ಬರಗಾಲದ ಬಿಸಿ ನಡುವೆಯೂ ಗಣೇಶೋತ್ಸವದ ಸಂಭ್ರಮ

ಕಲಬುರಗಿ,ಸೆ.18: ಸ್ವಾತಂತ್ರ್ಯದ ಹೋರಾಟದ ಕಿಚ್ಚನ್ನು ದೇಶವ್ಯಾಪಿ ಹರಡಲು ಬಾಲಗಂಗಾಧರನಾಥ್ ಟಿಳಕ್ ಅವರು ಗಣೇಶ್ ಪ್ರತಿಷ್ಠಾಪನೆಗೆ ನಾಂದಿ ಹಾಡಿದರು. ಅಂತಹ ಪವಿತ್ರ ಗಣೇಶ್ ಚತುರ್ಥಿಯು ಸೆಪ್ಟೆಂಬರ್ 19ರಿಂದ ಮಂಗಳವಾರ ಪ್ರಾರಂಭವಾಗಲಿದೆ. ಆ ದಿಸೆಯಲ್ಲಿ ರಾಷ್ಟ್ರವ್ಯಾಪಿ ವ್ಯಾಪಕ ಸಿದ್ದತೆಗಳು ಜರುಗುತ್ತಿವೆ. ಅದೇ ರೀತಿಯಲ್ಲಿ ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನವಾಗಿರುವ ಕಲಬುರ್ಗಿಯಲ್ಲಿಯೂ ಸಹ ಜಿಲ್ಲಾಡಳಿತ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಆಯಾ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಗಣೇಶ್ ಹಬ್ಬದೊಂದಿಗೆ ಈದ್ ಮಿಲಾದ್ ಹಬ್ಬವೂ ಇರುವುದರಿಂದ ಎಲ್ಲ ಸಮುದಾಯದವರು ಎರಡೂ ಹಬ್ಬಗಳನ್ನು ಅತ್ಯಂತ ಶಾಂತಿಯುತವಾಗಿ ಆಚರಿಸಲು ಶಾಂತಿ ಸಭೆಗಳನ್ನು ಮಾಡಲಾಗಿದೆ.,
ಈ ಹಿಂದೆ ಕೋವಿಡ್ ಸೋಂಕಿನ ಭೀತಿಯಿಂದಾಗಿ ಗಣೇಶೋತ್ಸವದ ಸಡಗರ, ಸಂಭ್ರಮಕ್ಕೆ ತೀವ್ರ ಸಮಸ್ಯೆ ಆಗಿತ್ತು. ನಿಗದಿತ ಪ್ರದೇಶಗಳಲ್ಲಿ ಸೀಮಿತ ಗಣಪತಿ ವಿಗ್ರಹಗಳ ಪ್ರತಿಷ್ಠಾಪನೆಗೆ ಅವಕಾಶ ಕೊಡಲಾಗಿತ್ತು. ಈಗ ಕೋವಿಡ್ ಸಂಪೂರ್ಣ ನಿರ್ಮೂಲನೆ ಆಗಿದೆ. ಇಂತಹ ಸಂದರ್ಭದಲ್ಲಿ ಗಣೇಶೋತ್ಸವವನ್ನು ಅತ್ಯಂತ ಅದ್ದೂರಿಯಿಂದ ಆಚರಿಸಲು ಸಾರ್ವಜನಿಕರು ಮುಂದಾಗಿದ್ದಾರೆ. ಅಂತಹ ಸಡಗರ, ಸಂಭ್ರಮಕ್ಕೆ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತಗಳೆಲ್ಲವೂ ಸಹಕಾರ ಮತ್ತು ಬೆಂಬಲವನ್ನು ನೀಡಿವೆ.
ಆದಾಗ್ಯೂ, ಸರ್ವೋಚ್ಛ ನ್ಯಾಯಾಲಯದ ಹಸಿರು ಪೀಠದ ಆದೇಶದನ್ವಯ ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತ ವಿಗ್ರಹಗಳನ್ನು ರಾಸಾಯನಿಕ ಬಣ್ಣಗಳಿಂದ ಮಾಡಲು ನಿಷೇಧಿಸಲಾಗಿದೆ. ಅದನ್ನೇ ಮುಂದಿಟ್ಟುಕೊಂಡು ಇತ್ತೀಚೆಗೆ ಮಹಾನಗರ ಪಾಲಿಕೆಯವರು ಪರಿಸರ ನಿಯಂತ್ರಣ ಮಂಡಳಿಯವರೊಂದಿಗೆ ರಾಸಾಯನಿಕ ಬಣ್ಣ ಲೇಪಿತ ಗಣಪತಿ ವಿಗ್ರಹಗಳ ತಯಾರಿಕೆಗೆ ಮತ್ತು ಮಾರಾಟಕ್ಕೆ ನಿರ್ಬಂಧನೆಯನ್ನು ಹೇರುವ ಯತ್ನ ಮಾಡಿದರು. ಬಿದ್ದಾಪೂರ್ ಕಾಲೋನಿಯ ಕಾರ್ಯಾಗಾರಗಳಿಗೆ ಹಠಾತ್ ದಾಳಿ ಮಾಡಿದ ಅಧಿಕಾರಿಗಳು ಕಳೆದ 17ರಿಂದ 18 ವರ್ಷಗಳಿಂದ ಗಣಪತಿ ವಿಗ್ರಹಗಳನ್ನು ತಯಾರಿಸುತ್ತಿರುವ ಅನ್ಯ ರಾಜ್ಯದ ತಯಾರಿಕರ ಟೆಂಟ್ ಹಾಕಿದ ಸ್ಥಳಕ್ಕೆ ಅಧಿಕಾರಿಗಳು ತೆರಳಿ ಪರಿಸರ ಸ್ನೇಹಿ ಅಲ್ಲದ ಗಣಪತಿಗಳ ವಿಗ್ರಹಗಳ ಮಾರಾಟ ಸ್ಥಗಿತಗೊಳಿಸುವಂತೆ ಸೂಚಿಸಿದರು. ಅದಕ್ಕೆ ತಯಾರಿಕರು ಹಾಗೂ ಅವರ ಕುಟುಂಬಸ್ಥರು ತೀವ್ರವಾಗಿ ಆಕ್ಷೇಪಿಸಿದರು. ನೋಟಿಸ್ ಕೊಡದೇ ಒಮ್ಮೆಲೆ ಮಾರಾಟ ಮಾಡಬಾರದು ಎಂಬ ಸೂಚನೆಯನ್ನು ತಿರಸ್ಕರಿಸಿದರು. ಈಗಾಗಲೇ ಸಾಕಷ್ಟು ಮೂರ್ತಿಗಳು ಸಿದ್ಧಗೊಂಡಿವೆ. ಹಲವರು ಈಗಾಗಲೇ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡಿದ್ದಾರೆ. ಮುಂಚಿತವಾಗಿ ಹಣವನ್ನು ಕೊಟ್ಟಿದ್ದಾರೆ. ಹೀಗಾಗಿ ನಾವು ಮಾರಾಟ ಮಾಡುವುದನ್ನು ನಿಲ್ಲಿಸುವುದಿಲ್ಲ. ಹಾಗೇನಾದರೂ ಆದಲ್ಲಿ ವಾವು ನಿರ್ಮಿಸಿರುವ ಗಣಪತಿ ವಿಗ್ರಹಗಳ ಬೆಲೆಯನ್ನು ಕೊಟ್ಟು ನೀವೇ ತೆಗೆದುಕೊಂಡು ಹೋಗಿ ಎಂದು ಒತ್ತಾಯಿಸಿದರು.
ಇದರಿಂದಾಗಿ ಅಧಿಕಾರಿಗಳು ತಬ್ಬಿಬ್ಬಾದರು. ಆದಾಗ್ಯೂ, ಘಟನೆಯ ನಂತರ ಮಾರಾಟಗಾರರು ಸಾಕಷ್ಟು ಸಮಸ್ಯೆಯನ್ನು ಎದುರಿಸಲು ಆರಂಭಿಸಿದ್ದಾರೆ. ಈ ಕುರಿತು ಮೊದಲೇ ಕ್ರಮ ಕೈಗೊಳ್ಳಬೇಕಿತ್ತು. ಈಗ ಒಂದು ಕಡೆ ದಾಳಿ ಮಾಡಿ, ಇನ್ನೊಂದು ಕಡೆ ಬಣ್ಣ ಲೇಪಿತ ಗಣಪತಿ ವಿಗ್ರಹಗಳನ್ನು ಮಾರಾಟ ಮಾಡುವುದಕ್ಕೆ ಅವಕಾಶ ಕೊಟ್ಟರೆ ಅದು ಇಬ್ಬಗೆಯ ನೀತಿಯಾಗುತ್ತದೆ. ಅದರಲ್ಲಿಯೂ ಬಣ್ಣ, ಬಣ್ಣದ ಗಣೇಶ ವಿಗ್ರಹಗಳನ್ನು ನೋಡುವುದಕ್ಕೆ ಎರಡು ಕಣ್ಣು ಸಾಲದು. ಆ ರೀತಿ ಸಡಗರ ಸಂಭ್ರಮಗಳಿಂದ ವಿವಿಧ ಅಲಂಕಾರಗಳಲ್ಲಿ ಆಕರ್ಷಕ ಬಣ್ಣಗಳೊಂದಿಗೆ ಗಣೇಶ್ ವಿಗ್ರಹಗಳನ್ನು ಮನೆ, ಮನೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಇಡಲು ಮುಂದಾಗಿರುವ ಬೆನ್ನ ಹಿಂದೆಯೇ ಅಧಿಕಾರಿಗಳ ಕಾರ್ಯಾಚರಣೆಯು ಸಾಕಷ್ಟು ಕಿರಿಕಿರಿಯುಂಟು ಮಾಡಿತ್ತು.
ನಗರದ ವಿವಿಧೆಡೆ ರಾಸಾಯನಿಕ ಬಣ್ಣ ಲೇಪಿತ ಬೃಹತ್ ಗಾತ್ರದ ಗಣಪತಿ ವಿಗ್ರಹಗಳು ಮಾರಾಟಕ್ಕೆ ಸಿದ್ಧಗೊಂಡಿವೆ. ಅದರಲ್ಲಿಯೂ ಮಹಾರಾಷ್ಟ್ರದಿಂದಲೇ ಗಣಪತಿ ವಿಗ್ರಹಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಸುಮಾರು 65000ರೂ.ಗಳಿಂದ ಗರಿಷ್ಠ ಒಂದು ಲಕ್ಷ ರೂ.ಗಳವರೆಗೆ ಬೆಲೆ ಬಾಳುವ ಬೃಹತ್ ಗಾತ್ರದ ಗಣಪತಿಗಳು ವಿವಿಧ ಸ್ಥಳಗಳಲ್ಲಿ ಕೂಡಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಕುರಿತು ಏನಾದರೂ ಆಕ್ಷೇಪಿಸಿದರೆ ಸಮಾಜದಲ್ಲಿ ಶಾಂತಿ ಕದಡುವ ಸಾಧ್ಯತೆಯೂ ಇದೆ.
ಈ ಮಧ್ಯೆ, ನಗರದಲ್ಲಿ ಗಣೇಶ್ ವಿಗ್ರಹಗಳ ಮೆರವಣಿಗೆ ವಿವಿಧ ಮಾರ್ಗಗಳಲ್ಲಿ ನಡೆಯುತ್ತದೆ. ಡಿಜಿ ಧ್ವನಿವರ್ಧಕವನ್ನು ನಿಷೇಧಿಸಲಾಗಿದೆ. ಆದಾಗ್ಯೂ, ಕಳೆದ ಬಾರಿ ಇಂತಹ ಕ್ರಮ ಕೈಗೊಂಡರೂ ಸಹ ಭಾರೀ ಪ್ರಮಾಣದಲ್ಲಿ ಡಿಜಿ ಧ್ವನಿವರ್ಧಕ ಬಳಕೆ ಮಾಡಿದ್ದರಿಂದ ಕೆಲ ಪೋಲಿಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ಈ ಬಾರಿ ಡಿಜೆ ಸೌಂಡ್ ಬಳಕೆಯ ಕುರಿತು ಪೋಲಿಸ್ ಇಲಾಖೆಯು ಖಡಕ್ ಎಚ್ಚರಿಕೆಯನ್ನು ನೀಡಿದೆ. ಇನ್ನು ಮೆರವಣಿಗೆಯ ಕಾಲಕ್ಕೆ ಮಾರ್ಗದಲ್ಲಿ ಹಾಯ್ದು ಹೋಗಿರುವ ವಿದ್ಯುಚ್ಛಕ್ತಿ ತಂತಿಗಳು ಸಡಿಲಾಗಿ ಜೋತು ಬಿದ್ದಿದ್ದು, ಮೆರವಣಿಗೆಕಾರರಿಗೆ ವಿದ್ಯುತ್ ಸ್ಪರ್ಶ ಉಂಟಾಗುವ ಸಂಭವ ಇದೆ. ಕಳೆದ ಬಾರಿ ಉತ್ಸವದಲ್ಲಿ ಒಬ್ಬಾತ ವಿದ್ಯುತ್ ತಂತಿ ತಗುಲಿ ಮೃತಪಟ್ಟ ಘಟನೆಯೂ ವರದಿಯಾಗಿದೆ.
ಇನ್ನು ಗಣೇಶ್ ವಿಗ್ರಹ ಪ್ರತಿಷ್ಠಾಪನೆಯನ್ನು 1 ದಿನದಿಂದ ಗರಿಷ್ಠ 11 ದಿನಗಳವರೆಗೆ ಮಾಡಲಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ವಿಗ್ರಹಗಳ ಸುರಕ್ಷತೆಗೆ ಹೆಚ್ಚು ಒತ್ತನ್ನು ಜಿಲ್ಲಾಡಳಿತ ಕೊಟ್ಟಿದೆ. ಕಳೆದ ಬಾರಿ ಕಿಡಿಗೇಡಿಗಳು ಗಣೇಶ್ ವಿಗ್ರಹವನ್ನು ಭಗ್ನಗೊಳಿಸಿದ್ದರು. ಅಂತಹ ಘಟನೆಗಳು ಮರುಕಳಿಸದ ರೀತಿಯಲ್ಲಿ ಪ್ರತಿಷ್ಠಾಪಿಸಿದ ಸಂಘಟನೆಗಳ ಕಾರ್ಯಕರ್ತರು ದಿನದ 24 ಗಂಟೆಗಳ ಕಾಲ ಗಣಪತಿ ವಿಗ್ರಹವನ್ನು ಸುರಕ್ಷಿತವಾಗಿ ನೋಡಿಕೊಳ್ಳುವಂತೆ ಹಾಗೂ ಸಿಸಿ ಟಿವ್ಹಿ ಕ್ಯಾಮೆರಾ ಅಳವಡಿಸುವಂತೆ ಸೂಚಿಸಲಾಗಿದೆ.
ಈಗಾಗಲೇ ಜಿಲ್ಲೆಯಲ್ಲಿ ಸಕಾಲಕ್ಕೆ ಮಳೆಯಾಗದೇ ಬರ ಬಿದ್ದಿದೆ. ಪರಿಹಾರ ಕಾಮಗಾರಿಗಳಿಗಾಗಿ ರೈತರು ಸರ್ಕಾರವನ್ನು ಎದಿರು ನೋಡುತ್ತಿದ್ದಾರೆ. ಆದಾಗ್ಯೂ, ಈ ಬಾರಿಯ ಗಣೇಶೋತ್ಸವದ ಸಂಭ್ರಮ ಮನೆ ಮಾಡಿದೆ.