ಬರಗಾಲ: ಗುಳೇ ನಿಯಂತ್ರಿಸಲು ಸರ್ಕಾರ ಕ್ರಮ ಕೈಗೊಂಡಿದೆಯೇ ವೈ.ಎಂ. ಸತೀಶ್ ಪ್ರಶ್ನೆ


ಸಂಜೆವಾಣಿ ವಾರ್ತೆ
ಬಳ್ಳಾರಿ, ಫೆ. 15: ಕರ್ನಾಟಕದಲ್ಲಿ ಬರ ಪೀಡಿತ 223 ತಾಲೂಕಿನ 7082 ಗ್ರಾಮಗಳಲ್ಲಿ ಮತ್ತು 1193 ವಾರ್ಡ್‍ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿದೆ ಎಂದು ಕರ್ನಾಟಕ ಸರ್ಕಾರ ಗುರುತಿಸಿದ್ದು, ಕೇಂದ್ರ ಸರ್ಕಾರದ ಎನ್‍ಡಿಆರ್‍ಎಫ್ ಅನುದಾನವನ್ನು ನಿರೀಕ್ಷಿಸಿ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ 33.09 ಲಕ್ಷ ರೈತರಿಗೆ ಅರ್ಹತೆಗೆ ಅನುಗುಣವಾಗಿ 628.03 ಕೋಟಿ ರೂಪಾಯಿಗಳನ್ನು ಮೊದಲನೆಯ ಕಂತಾಗಿ ತಲಾ 2 ಸಾವಿರ ರೂಪಾಯಿ ಬೆಳೆ ನಷ್ಟ ಪರಿಹಾರವನ್ನು ಬಿಡಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ತಿಳಿಸಿದ್ದಾರೆ.
ಬಳ್ಳಾರಿ – ವಿಜಯನಗರ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು ವಿಧಾನ ಪರಿಷತ್ತಿನಲ್ಲಿ ಬುಧವಾರ ಕೇಳಿದ, ಬರ ಪರಿಹಾರ ಮತ್ತು ಗುಳೆ ನಿಯಂತ್ರಣಕ್ಕಾಗಿ
ಕರ್ನಾಟಕ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಕೇಳಿದ ಚುಕ್ಕಿ ಗುರುತಿನ ಪ್ರಶ್ನೆಗೆ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಸುದೀರ್ಘ ಉತ್ತರ ನೀಡಿದ್ದಾರೆ.
ರಾಜ್ಯದ 46 ಗ್ರಾಮಗಳಿಗೆ 60 ಟ್ಯಾಂಕರ್‍ಗಳ ಮೂಲಕ, 156 ಗ್ರಾಮಗಳಿಗೆ 183 ಖಾಸಗಿ ಬೋರ್‍ವೆಲ್‍ಗಳನ್ನು ಬಾಡಿಗೆ ಪಡೆಯುವ ಮೂಲಕ, 4 ನಗರ ಸಂಸ್ಥೆಗಳ 46 ವಾರ್ಡ್‍ಗಳಲ್ಲಿ 12 ಟ್ಯಾಂಕರ್‍ಗಳ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ರಾಜ್ಯಾದ್ಯಂತ 6416 ಖಾಸಗಿ ಬೋರ್‍ವೆಲ್‍ಗಳನ್ನು ಗುರುತಿಸಿ, 2654 ಬೋರ್‍ವೆಲ್ ಮಾಲೀಕರ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. 26 ಜಿಲ್ಲೆಗಳಲ್ಲಿ ಈ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ವಿವರಿಸಿದ್ದಾರೆ.
ಗ್ರಾಮೀಣರು ಗುಳೆ ಹೋಗುವುದನ್ನು ತಪ್ಪಿಸಲಿಕ್ಕಾಗಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಪ್ರತಿ ಕುಟುಂಬಕ್ಕೆ 100 ರಿಂದ 150 ದಿನಗಳಿಗೆ ಮಾನವ ದಿನಗಳಿಗೆ ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬರದ ಹಿನ್ನಲೆಯಲ್ಲಿ 17.59 ಲಕ್ಷ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಇದರಲ್ಲಿ 7.62 ಲಕ್ಷ ಕಾಮಗಾರಿಗಳನ್ನು ಕೃಷಿ ಮತ್ತು ಇತರೆ ಚಟುವಟಿಕೆಗಳಿಗೆ ಮೀಸಲು ಮಾಡಲಾಗಿದೆ. ಮೇವಿನ ಬ್ಯಾಂಕ್, ಕುಡಿಯುವ ನೀರು, ಗೋಶಾಲೆ ಇನ್ನಿತರೆ ತುರ್ತು ಕಾರ್ಯಗಳನ್ನು ಕೈಗೊಳ್ಳಲು 31 ಜಿಲ್ಲೆಗಳಿಗೆ 324 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದ್ದು, ಈ ಪೈಕಿ ಡಿಸಿಗಳು ಮತ್ತು ತಹಸೀಲ್ದಾರರ ಬಳಿ ಪ್ರಸ್ತುತ ಒಟ್ಟು 867.82 ಕೋಟಿ ರೂಪಾಯಿ ಅನುದಾನ ಲಭ್ಯವಿದೆ ಎಂದರು.
ಬಳ್ಳಾರಿ ಜಿಲ್ಲೆಯ 5, ವಿಜಯನಗರ ಜಿಲ್ಲೆಯ 6 ತಾಲೂಕುಗಳನ್ನು `ಬರ ಪೀಡಿತ’ ಎಂದು ಘೋಷಣೆ ಮಾಡಲಾಗಿದೆ. ಈ ಅವಳಿ ಜಿಲ್ಲೆಗಳಲ್ಲಿ ಕುಡಿಯುವ ನೀರು, ಮೇವುಬ್ಯಾಂಕ್ ಮತ್ತು ತುರ್ತು ಅಗತ್ಯಗಳಿಗಾಗಿ ಒಟ್ಟು 1650 ಲಕ್ಷ ರೂಪಾಯಿಗಳನ್ನು ಬಿಡಗಡೆ ಮಾಡಲಾಗಿದೆ. ಬಳ್ಳಾರಿ ಡಿಸಿ ಬಳಿ 700 ಲಕ್ಷ ರೂ, ವಿಜಯನಗರ ಡಿಸಿ ಬಳಿ 900 ಲಕ್ಷ ರೂಪಾಯಿ ಇದೆ. ಬಳ್ಳಾರಿ ಡಿಸಿಯ ಬಳಿ 29.93 ಕೋಟಿ ರೂ, ಜಿಲ್ಲೆಯ ಐವರು ತಹಸೀಲ್ದಾರರ ಬಳಿ ಒಟ್ಟು 2.11 ಕೋಟಿ ರೂಪಾಯಿ ಸೇರಿ ಒಟ್ಟು 32.04 ಕೋಟಿ ರೂಪಾಯಿ ಪಿಡಿ ಖಾತೆಯಲ್ಲಿದೆ. ವಿಜಯನಗರ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 21.42 ಕೋಟಿ ರೂ, ಆರು ತಹಸೀಲ್ದಾರರ ಪಿಡಿ ಖಾತೆಯಲ್ಲಿ ಒಟ್ಟು 2.88 ಕೋಟಿ ರೂಪಾಯಿ ಸೇರಿ ಒಟು 24.30 ಕೋಟಿ ರೂಪಾಯಿ ಇದೆ ಎಂದರು.
ಬಳ್ಳಾರಿಯ ಸಂಡೂರುನ 8 ಗ್ರಾಮಗಳಿಗೆ ಖಾಸಗಿ ಬೋರ್‍ವೆಲ್ ಮೂಲಕ, ಹರಗಿನಡೋಣಿಗೆ ಸರ್ಕಾರಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಜಿಲ್ಲೆಯ 114 ಗ್ರಾಮಗಳನ್ನು ಮತ್ತು 97 ವಾರ್ಡ್‍ಗಳನ್ನು ಗುರುತಿಸಲಾಗಿದೆ. ವಿಜಯನಗರದ 473 ಗ್ರಾಮಗಳು, 46 ವಾರ್ಡ್‍ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಲಿದ್ದು, ಖಾಸಗಿ ಬೋರ್‍ವೆಲ್ ಮೂಲಕ ನೀರು ಪೂರೈಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದರು.
ಬಳ್ಳಾರಿ ಜಿಲ್ಲೆಯ 35,099 ರೈತರಿಗೆ 6.90 ಕೋಟಿ ರೂಪಾಯಿ ಮತ್ತು ವಿಜಯನಗರ ಜಿಲ್ಲೆಯ 1,17,,267 ರೈತರಿಗೆ ಬೆಳೆ ಪರಿಹಾರದ ಮೊದಲ ಕಂತಾಗಿ 23.12 ಕೋಟಿ ರೂಪಾಯಿಗಳನ್ನು ಆಧಾರ್ ಜೋಡಣೆಯಾದ ಬ್ಯಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ. ಟಾಸ್ಕ್‍ಫೋರ್ಸ್‍ಗಳನ್ನು ರಚಿಸಲಾಗಿದೆ. ಅಗತ್ಯಕ್ಕೆ ಅನುಗುಣವಾಗಿ ಅಧಿಕಾರಿಗಳು ಮತ್ತು ಟಾಸ್ಕ್‍ಫೋರ್ಸ್ ತಂಡಗಳು ನಿರಂತರ ಸಭೆ ನಡೆಸುತ್ತಿವೆ ಎಂದು ಅವರು ವಿವರಿಸಿದರು.