ಬರಪೀಡಿತ ಜಿಲ್ಲೆ ಘೋಷಣೆ-ಪ್ರತಿಭಟನೆಗೆ ನಿರ್ಧಾರ

ಮುಳಬಾಗಿಲು.ಆ೧೮:ಕೋಲಾರ ಜಿಲ್ಲೆಯಲ್ಲಿ ಬರಪೀಡಿತ ಜಿಲ್ಲೆಯೆಂದು ಘೋಷಣೆ ಮಾಡಿ ಬರನಿರ್ವಹಣೆಗೆ ಸಾವಿರ ಕೋಟಿ ಅನುದಾನವನ್ನು ಬಿಡುಗಡೆ ಮಾಡಿ ಪ್ರತಿ ಪಂಚಾಯ್ತಿಗೊಂದು ಗೋಶಾಲೆ ತೆರೆಯಬೇಕೆಂದು ಮುಖ್ಯ ಮಂತ್ರಿಗಳನ್ನು ಒತ್ತಾಯಿಸಿ ಆ-೨೧ ರ ಸೋಮವಾರ ಜಾನುವಾರುಗಳ ಸಮೇತ ರಾಜ್ಯದ ಗಡಿಭಾಗದ ಹೆದ್ದಾರಿ ವಡ್ಡಹಳ್ಳಿ ಕ್ರಾಸ್ ಬಂದ್ ಮಾಡಲು ಪ್ರವಾಸಿ ಮಂದಿರದಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಮುಂಗಾರು ಮಳೆ ನಿರೀಕ್ಷೆಯಲ್ಲಿದ್ದ ರೈತರು ಕೃಷಿ ಚಟುವಟಿಕೆಗೆ ಬಿತ್ತನೆ ಬೀಜ ರಸಗೊಬ್ಬರಗಳು ಖರೀದಿ ಮಾಡಿ ಕಾತುರದಿಂದ ಕಾಯುತ್ತಿರುವ ರೈತರ ಮೇಲೆ ವರುಣನ ಕೋಪ ಹೆಚ್ಚಾಗಿದೆ. ಇತ್ತ ಬೆಳೆಯು ಇಲ್ಲ ಅತ್ತ ಮಳೆಯು ಇಲ್ಲದೆ ನೊಂದ ೧೮ ರೈತರು ಹಾವೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರೂ ರಾಜ್ಯ ಸರ್ಕಾರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲವೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಸರ್ಕಾರಗಳ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ಮುಂಗಾರು ಮಳೆ ಪ್ರಾರಂಭವಾಗಿ ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿದ್ದ ರೈತಾಪಿ ವರ್ಗಕ್ಕೆ ಬರಸಿಡಲು ಬಡಿದಂತಾಗಿದೆ. ಬಿತ್ತನೆ ಮಾಡಿರುವ ರಾಗಿ, ನೆಲಗಡಲೆಗೆ ಮಳೆ ಇಲ್ಲದೆ ಶೇಕಡ ೨೫ ರಷ್ಟು ನಷ್ಟವಾದರೆ ಇನ್ನು ೭೫ ರಷ್ಟು ಬಿತ್ತನೆ ಮಾಡಲು ಮುಂದಾಗಿರುವ ರೈತರು ಆಕಾಶದತ್ತ ನೋಡುವಂತಾಗಿದೆ. ಆದರೂ ವರುಣನ ಕೃಪೆ ಜಿಲ್ಲೆಯ ಮೇಲೆ ಬೀಳದೆ ಕೆರೆ ಕುಂಟೆಗಳಲ್ಲಿ ನೀರು ಬತ್ತಿಹೋಗುತ್ತಿದ್ದು, ಮುಂದಿನ ಪರಿಸ್ಥಿತಿಯನ್ನು ಊಹೆ ಮಾಡಿಕೊಳ್ಳಲು ಸಾಧ್ಯವಾಗದ ಮಟ್ಟಕ್ಕೆ ವ್ಯವಸ್ಥೆ ಹದಗೆಟ್ಟಿದ್ದರೂ ಸರ್ಕಾರಗಳು ಜಿಲ್ಲೆಯಲ್ಲಿ ಕಾಡುತ್ತಿರುವ ಬರಗಾಲವನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ವಿಪಲವಾಗಿದೆ ಎಂದು ಕಿಡಿಕಾರಿದರು.
ಪ್ರಕೃತಿ ವಿಕೋಪ ನಕಲಿ ಔಷಧಿ ಬಿತ್ತನೆ ಬೀಜದಿಂದ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದಿರುವ ಬೆಳೆ ನಷ್ಟವಾಗಿ ಸಾಲದ ಸುಳಿಗೆ ಸಿಲುಕಿರುವ ರೈತನ ಹಣೆ ಬರಹದ ಜೊತೆ ಮುಂಗಾರು ಮಳೆ ಚಲ್ಲಾಟವಾಡುತ್ತಿದೆ. ಇತ್ತ ಬೆಳೆಯೂ ಇಲ್ಲ, ಅತ್ತ ಸಾಕುತ್ತಿರುವ ಜಾನುವಾರುಗಳಿಗೆ ಮೇವಿನ ಆಹಾಕಾರ ಉದ್ಭವಿಸುರುವುದರಿಂದ ಮುಂದಿನ ಜೀವನ ಹೇಗೆ ಎಂಬುದು ರೈತರ ಚಿಂತೆಯಾಗಿದೆ. ಜಿಲ್ಲೆಯಲ್ಲಿರುವ ಜನ ಪ್ರತಿನಿಧಿಗಳು ಜಿಲ್ಲೆಯ ವಾಸ್ತುವಾವಂಶ ಸರ್ಕಾರದ ಗಮನಕ್ಕೆ ತರುವಲ್ಲಿ ವಿಫಲವಾಗಿದ್ದಾರೆಂದು ಜನ ಪ್ರತಿನಿಧಿಗಳ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಪಾರುಕ್‌ಪಾಷ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಮಹಿಳಾ ಜಿಲ್ಲಾಧ್ಯಕ್ಷ ಎ.ನಳಿನಿಗೌಡ, ಹೆಬ್ಬಣಿ ಆನಂದರೆಡ್ಡಿ, ವಿಜಯ್‌ಪಾಲ್, ಮಾಲೂರು ತಾಲ್ಲೂಕು ಅಧ್ಯಕ್ಷ ಯಲ್ಲಣ್ಣ, ಹರೀಶ್, ವಕ್ಕಲೇರಿ ಹನುಮಯ್ಯ, ಕೇಶವ, ಮಂಗಸಂದ್ರ ತಿಮ್ಮಣ್ಣ, ಕುವಣ್ಣ, ವಿಶ್ವ, ಮುನಿರಾಜು, ಮುನಿಕೃಷ್ಣ, ಕದರಿನತ್ತ ಅಪ್ಪೋಜಿರಾವ್, ರಾಮಸಾಗರ ವೇಣು, ಸುರೇಶ್‌ಬಾಬು, ಪಾರಂಡಹಳ್ಳಿ ಮಂಜುನಾಥ., ನಾಗಭೂಷಣ್, ತೆರ್‍ನಹಳ್ಳಿ ಆಂಜಿನಪ್ಪ, ಚಂದ್ರಪ್ಪ, ಯಾರಂಘಟ್ಟ ಗಿರೀಶ್, ನರಸಿಂಹಯ್ಯ, ನಾರಾಯಣಗೌಡ, ವೆಂಕಟೇಶಪ್ಪ, ಮುಂತಾದವರು ಇದ್ದರು.