ಬರಗಾಲದ ಬವಣೆ, ಜಲಕ್ಷಾಮ ನಿರ್ಲಕ್ಷಿಸಿದ ರಾಜ್ಯ ಬಜೆಟ್:ಕರದಳ್ಳಿ ಟೀಕೆ

ಕಲಬುರಗಿ:ಫೆ.16: ಇಡೀ ರಾಜ್ಯದಲ್ಲಿ ಬರಗಾಲದ ಬಿಸಿ ದಿನೇ ದಿನೇ ಹೆಚ್ಚುತ್ತಿದೆ. ಕುಡಿಯುವ ನೀರಿನ ಕೊರತೆ ಕಾಡುತ್ತಿದೆ. ರಾಜ್ಯ ಸರ್ಕಾರ ಬರುವಂತಹ ಬರಗಾಲದ ಕುರಿತು ಕ್ರಮ ಕೈಗೊಳ್ಳಬೇಕಿತ್ತು. ಆದಾಗ್ಯೂ, ಅದು ಆಗಿಲ್ಲ ಎಂದು ರಾಷ್ಟ್ರೀಯ ಸ್ವದೇಶಿ ವಿಚಾರಗಳ ಖ್ಯಾತ ಚಿಂತಕ ಮಹಾದೇವಯ್ಯ ಕರದಳ್ಳಿ ಅವರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಬರಗಾಲದ ಬವಣೆ, ಜಲಕ್ಷಾಮವನ್ನು ರಾಜ್ಯ ಸರ್ಕಾರವು ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ನೀರಿನ ಸಮಸ್ಯೆಯನ್ನು ಎದುರಿಸಲು ರಾಜ್ಯ ಸರ್ಕಾರದ ಸಿದ್ಧತೆ ಕುರಿತು ಬಜೆಟ್ ದಿವ್ಯ ನಿರ್ಲಕ್ಷ್ಯ ತಾಳಿದೆ. ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿರುವ ರಾಜ್ಯದ ಜನತೆ ಅದರಲ್ಲಿಯೂ ಕಲ್ಯಾಣ ಕರ್ನಾಟಕದ ಜನತೆ ಮೌನವಾಗಿದೆ. ಶಾಸಕರು ಬರಗಾಲ ಎದುರಿಸುವ ತುರ್ತು ಕ್ರಮಗಳಿಗೆ ಜಿಲ್ಲಾವಾರು ವಿಶೇಷ ಅನುದಾನದ ಬೇಡಿಕೆ ಇಡಬೇಕಿತ್ತು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನೀರು ಹಿಡಿಯಲು, ಸಂಗ್ರಹಿಸಲು ಬಡಿದಾಡುವ ಜನ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಸಹ ಬರಲಿಕ್ಕಿಲ್ಲ. ಬ್ರಿಡ್ಜ್ ಕಂ ಬ್ಯಾರೇಜ್ 115 ಕಾಮಗಾರಿಗಳಿಗೆ 200 ಕೋಟಿ ರೂ.ಗಳು, ಕೆಸಿ ವ್ಯಾಲಿ ಎರಡನೇ ಹಂತದ 272 ಕೆರೆಗಳಿಗೆ ನೀರು ತುಂಬಿಸುವ ಯೋಜನೆ (ಮೊತ್ತ ನಿಗದಿಪಡಿಸಲಿಲ್ಲ), ಮಾನ್ವಿ, ಕೆ.ಆರ್. ನಗರ, ನಂಜನಗೂಡು, ಚಿತ್ತಾಪುರ, ಸೊರಬ್, ಜೇವರ್ಗಿ, ಕುಕನೂರು ಮುಂತಾದ ತಾಲ್ಲೂಕುಗಳ ಕೆರೆ ತುಂಬಿಸಲು 850 ಕೋಟಿ ರೂ.ಗಳ ಮೊತ್ತವನ್ನು ನಿಗದಿಪಡಿಸಿದ್ದು ಬಕಾಸುರನ ಹೊಟ್ಟೆಗೆ ಅರೆಕಾಸು ಮಜ್ಜಿಗೆಯಂತಾಗಿದೆ ಎಂದು ಅವರು ಕಟುವಾಗಿ ಟೀಕಿಸಿದ್ದಾರೆ.
ತುರ್ತು ಬದುಕಲು ಅವಶ್ಯಕ ಜೀವ ಜಲ ಕೇಳುವುದು ಬಿಟ್ಟು ಅದು ಆಗಿಲ್ಲ, ಇದು ಆಗಿಲ್ಲ ಎಂದು ಬಜೆಟ್ ವಿಶ್ಲೇಷಣೆ ಮಾಡುವುದು ಭಿಕ್ಷುಕನ ಹಗಲು ಗನಸು ಆಗುತ್ತದೆ. ಒಂದೆಡೆ ಬಿಸಿಲಿನ ಬಿಸಿ, ನೀರಿನ ಕೊರತೆಗಳಿಂದ ದನಕರುಗಳಿಂತರಲಿ ಜನರೇ ಬದುಕುವುದು ಕಷ್ಟಸಾಧ್ಯವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.