(ಸಂಜೆವಾಣಿ ವಾರ್ತೆ)
ಚನ್ನಮ್ಮನ ಕಿತ್ತೂರ,ಜು.4: ಮಳೆ ಇಲ್ಲದೇ ಫಸಲು ಇಲ್ಲಾ, ಫಸಲು ಇಲ್ಲದೇ ರೈತ ಇಲ್ಲ ರೈತನಿಲ್ಲದೇ ಬದುಕಬಹುದೇ..? ಆಹಾರವಿಲ್ಲದೇ ಜೀವನ ಊಹಿಸಬಹುದೇ..? ಅಕ್ಷರಶ: ಸಾಧ್ಯವಿಲ್ಲವೆಂದು. ಸ್ವಾಭಿಮಾನಿ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೀರಪ್ಪ ದೇಶನೂರ ಹೇಳಿದರು.
ಬೆಳಗಾವಿಯಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು. ಭೂಮಿಯ ಮೇಲಿನ ಗಿಡ, ಮರ, ಮೋಡ ದೇವರುಗಳಿಂದ ಆಮ್ಲಜನಕ ಮತ್ತು ನೀರನ್ನು ಉತ್ಪಾದಿಸಿದರೆ, ಆಹಾರವನ್ನು ನಮ್ಮ ಜೀವಂತ ದೇವರು ಅನ್ನದಾತ ಉತ್ಪಾದಿಸುತ್ತಾನೆ. ಅಂತಹ ರೈತನಿಗೆ ಇಂದು ಮಳೆ ಕೈಕೊಟ್ಟದ್ದರಿಂದ ಕಂಗಾಲಾಗಿದ್ದಾನೆ. ಸಾಲಸೋಲ ಮಾಡಿ ಬೀಜ ರಸಗೊಬ್ಬರ ಖರೀದಿಸಿ ಭೂಮಿ ಹದಗೊಳಿಸಿ ಬಿತ್ತಿದ ಬೆಳೆ ಕಮರುತ್ತಿದೆ. ಆದ್ದರಿಂದ ತಕ್ಷಣ ಸರ್ಕಾರ ರೈತರ ನೆರವಿಗೆ ಮುಂದಾಗಿ ಜಿಲ್ಲೆಯನ್ನು ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿ. ರಾಜ್ಯ ಮತ್ತು ಕೇಂದ್ರಗಳಲ್ಲಿಯ ಬ್ಯಾಂಕುಗಳಲ್ಲಿನ ಸಾಲ ಮನ್ನಾ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಸ್ವಾಭಿಮಾನಿ ರಾಜ್ಯ ರೈತ ಸಂಘದ ಅಧ್ಯಕ್ಷ ಶಿವನಸಿಂಗ ಮೊಕಾಶಿ ಮಾತನಾಡಿ ರೈತರು ಬೆಳೆಗಳನ್ನು ಬೆಳೆಯಲು ಮಾಡಿದ ಸಾಲ ತೀರಿಸಲಾಗದೇ ಅಸಹಾಯಕನಾಗಿದ್ದಾರÉ. ಮಳೆ ಬರದಿದ್ದರೇ ಬಿತ್ತಿದ ಬೀಜ ಮೊಳಕೆ ಒಡೆಯುವುದಿಲ್ಲ. ಮೊಳಕೆ ಒಡೆದರೂ ಕಮರುತ್ತಿವೆ. ಸೋಯಾಬಿನ್, ಹತ್ತಿ ಹಾಗೂ ದ್ವಿಧಳ ಧಾನ್ಯ, ಕಬ್ಬು, ಭತ್ತದ ಬೆಳೆ ನಾಶ ಹೊಂದಿವೆ. ಬಿತ್ತನೆಗೆ ಸಾಕಷ್ಟು ಹಣ ಸಾಲ ತಂದು ರೈತರು ಖರ್ಚು ಮಾಡಿದ್ದಾರೆ. ರೈತರು ಮಳೆ ಬಾರದೇ ಕಂಗಾಲಾಗಿದ್ದಾರೆ. ಸಕ್ಕರೆ ಕಾರ್ಖಾನೆಗಳಿಗೆ ರೈತರು ಕಬ್ಬು ಪೂರೈಸಿ ಹಲವು ವರ್ಷಗಳು ಕಳೆದರು ಕೆಲವು ಕಾರ್ಖಾನೆಗಳು ಬಿಲ್ಲು ನೀಡಿಲ್ಲ. ಅದಕ್ಕಾಗಿ ಆದಷ್ಟು ಬೇಗನೆ ಸರ್ಕಾರ ಈ ಕಡೆ ಗಮನ ಹರಿಸಬೇಕೆಂದು ಬೆಳಗಾವಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿ, ಕೃಷಿ ಸಚಿವರಿಗೆ ಮನವಿ ಮಾಡಿಕೊಂಡರು.
ಈ ವೇಳೆ ರೈತ ಮುಖಂಡರುಗಳಾದ ಮಾರುತಿ ಕಮತಗಿ, ರಾಜು ತೊಲಗಿ, ಮಹಾಂತೇಶ ಬೋಗೂರ, ಶಿವಾನಂದ ಜ್ಯೋತಿ, ಅಶೋಕ ಕಳಸಣ್ಣವರ, ಭೀಮಪ್ಪ ಸವಟಗಿ, ನಾಗೇಶ ಸುಳೇಭಾವಿ, ವಿಶ್ವನಾಥ ಹಿಟ್ಟಿನ, ಈಶ್ವರ ಬೀಡಿ, ವೆಂಕನಗೌಡ ಪಾಟೀಲ, ಮಲ್ಲಿಕಾರ್ಜುನ ಜುಟ್ಟನವರ, ಬಸವರಾಜ ಹೊಸಮನಿ, ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.