆಲಸಗಳು ನಡೆದು ಬರ ಮುಕ್ತ ಪ್ರದೇಶವನ್ನಾಗಿ ಮಾಡುತ್ತೀರಿ ಎಂದು ನನಗೆ ವಿಶ್ವಾಸವಿದೆ ಎಂದರು.
ಈ ಕಾರ್ಯಕ್ಕೆ ರಾಜೇಂದ್ರ ಸಿಂಗ್ ಅವರು ಮೆಚ್ಚುಗೆ ವ್ಯಕ್ತಪಡಿಸಿ ಬರುವ ದಿನಗಳಲ್ಲಿ ನವಲಗುಂದ ಕ್ಷೇತ್ರವನ್ನು ಬರ ಮುಕ್ತ ಕ್ಷೇತ್ರವನ್ನಾಗಿಸಲು ಪ್ರತಿಜ್ಞೆ ತೊಡಬೇಕೆಂದು ಹೇಳಿದಾಗ ನೆರೆದ ರೈತರಿಗೆ ಹಾಗೂ ಶಾಸಕ ಎನ್.ಹೆಚ್. ಕೋನರಡ್ಡಿ ಅವರಿಗೆ ರಾಜೇಂದ್ರ ಸಿಂಗ್ ಅವರು ಪ್ರತಿಜ್ಞೆ ಬೋಧಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸಿ.ಇ.ಓ. ಸ್ವರೂಪ ಟಿ.ಕೆ., ತಹಶೀಲ್ದಾರ ಸುಧೀರ್ ಸಾವಕಾರ, ತಾ.ಪಂ. ಇಓ ಭ್ಯಾಗ್ಯಶ್ರೀ ಜಾಗೀರದಾರ, ಮುಖಂಡರುಗಳಾದ ಬಸವರಾಜ ಆಕಳದ, ಸಿದ್ದಪ್ಪ ಮರಿಸಿದ್ದಣ್ಣವರ, ಬಾಬು ಕಾಲವಾಡ, ಹೇಮಣ್ಣ ಕುರ್ಲಗೇರಿ, ಎಂ.ಎಸ್. ರೋಣದ, ರಮೇಶ ನವಲಗುಂದ, ಯಶವಂತಗೌಡ ಪಾಟೀಲ, ಭೀಮರಡ್ಡಿ ಈರಡ್ಡಿ, ಶಿವಪ್ಪ ಅಮ್ಮಿನಭಾವಿ, ಅಡಿವೆಪ್ಪ ಮಂದಲ, ಮಂಜು ಮಡಿವಾಳರ, ಹುಸೇನಸಾಬ ಹಿರೇಹೊಳಿ, ಫಕ್ಕೀರಗೌಡ ಧರ್ಮಗೌಡರ, ಶೇಖಪ್ಪ ಹೊರಕೇರಿ, ಮುತ್ತಪ್ಪ ದೊಡ್ಡಮನಿ, ಸಿ.ಡಿ. ಅಣ್ಣಿಗೇರಿ, ವಾಯ್.ಎಸ್. ನವಲಗುಂದ, ರಾಜು ಮಂಕಣಿ, ಬಿ.ಸಿ. ಹೆಬಸೂರ, ಆರ್.ಎಲ್. ಮಂಕಣಿ ಹಾಗೂ ನೀರಾವರಿ, ಕೆ.ಆರ್.ಐ.ಡಿ.ಎಲ್ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.