ಬರಗಾಲ ಘೋಷಣೆ ಹಿನ್ನೆಲೆ:ವಾರದೊಳಗೆ ರಾಜ್ಯಕ್ಕೆ ಕೇಂದ್ರ ಬರ ಅಧ್ಯಯನ ತಂಡ:ಎನ್. ಚಲುವರಾಯಸ್ವಾಮಿ

ಕಲಬುರಗಿ,ಅ.3: ರಾಜ್ಯದಲ್ಲಿ ಭೀಕರ ಬರಗಾಲ ಪರಿಸ್ಥಿತಿ ಅಧ್ಯಯನಗೈಯಲು ಕೇಂದ್ರದಿಂದ ಮೂರು ತಂಡಗಳು ಮುಂದಿನ ವಾರದಲ್ಲಿ ರಾಜ್ಯಕ್ಕೆ ಆಗಮಿಸುತ್ತಿವೆ ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ತಿಳಿಸಿದರು.
ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆಯ ವಿಭಾಗೀಯ ಮಟ್ಟದ ಇಲಾಖಾ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ರಾಜ್ಯದಲ್ಲಿ 161 ತೀವ್ರ ಮತ್ತು 34 ಸಾಧಾರಣ ಹೀಗೆ ಒಟ್ಟು 195 ತಾಲೂಕುಗಳನ್ನು ಬರಗಾಲ ಪೀಡಿತ ಎಂದು ಘೋಷಿಸಿ ಈಗಾಗಲೇ ಕೇಂದ್ರ ಸರ್ಕಾರಕ್ಕೆ ವರದಿ ಕಳುಹಿಸಿದ ಹಿನ್ನೆಲೆಯಲ್ಲಿ ಬರಗಾಲ ಪರಿಸ್ಥಿತಿ ಅರಿಯಲು ಕೇಂದ್ರ ಸರ್ಕಾರವು ಬರ ಅಧ್ಯಯನ ತಂಡಗಳನ್ನು ಕಳುಹಿಸುವುದಾಗಿ ಮಾಹಿತಿ ನೀಡಿದೆ. ಇದೇ ಅಕ್ಟೋಬರ್ 10 ರೊಳಗೆ ತಂಡಗಳು ಆಗಮಿಸಲಿವೆ ಎಂದು ಕೃಷಿ ಸಚಿವರು ತಿಳಿಸಿದರು.
ಒಂದೆಡೆ ಅತಿವೃಷ್ಟಿ ಮತ್ತೊಂದೆಡೆ ಅನಾವೃಷ್ಟಿ ಪರಿಸ್ಥಿತಿವಿದೆ. ಹೆಚ್ಚಿನ ಪ್ರಮಾಣದಲ್ಲಿ ಬರಗಾಲವಿದೆ. ಬೆಳೆ ಹಾನಿ ಸಮೀಕ್ಷೆ ನಡೆದಿದ್ದು, ಈಗಾಗಲೇ ಶೇ. 95ರಷ್ಟು ಬೆಳೆ ಹಾನಿ ಸಮೀಕ್ಷೆಯಾಗಿದೆ. ತಂಡಗಳು ಆಗಮಿಸುವ ಹೊತ್ತಿಗೆ ಸಮೀಕ್ಷೆ ಪೂರ್ಣಗೊಂಡು ವರದಿ ಅಂತಿಮಗೊಳ್ಳಲಿದೆ. ಪ್ರಾಥಮಿಕ ವರದಿ ಪ್ರಕಾರ ಈಗಾಗಲೇ 40 ಲಕ್ಷ ಹೆಕ್ಟೇರ್ ದಲ್ಲಿ ಸುಮಾರು 28 ಸಾವಿರ ಕೋ.ರೂ ಹಾನಿ ಅಂದಾಜಿಸಲಾಗಿದೆ. 4,000 ಕೋಟಿ ಪರಿಹಾರ ನೀಡುವಂತೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ ಎಂದು ವಿವರಣೆ ನೀಡಿದರು.
ನರೇಗಾ ಕೂಲಿ ಕಾರ್ಮಿಕರ ಕೆಲಸದ ದಿನ 100 ರಿಂದ 150ಕ್ಕೆ ಹೆಚ್ಚಿಸಲಾಗುವುದು. ಬರಗಾಲ ಘೋಷಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ರಚಿಸಲಾಗುತ್ತದೆ. ಪ್ರತಿ ವಾರ ಕಮಿಟಿ ಸಭೆ ಕರೆದು ಪರಿಹಾರ ಕಾರ್ಯ ಉಸ್ತುವಾರಿ ನೋಡಿಕೊಳ್ಳಲಿದೆ ಎಂದ ಅವರು ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಪರಿಣಾಮ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗುತ್ತಿದೆ ಎಂದರು.
ಕಳೆದ ವರ್ಷ ಕಲಬುರಗಿ, ಬೀದರ, ಯಾದಗಿರಿ, ವಿಜಯಪುರ ಜಿಲ್ಲೆಯಲ್ಲಿ ತೊಗರಿ ಬೆಳೆ ನೆಟೆ ರೋಗಕ್ಕೆ ತುತ್ತಾಗಿದ್ದರಿಂದ ಹಿಂದಿನ ಸರ್ಕಾರ ಪರಿಹಾರ ಘೋಷಣೆ ಮಾಡಿತ್ತಾದರು, ಅನುದಾನ ಬಿಡುಗಡೆ ಮಾಡಿರಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೆ ಎರಡು ಹಂತದಲ್ಲಿ 4 ಜಿಲ್ಲೆಗಳ 2,37,860 ರೈತರಿಗೆ 148 ಕೋಟಿ ರೂ. ಪರಿಹಾರ ನೀಡಿದೆ. ಇದರಲ್ಲಿ ಕಲಬುರಗಿ ಜಿಲ್ಲೆಯ 1,65,027 ರೈತರಿಗೆ 120.66 ಕೋಟಿ ರೂ. ಪರಿಹಾರ ಸೇರಿದೆ. ಇನ್ನು ಬಾಕಿ 74 ಕೋಟಿ ರೂ. ಪರಿಹಾರ ನೀಡಬೇಕಿದ್ದು, ಅದನ್ನು ಶೀಘ್ರ ರೈತರ ಖಾತೆಗೆ ಪಾವತಿಸಲಾಗುವುದು ಎಂದರು.
ನವೋದ್ಯಮ ಯೋಜನೆಯಡಿ ಹೊಸ ಎಫ್.ಪಿ.ಓಗಳಿಗೆ 5-20 ಲಕ್ಷ ರೂಪಾಯಿ ವರೆಗಿದ್ದ ಸಾಲದ ನೆರವನ್ನು 20-50 ಲಕ್ಷ ರೂ.ಗಳಿಗೆ ಏರಿಕೆ ಮಾಡಿದ್ದು, ಇದಕ್ಕಾಗಿ 10 ಕೋಟಿ ಮೀಸಲಿಡಲಾಗಿದೆ. ಬೃಹತ್ ಕಟಾವ್ ಹಬ್ (ಹಾರ್ವೆಸ್ಟರ್ ಹಬ್) ಸ್ಥಾಪನೆಗೆ 50 ಕೋಟಿ ರೂ. ಮೀಸಲಿಟ್ಟಿದ್ದು, ರಾಜ್ಯದಾದ್ಯಂತ 100 ಹಬ್ ಕೇಂದ್ರ ಸ್ಥಾಪಿಸಲಾಗುತ್ತಿದೆ ಎಂದರು.
ಬೆಳೆ ವಿಮೆ ಮಾರ್ಪಾಡು: ಬೆಳೆ ವಿಮೆಯನ್ನು ಈಗ ಖಾಸಗಿ ಕಂಪನಿಯೇ ಉಸ್ತುವಾರಿಯಾಗಿದ್ದು, ಸಮರ್ಪಕವಾಗಿ ಬೆಳೆ ಹಾನಿಗೆ ತಕ್ಕ ಪರಿಹಾರ ದೊರಕುತ್ತಿಲ್ಲ ಎಂಬುದಾಗಿ ವ್ಯಾಪಕ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ಮೊದಲಿನಂತೆ ಮುಂದಿನ ವರ್ಷದಿಂದ ಸರ್ಕಾರದಿಂದಲೇ ಬೆಳೆ ವಿಮೆ ನಿರ್ವಹಿಸಲು ಚಿಂತನೆ ನಡೆದಿದೆ ಎಂದು ಸಚಿವ ಚೆಲುವರಾಯಸ್ವಾಮಿ ಇದೇ ಸಂದರ್ಭದಲ್ಲಿ ತಿಳಿಸಿದರು.
ಕೃಷಿ ಭಾಗ್ಯ ಮತ್ತೆ ಜಾರಿಗೆ: ಕೃಷಿ ಹೊಂಡ ನಿರ್ಮಾಣ ಮಾಡುವ ಕೃಷಿ ಭಾಗ್ಯ ಯೋಜನೆ ಮತ್ತೆ ಜಾರಿಗೆ ತರಲಾಗುತ್ತಿದೆ. ಇದಕ್ಕಾಗಿ ಈ ವರ್ಷ 100 ಕೋಟಿ ರೂ. ಅನುದಾನ ಮೀಸಲಿರಿಸಿದ್ದು, ಮುಂದಿನ ವರ್ಷ ಇನ್ನೂ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
ಶಾಸಕರಾದ ಅಲ್ಲಮಪ್ರಭು ಪಾಟೀಲ, ಬಿ.ಆರ್.ಪಾಟೀಲ, ಎಂ.ವೈ.ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಕೃಷಿ ಆಯುಕ್ತ ವೈ.ಎಸ್.ಪಾಟೀಲ, ಕೃಷಿ ನಿರ್ದೇಶಕ ಜಿ.ಟಿ.ಪುತ್ರ, ಜಲಾನಯನ ಇಲಾಖೆಯ ನಿರ್ದೇಶಕ ಶ್ರೀನಿವಾಸ ಸೇರಿದಂತೆ ಕೃಷಿ ಇಲಾಖೆಯ ಇನ್ನಿತರ ಹಿರಿಯ ಅಧಿಕಾರಿಗಳು ಇದ್ದರು.