ಬರದ ಛಾಯೆ ನಡುವೆಯೂ ಸಡಗರದ ದಸರಾ

(ಸಂಜೆವಾಣಿ ವಾರ್ತೆ)
ನವಲಗುಂದ,ಅ25 : ಪಟ್ಟಣ ಹಾಗೂ ಗ್ರಾಮೀಣ ಪ್ರದೇಶ ಸೇರಿದಂತೆ ತಾಲ್ಲೂಕಿನಾದ್ಯಂತ ನಾಡಹಬ್ಬ ದಸರಾ ಸಡಗರ ಮನೆ ಮಾಡಿತ್ತು. ಬರದ ಛಾಯೆಯ ನಡುವೆಯೂ ರೈತ ಕುಟುಂಬದವರು ಸಾಂಪ್ರದಾಯಿಕ ಆಚರಣೆ ಮೂಲಕ ಸೋಮವಾರ ಆಯುಧ ಪೂಜೆ ಮತ್ತು ಮಂಗಳವಾರ ವಿಜಯದಶಮಿ ಹಬ್ಬ ಆಚರಿಸಲಾಯಿತು.
ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಅನ್ನದಾತ ಈ ವರ್ಷ ಸಂಕಷ್ಟದಲ್ಲಿದ್ದಾನೆ. ಈ ನಡುವೆ ತಾಲೂಕನ್ನು ಬರ ಪಟ್ಟಿಗೆ ಸೇರಿಸಲಾಗಿದೆ. ಹಾಗಾಗಿ, ಪ್ರತಿ ವರ್ಷದಂತೆ ಈ ಬಾರಿ ಪಟ್ಟಣವು ಸೇರಿ ಗ್ರಾಮೀಣ ಪ್ರದೇಶದಲ್ಲಿ ಅದ್ಧೂರಿ ಆಚರಣೆ ಕಂಡುಬರಲಿಲ್ಲವಾದರೂ ಸಾಂಪ್ರದಾಯಿಕವಾಗಿ ಹಬ್ಬವನ್ನು ಆಚರಿಸಲಾಯಿತು.
ಸೋಮವಾರ ಮನೆಯ ಆಯುಧಗಳು, ವಾಹನಗಳು, ಪುಸ್ತಕ, ಪೆನ್ನು, ಮತ್ತಿತರ ವಸ್ತುಗಳನ್ನು ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಂಗಳವಾರ ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಿ, ದೇವಿಗೆ ಹೋಳಿಗೆ, ಕಡಬು, ಕೋಸಂಬರಿ, ಮತ್ತಿತರ ಖಾದ್ಯ ನೈವೇದ್ಯ ಹಿಡಿಯಲಾಯಿತು.
ಸಂಜೆ ಸ್ನೇಹಿತರು, ಬಂದುಗಳೆಲ್ಲ ಬನ್ನಿ ಮುಡಿಯುವ ಮೂಲಕ ಪರಸ್ಪರ ದಸರೆಯ ಶುಭಾಶಯ ವಿನಿಮಯ ಮಾಡಿಕೊಂಡರು.
ನಾಯಕನೂರು ಗ್ರಾಮದಲ್ಲಿ ಕೆ ಪಿ ಸಿ ಸಿ ಸದಸ್ಯ ವಿಜಯ ಕುಲಕರ್ಣಿಯವರು ಗ್ರಾಮಸ್ಥರೊಂದಿಗೆ ಸೋಮವಾರ ಆಯುಧ ಪೂಜೆ ಮತ್ತು ಮಂಗಳವಾರ ವಿಜಯದಶಮಿ ಹಬ್ಬ ಸಂಪ್ರದಾಯವಾಗಿ ಆಚರಿಸಿದರು.