
(ಸಂಜೆವಾಣಿ ವಾರ್ತೆ)
ನವಲಗುಂದ,ಆ27 : ಪ್ರಸಕ್ತ ವರ್ಷ ಮಳೆಯ ಕೊರೆತೆಯ ಕಾರಣ ರಾಜ್ಯದ ಹಲವಾರು ತಾಲ್ಲೂಕುಗಳನ್ನು ಬರಗಾಲ ಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಿದ್ದು ನವಲಗುಂದ ವಿಧಾನ ಸಭಾ ಕ್ಷೇತ್ರದ ನವಲಗುಂದ ಮತ್ತು ಅಣ್ಣಿಗೇರಿ ತಾಲ್ಲೂಕುಗಳನ್ನು ಬರಗಾಲ ಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಲು ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎಚ್. ಕೋನರಡ್ಡಿ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.
ನವಲಗುಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನವಲಗುಂದ ಮತ್ತು ಅಣ್ಣಿಗೇರಿ ತಾಲ್ಲೂಕುಗಳು ಮಳೆಯಾಧಾರಿತ ಪ್ರದೇಶಗಳಾಗಿದ್ದು ಇಲ್ಲಿನ ರೈತರು ಮಳೆಯನ್ನು ನಂಬಿಕೊಂಡು ಮುಂಗಾರು ಬಿತ್ತನೆ ಮಾಡಿದ್ದು ಪ್ರಸಕ್ತ ವರ್ಷ ಮುಂಗಾರು ಸಮಯದಲ್ಲಿ ನಿಗದಿತ ಕಾಲಕ್ಕೆ ಅವಶ್ಯಕತೆಗೆ ತಕ್ಕಂತೆ ಮಳೆಯಾಗಿರುವುದಿಲ್ಲ.
ಎರಡೂ ತಾಲ್ಲೂಕಿನ ಕೆಲವು ಪ್ರದೇಶಗಳಲ್ಲಿ ಕೇವಲ 2, 3 ದಿನಗಳು ಮಾತ್ರ ಮಳೆಯಾಗಿದ್ದು ಅದನ್ನು ಪೂರ್ಣ ತಾಲ್ಲೂಕಿಗೆ ಪರಿಗಣಿಸುವದು ಸೂಕ್ತವಾಗುವುದಿಲ್ಲ. ಇದಲ್ಲದೇ ನವಲಗುಂದ ಮತ್ತು ಅಣ್ಣಿಗೇರಿ ತಾಲ್ಲೂಕಿನ ಗ್ರಾಮಗಳಿಗೆ ಟ್ಯಾಂಕರ ಮೂಲಕ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ.
ಮುಂದುವರೆದು ನವಲಗುಂದ ಮತ್ತು ಅಣ್ಣಿಗೇರಿ ನಗರ ಸೇರಿದಂತೆ ಎರಡೂ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ತೀವ್ರವಾದ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವುದರಿಂದ ಮಲಪ್ರಭಾ ಬಲದಂಡೆ ಕಾಲುವೆಯಿಂದ ಕುಡಿಯುವ ನೀರನ್ನು ಪಡೆಯಲಾಗುತ್ತಿದೆ.
ಇದರಿಂದ ನವಲಗುಂದ ಮತ್ತು ಅಣ್ಣಿಗೇರಿ ತಾಲ್ಲೂಕುಗಳಲ್ಲಿ ಮಳೆ ಕೊರತೆಯಿಂದ ಮುಂಗಾರು ಬಿತ್ತನೆ ಮಾಡಿದ ರೈತರು ಬೆಳೆ ಬಾರದೇ ಸಂಕಷ್ಟಕ್ಕೆ ಒಳಗಾಗಿರುತ್ತಾರೆ. ಸರ್ಕಾರ ಘೋಷಿಸಿರುವ ಬರಗಾಲ ಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ನವಲಗುಂದ ಮತ್ತು ಅಣ್ಣಿಗೇರಿ ತಾಲ್ಲೂಕುಗಳು ಸೇರ್ಪಡೆಗೊಂಡಿರುವುದಿಲ್ಲ.
ಆದ್ದರಿಂದ, ಕೂಡಲೇ ನವಲಗುಂದ ಮತ್ತು ಅಣ್ಣಿಗೇರಿ ತಾಲ್ಲೂಕುಗಳನ್ನು ಬರಗಾಲ ಪೀಡಿತ ತಾಲ್ಲೂಕುಗಳೆಂದು ಘೋಷಿಸಬೇಕೆಂದು ಈ ಭಾಗದ ರೈತರ ಪರವಾಗಿ ಮುಖ್ಯಮಂತ್ರಿಗಳಿಗೆ, ಕಂದಾಯ ಸಚಿವರಿಗೆ ಹಾಗೂ ಕೃಷಿ ಸಚಿವರಿಗೆ ಪತ್ರ ಬರೆದು ಕೋನರಡ್ಡಿ ಅವರು ಒತ್ತಾಯಿಸಿದ್ದಾರೆ.