ಬರಪೀಡಿತ ಪ್ರದೇಶ ಘೋಷಣೆಗೆ ಮಾನದಂಡ ತಿದ್ದುಪಡಿ ಕೇಂದ್ರಕ್ಕೆ ಪತ್ರ

ಬೆಂಗಳೂರು, ಜು. ೨೧- ಬರ ಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಲು ಕೇಂದ್ರ ಸರ್ಕಾರ ನಿಗದಿ ಮಾಡಿರುವ ಮಾನದಂಡಗಳನ್ನು ಬದಲಾಯಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪತ್ರ ಬರೆಯಲಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ವಿಧಾನಸಭೆಯಲ್ಲಿಂದು ಹೇಳಿದರು.
ಮಳೆ ಕೊರತೆಯಿಂದ ರಾಜ್ಯದ ಹಲವು ಭಾಗಗಳಲ್ಲಿ ಬರದ ಛಾಯೆ ಆವರಿಸಿ ಕುಡಿಯುವ ನೀರಿನ ಕೊರತೆ ಉಂಟಾಗಿರುವ ಬಗ್ಗೆ ನಿಯಮ-೬೯ ರಡಿಯಲ್ಲಿ ನಡೆದ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರ ನೀಡಿದ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಬರ ಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಲು ಕೇಂದ್ರ ಸರ್ಕಾರ ನಿಗದಿ ಮಾಡಿರುವ ಮಾನದಂಡಗಳಂತೆ ಸತತ ೩ ವಾರ ಮಳೆಯಾಗಿರಬಾರದು. ಜತೆಗೆ ಶೇ. ೬೦ ರಷ್ಟು ಮಳೆ ಆಗಿರಬೇಕು. ಹಾಗೆಯೇ ಮುಂಗಾರು ಮಳೆ ಕೊರತೆಯಿಂದ ಬರ ಪೀಡಿತ ಪ್ರದೇಶ ಎಂದು ಘೋಷಣೆಯನ್ನು ಅಕ್ಟೋಬರ್‌ನಲ್ಲಿ ಮಾಡಬೇಕು ಎಂಬ ಮಾನದಂಡಗಳಿವೆ. ಈ ಪ್ರಕಾರ ಹೋದರೆ ರಾಜ್ಯದ ಬರ ಪೀಡಿತ ಪ್ರದೇಶಗಳ ಘೋಷಣೆ ಸಾಧ್ಯವಿಲ್ಲ. ಒಂದು ವೇಳೆ ಮಾನದಂಡ ಲೆಕ್ಕಕ್ಕೆ ತೆಗೆದುಕೊಳ್ಳದೆ ಬರ ಪೀಡಿತ ಪ್ರದೇಶದ ಘೋಷಣೆಯನ್ನು ರಾಜ್ಯ ಸರ್ಕಾರ ಮಾಡಿದರೆ ಬರ ಪರಿಹಾರ ಅನುದಾನಗಳು ಸಿಗುವುದಿಲ್ಲ. ಹೀಗಾಗಿ ಬರ ಘೋಷಣೆಯ ಮಾನದಂಡಗಳನ್ನು ಬದಲಾಯಿಸುವಂತೆ ಕೇಂದ್ರಕ್ಕೆ ಪತ್ರ ಬರೆಯಲಾಗುವುದು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಈಗಾಗಲೇ ನಾನು ಈ ವಿಚಾರ ಚರ್ಚೆ ಮಾಡಿದ್ದೇನೆ. ಪತ್ರವನ್ನು ಸಿದ್ದ ಮಾಡಿದ್ದೇವೆ. ಇನ್ನೆರಡು ದಿನಗಳಲ್ಲೇ ಬರ ಘೋಷಣೆಯ ಮಾನದಂಡಗಳನ್ನು ಬದಲಾಯಿಸುವಂತೆ ಕೇಂದ್ರಕ್ಕೆ ಪತ್ರ ಬರೆಯುತ್ತೇವೆ ಎಂದರು.
ಕೇಂದ್ರ ಸರ್ಕಾರ ಬರ ಪೀಡಿತ ಪ್ರದೇಶಗಳ ಘೋಷಣೆ ಸಂಬಂಧ ೨೦೧೬ ರಲ್ಲಿ ಮಾನದಂಡಗಳನ್ನು ನಿಗದಿ ಮಾಡಿದೆ. ಈ ಪ್ರಕಾರ ತೀವ್ರ ಗಂಭೀರ ಹಾಗೂ ಮಾಡರೇಟ್ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲು ಅವಕಾಶವಿದೆ. ಆದರೆ ಮಾಡರೇಟ್ ಎಂದು ಘೋಷಣೆ ಮಾಡಿದರೆ ಕೇಂದ್ರದಿಂದ ಹಣ ಬರಲ್ಲ. ಒಂದು ವೇಳೆ ಕೇಂದ್ರದ ಮಾನದಂಡಗಳನ್ನು ಪಾಲಿಸಿದರೆ ರಾಜ್ಯದಲ್ಲಿ ಬರದಿಂದ ತೊಂದರೆಗೆ ಒಳಗಾಗಿರುವ ಜನರ ನೆರವಿಗೆ ಧಾವಿಸಲು ಸಾಧ್ಯವಿಲ್ಲ. ಜನರಿಗೆ ಅನ್ಯಾಯವಾಗುತ್ತದೆ. ಹಾಗಾಗಿ ಕೇಂದ್ರದ ಮಾನದಂಡಗಳನ್ನು ಬದಲಾವಣೆ ಮಾಡುವಂತೆ ಪತ್ರ ಬರೆಯುವ ತೀರ್ಮಾನ ಮಾಡಿದ್ದೇವೆ. ತಳಮಟ್ಟದ ವಾಸ್ತವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬರ ಘೋಷಣೆಯ ಮಾನದಂಡಗಳನ್ನು ಸರಳೀಕರಣಗೊಳಿಸಿ ಎಂದು ಕೇಂದ್ರಕ್ಕೆ ಮುಖ್ಯಮಂತ್ರಿಗಳು ಒಂದೆರಡು ದಿನಗಳಲ್ಲೇ ಪತ್ರ ಬರೆಯಲಿದ್ದಾರೆ ಎಂದು ಅವರು ಹೇಳಿದರು.
ವಸ್ತುಸ್ಥಿತಿಗೆ ಹತ್ತಿರ ಇರುವ ಮಾನದಂಡಗಳನ್ನು ನಿಗದಿ ಮಾಡುವಂತೆಯೂ ಈ ಪತ್ರದಲ್ಲಿ ಕೇಂದ್ರಕ್ಕೆ ಒತ್ತಾಯಿಸುವುದಾಗಿ ಅವರು ಹೇಳಿದರು.