ಬರಡು ಪ್ರದೇಶದ ಕೆರೆಗಳಿಗೆ ಧರ್ಮಸ್ಥಳ ಸಂಸ್ಥೆಯಿಂದ ಕಾಯಕಲ್ಪ -ತಹಸೀಲ್ದಾರ್ ಮಹಾಬಲೇಶ್ವರ.

ಕೂಡ್ಲಿಗಿ.ಜ.2:- ಕೆರೆಗಳು ಗ್ರಾಮಗಳ ಜೀವನಾಡಿಯಾಗಿದ್ದು ಬರಡು ಪ್ರದೇಶದ ಕೆರೆಗಳನ್ನು ಗುರುತಿಸಿ ಅಂತಹ ಕೆರೆ ಅಭಿವೃದ್ಧಿಪಡಿಸುವುದರಿಂದ ಆ ಗ್ರಾಮವು ಸಂಪದ್ಭರಿತವಾಗಲಿದೆ ಎಂಬುದನ್ನ ಮನಗಂಡ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಬಿ. ಸಿ. ಟ್ರಸ್ಟ್ ಯೋಜನೆಯ ಆರ್ಥಿಕ ಸಹಕಾರದಿಂದ ಕೆರೆಗಳ ಊಳೆತ್ತುವ ಕಾಯಕಲ್ಪಕ್ಕೆ ಮುಂದಾಗಿರುವುದು ಉತ್ತಮ ಕಾರ್ಯ ಎಂದು ಕೂಡ್ಲಿಗಿ ತಹಸೀಲ್ದಾರ್ ಮಹಾಬಲೇಶ್ವರ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಶುಕ್ರವಾರ ಬೆಳಿಗ್ಗೆ ತಾಲೂಕಿನ ಸಾಸಲವಾಡ ಕೆರೆಯಂಗಳದಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಬಿ ಸಿ ಟ್ರಸ್ಟ್ ಆರ್ಥಿಕ ಸಹಕಾರ ಹಾಗೂ ಸಾಸಲವಾಡ ಕೆರೆ ಅಭಿವೃದ್ಧಿ ಸಮಿತಿ ಸಹಭಾಗಿತ್ವದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡುತ್ತ ಕೆರೆಗಳು ಊಳೆತ್ತುವುದರಿಂದ ನೀರು ಹೆಚ್ಚು ಸಂಗ್ರಹಕ್ಕೆ ಅನುಕೂಲವಾಗುವ ಜೊತೆಗೆ ಕೆರೆತುಂಬಿದರೆ ಸುತ್ತಮುತ್ತಲ ರೈತರ ಪಂಪ್ ಸೆಟ್ ಗಳ ಅಂತರ್ಜಲ ಕಡಿಮೆಯಾಗದೆ ರೈತರಿಗೆ ಅನುಕೂಲವಾಗುವ ಜೊತೆಗೆ ಬರಡು ನೆಲದ ಅಭಿವೃದ್ಧಿ ಸಹ ಆಗಲಿದೆ ಇದಕ್ಕೆ ಧರ್ಮಸ್ಥಳ ಸಂಸ್ಥೆ ಕೊಡುಗೆ ಅಪಾರವಾಗಿದೆ ಎಂದರು. ನಮ್ಮ ಊರು ನಮ್ಮ ಕೆರೆ ಯೋಜನೆಯಡಿಯಲ್ಲಿ ಆಯ್ಕೆಯಾದ ಸಾಸಲವಾಡ ಕೆರೆಯ ಹೂಳೆತ್ತುವ ಕಾಮಗಾರಿಗೆ ಭೂಮಿ ಪೂಜೆ ಮಾಡುವ ಮೂಲಕ ಕಾಮಗಾರಿಗೆ ವಿದ್ಯುಕ್ತವಾಗಿ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಲ್ಯಾಣ ಕರ್ನಾಟಕ ಪ್ರಾದೇಶಿಕ ನಿರ್ದೇಶಕರಾದ ಪುರುಷೋತ್ತಮ ಪಿ ಕೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡುತ್ತ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸಮಾಜವನ್ನು ಒಗ್ಗೂಡಿಸಿಕೊಂಡು ರಾಜ್ಯಾದ್ಯಂತ ಕೆರೆಗಳಿಗೆ ಕಾಯಕಲ್ಪ ನೀಡುವಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯು ನಮ್ಮೂರು ನಮ್ಮ ಕೆರೆ ಎಂಬ ಯೋಜನೆಯ ಮೂಲಕ ದಿಟ್ಟ ಹೆಜ್ಜೆ ಇಟ್ಟಿದೆ 2017-18 ನೇ ಸಾಲಿನಲ್ಲಿ ಪ್ರಾರಂಭವಾದ ಯೋಜನೆಯಲ್ಲಿ ಕೂಡ್ಲಿಗಿ ತಾಲೂಕಿನ ಅಮಲಾಪುರ ಕೆರೆಗೆ 8 ಲಕ್ಷ ರೂಗಳ ಅನುದಾನ ಪಡೆದುಕೊಂಡು ಹಾಗೆಯೇ ಊರಿನವರ ಸಹಭಾಗಿತ್ವದೊಂದಿಗೆ ಉತ್ತಮವಾಗಿ ಕೆರೆ ಪುನಶ್ಚೇತನ ಮಾಡಲಾಗಿದೆ ಹಾಗೂ 2019ನೇ ಸಾಲಿನಲ್ಲಿ ಸರ್ಕಾರದ ಕೆರೆ ಸಂಜೀವಿನಿ ಯೋಜನೆ ಅಡಿಯಲ್ಲಿ ತಿಮ್ಮಲಾಪುರ ಕೆರೆಗೆ 20 ಲಕ್ಷ ರೂಗಳ ವೆಚ್ಚದಲ್ಲಿ ಕೆರೆ ಹೊಳೆತ್ತಲಾಗಿದೆ ಪ್ರಸ್ತುತವಾಗಿ ತಾಲೂಕಿನ ಸಾಸಲವಾಡ ಗ್ರಾಮದ ಕೆರೆಯನ್ನು ನಮ್ಮ ಊರು ನಮ್ಮ ಕೆರೆ ಯೋಜನೆಯಡಿಯಲ್ಲಿ ಕೆರೆ ಹೂಳೆತ್ತುವ ಕಾಯಕಲ್ಪಕ್ಕೆ ಮುಂದಾಗಿದೆ ಎಂದರು. ಈ ಸಂದರ್ಭದಲ್ಲಿ ಧರ್ಮಸ್ಥಳ ಸಂಸ್ಥೆಯ ವಿಜಯನಗರ ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಕೆ. ಚಿದಾನಂದ, ಸಾಸಲವಾಡ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಾನಂದಯ್ಯ, ಹಾಗೂ ಸದಸ್ಯರು ಮತ್ತು ಗ್ರಾಮಪಂಚಾಯತ್ಅಭಿವೃದ್ಧಿಅಧಿಕಾರಿ ಪ್ರಕಾಶ, ತಾಲೂಕು ಪಂಚಾಯತಿ ಸದಸ್ಯ ಚಿನ್ನಾಪ್ರಪ್ಪ ಜಿಲ್ಲಾ ನಿರ್ದೇಶಕರು, ಕ್ಷೇತ್ರ ಯೋಜನಾಧಿಕಾರಿಗಳು, ಗ್ರಾಮ ಪಂಚಾಯತಿಯ ನೂತನ ಸದಸ್ಯರು ಹಾಗೂ ಸ್ವಸಹಾಯ ಪ್ರಗತಿಬಂಧು ತಂಡದ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.