ಪ್ಯಾರಿಸ್ (ಫ್ರಾನ್ಸ್), ಮಾ.೩೧- ಬರೊಬ್ಬರಿ ೧೪೦೦ ಎಕರೆ ಪ್ರದೇಶದಲ್ಲಿ ವಿಸ್ತಾರವಾಗಿ ಹರಡಿಕೊಂಡು, ಜಗತ್ತಿನ ಪ್ರವಾಸಿಗರು ಹಾಗೂ ವನ್ಯಜೀವಿಗಳನ್ನು ಆಕರ್ಷಿಸಿ, ಎಲ್ಲರ ಆಶ್ರಯ ತಾಣವಾಗಿ, ಒಂದು ಸಮಯದಲ್ಲಿ ತನ್ನ ಸಂಪೂರ್ಣ ಸಾಮರ್ಥ್ಯದಿಂದ ತುಂಬಿ ತುಳುಕುತ್ತಿದ್ದ ಮೊಂಟ್ಬೆಲ್ ಸರೋವರ ಇದೀಗ ಬಹುತೇಕ ಬತ್ತಿಹೋಗಿದೆ. ಕೇವಲ ಫ್ರಾನ್ಸ್ ಅಲ್ಲದೆ ಸದ್ಯ ಯುರೋಪ್‌ನ ಹೆಚ್ಚಿನ ಕಡೆಗಳಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಗಿದ್ದು, ಆತಂಕ ಮೂಡಿಸಿದೆ.
ಆರು ದಶಕಗಳ ಬಳಿಕ ಯುರೋಪ್‌ನಲ್ಲಿ ಸದ್ಯ ಬರದ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೆಚ್ಚಿನ ಕೆರೆ-ತೊರೆಗಳು ಸೇರಿದಂತೆ ಸರೋವರಗಳು ನಿಧಾನವಾಗಿ ಬತ್ತಲು ಆರಂಭಿಸಿವೆ. ಅದರಲ್ಲೂ ಅತ್ಯದ್ಬುತ ಪ್ರವಾಸಿ ತಾಣಗಳು, ಹಿಮಚ್ಛಾದಿತ ಬೆಟ್ಟ-ಗುಡ್ಡಗಳನ್ನು ಹೊಂದಿರುವ ಫ್ರಾನ್ಸ್‌ನ ನೈಋತ್ಯ ಭಾಗದಲ್ಲಿನ ಪೈರಿನೀಸ್‌ನಲ್ಲಿರುವ ಮೊಂಟ್ಬೆಲ್ ಸರೋವರ ಇದೀಗ ಬಹುತೇಕ ಬತ್ತಿಹೋಗಿದೆ. ಸಹಜವಾಗಿಯೇ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಈ ಸರೋವರದತ್ತ ಬರುವ ಪ್ರವಾಸಿಗರು ಹಾಗೂ ನೀರಿನ ಮೂಲ ಹುಡುಕಿಕೊಂಡು ಬರುವ ವನ್ಯಜೀವಿಗಳಿಗೆ ಆಘಾತದ ಜೊತೆಗೆ ಪ್ರಾಣಿ-ಪಕ್ಷಿಗಳ ಇರುವಿಕೆಗೆ ಸಂಚಕಾರ ತಂದಿದೆ. ವನ್ಯಜೀವಿಗಳ ಪಾಲಿಗೆ ಸ್ವರ್ಗ, ರೈತರಿಗೆ ನೀರಾವರಿ ಮತ್ತು ಸ್ಥಳೀಯ ನದಿಗಳಿಗೆ ನೀರಿನ ಮೂಲ ಮತ್ತು ಪ್ರವಾಸಿಗಳ ಪಾಲಿಗೆ ರಮಣೀಯ ತಾಣದಂತಿದ್ದ ಇಲ್ಲಿನ ಪ್ರದೇಶ ಇದೀಗ ಬರದ ನಾಡಿನಂದಿದೆ. ಕುಗ್ಗಿದ ನೀರಿನ ಮಟ್ಟಗಳು, ನೆಲಸಮಕ್ಕೆ ಬಿದ್ದುಕೊಂಡಿರುವ ದೋಣಿಗಳು, ಸರೋವರದ ತಳದ ಬಿರುಕು ಬಿಟ್ಟ ಭೂಮಿಯ ಮೇಲೆ ತಂಗಿರುವ ನೀರಿನ ಮಟ್ಟ ಅಳೆಯುವ ಉಪಕರಣಗಳು ಹೀಗೆ ಸದ್ಯ ಮೊಂಟ್ಬೆಲ್ ಸರೋವರದ ಪ್ರಸ್ತುತ ನೋಟಗಳು ಸುಡುವ ಬೇಸಿಗೆಯ ಕೊನೆಯಲ್ಲಿ ನಿರೀಕ್ಷಿಸಬಹುದಾದುದನ್ನು ಹೆಚ್ಚು ನೆನಪಿಸುತ್ತದೆ. ಸದ್ಯ ಮೊಂಟ್ಬೆಲ್ ಸರೋವರದ ಸಾಮರ್ಥ್ಯದ ಸುಮಾರು ೨೮ ಪ್ರತಿಶತ ನೀರಿನ ಮಟ್ಟದಲ್ಲಿದೆ. ಅದರಲ್ಲೂ ವರ್ಷದ ಈ ಸಮಯದಲ್ಲಿರುವ ನೀರಿನ ಮಟ್ಟಕ್ಕಿಂತ ಸದ್ಯ ಅರ್ಧಕ್ಕಿಂತ ಕಡಿಮೆಯಾಗಿದ್ದು, ಸದ್ಯದ ಹೀನ ಪರಿಸ್ಥಿತಿಗೆ ಕನ್ನಡಿ ಹಿಡಿದಂತಿದೆ. ಪ್ರಕೃತಿ ತಾಣ ಹಾಗೂ ಪ್ರೇಕ್ಷಣೀಯ ತಾಣಗಳಿಗೆ ಹೆಸರಾಗಿರುವ ಯುರೋಪ್‌ನ ಬಹುತೇಕ ಹೆಚ್ಚಿನ ಕಡೆಗಳಲ್ಲಿ ಇದೇ ಪರಿಸ್ಥಿತಿ ಇದೆ ಎನ್ನಲಾಗಿದೆ. ಕಂಡು ಕೇಳರಿಯದ ಬರದ ಪರಿಸ್ಥಿತಿಯಲ್ಲಿರುವ ಇಲ್ಲಿ ಹೆಚ್ಚಿನ ಕಡೆಗಳಲ್ಲಿ ಸರೋವರಗಳ ಸ್ಥಿತಿ ಇದೇ ರೀತಿಯಲ್ಲಿದೆ. ಇನ್ನು ಅತ್ತ ಅಮೆರಿಕಾದಲ್ಲಿ ಸುಡುಬಿಸಿಲಿನ ನಾಡು ಕ್ಯಾಲಿಫೋರ್ನಿಯಾದ ಪರಿಸ್ಥಿತಿ ಕೊಂಚ ಭಿನ್ನವಾಗಿದೆ. ಅಲ್ಲಿ ಪ್ರಸಕ್ತ ವರ್ಷದ ಭಾರೀ ಮಳೆ ಹಾಗೂ ಹಿಮ ಕರಗಿರುವ ಹಿನ್ನೆಲೆಯಲ್ಲಿ ಜಲಾಶಯಗಳು ತುಂಬಿವೆ. ಹಾಗಾಗಿ ಬರದ ಪರಿಸ್ಥಿತಿ ನಿವಾರಣೆಯಾದಂತಾಗಿದೆ. ಒಟ್ಟಿನಲ್ಲಿ ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂದೊಂದು ದಿನ ಕೆರೆ-ಸರೋವರಗಳು ಸಂಪೂರ್ಣವಾಗಿ ಬತ್ತುವುದರಲ್ಲಿ ಯಾವುದೇ ಅನುಮಾನವಿಲ್ಲ.