ಬರಗಾಲದಿಂದ ತತ್ತರಿಸಿರುವ ರೈತರು: ಮಳೆಗಾಗಿ ಕಪ್ಪೆಹಬ್ಬ ಆಚರಣೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಏ.30: ಭೀಕರ ಬರಗಾಲದಿಂದ ತತ್ತರಿಸಿ ಹೋಗಿರುವ ಗ್ರಾಮೀಣ ಪ್ರದೇಶದ ಜನ ಮಳೆಗಾಗಿ ಪ್ರಾರ್ಥಿಸಿ ಮೌಡ್ಯಗಳ ಕಡೆಗೆ ಹೋಗುತ್ತಿದ್ದಾರೆ. ತಾಲೂಕಿನ ಕಸಬಾ ಹೋಬಳಿಯ ಮೊಸಳೆಕೊಪ್ಪಲು ಗ್ರಾಮಸ್ಥರು ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳ ಮದುವೆ ಮಾಡಿದ್ದಾರೆ.
ಕಪ್ಪೆಗಳ ಮದುವೆ ಮಾಡಿದರೆ ಮಳೆ ಬರುತ್ತದೆ ಎನ್ನುವುದು ಒಂದು ನಂಬಿಕೆ. ಕಾಕತಾಳೀಯ ಎಂಬಂತೆ ಕೆಲವೊಮ್ಮೆ ನಾವು ಆಚರಿಸುವ ಸಾಂಪ್ರದಾಯಕ ಆಚರಣೆಗಳು ಫಲಿಸಿ ಮಳೆಬಂದು ಜನಸಾಮಾನ್ಯರ ನಂಬಿಕೆಗಳನ್ನು ಇಮ್ಮಡಿಗೊಳಿಸಿರುವ ಉದಾಹರಣೆಗಳೂ ಉಂಟು. ಆ ನಂಬಿಕೆಯಂತೆ ಮಳೆಗಾಗಿ ಪ್ರಾರ್ಥಿಸಿ ತಾಲೂಕಿನ ಕಸಬಾ ಹೋಬಳಿಯ ಮೊಸಳೆಕೊಪ್ಪಲು ಗ್ರಾಮದಲ್ಲಿ ಕಪ್ಪೆಗಳ ಹಬ್ಬ ಆಚರಿಸಲಾಯಿತು.
ಗ್ರಾಮದ ಜನರೆಲ್ಲ ತಮಗೆ ಸಾಧ್ಯವಾದಷ್ಟು ಹಣ ಹಾಗೂ ಧಾನ್ಯವನ್ನು ಸಂಗ್ರಹಿಸಿ ಗ್ರಾಮದ ಸಮೀಪವಿರುವ ಕೆರೆಯ ಬಳಿ ಕಳಸಪೂಜೆ ನಡೆಸಿ, ಸಂಗ್ರಹಿಸಲ್ಪಟ್ಟ ಧಾನ್ಯದಿಂದ ಅಡುಗೆ ಮಾಡಿ ಮಳೆಗಾಗಿ ದೇವರನ್ನು ಪ್ರಾರ್ಥಿಸಿ ಊರಿನ ಜನರು ಸಾಮೂಹಿಕವಾಗಿ ಊಟ ಮಾಡಿದರು. ಕಪ್ಪೆಗಳನ್ನು ಹಿಡಿದು ತಂದು ಸಾಂಪ್ರದಾಯಿಕ ವಿಧಿ ವಿಧಾನಗಳ ಮೂಲಕ ಅವುಗಳಿಗೆ ಮದುವೆ ಮಾಡಿಸಲಾಯಿತು. ಬಾಲಕನೊಬ್ಬನ ತಲೆಯ ಮೇಲೆ ವದೂ ವರ ಕಪ್ಪೆಗಳನ್ನು ಅಲಂಕೃತ ಬುಟ್ಟಿಯೊಂದರಲ್ಲಿಟ್ಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿದರು. ಮೆರವಣಿಗೆ ಮನೆಗಳ ಮುಂದೆ ಬಂದಾಗ ಕಪ್ಪೆಗಳನ್ನು ಹೊತ್ತು ಬರುವ ದಾರಿಯುದ್ದಕ್ಕೂ ಗ್ರಾಮಸ್ಥರು ತಮ್ಮ ತಮ್ಮ ಮನೆಯ ಬಾಗಿಲಿಗೆ ನೀರು ಹಾಕಿ ಮೆರವಣಿಗೆಯನ್ನು ಸ್ವಾಗತಿಸಿದರಲ್ಲದೆ ಕಪ್ಪೆಯನ್ನು ತಲೆಯ ಮೇಲೆ ಹೊತ್ತು ಬರುತ್ತಿದ್ದ ಬಾಲಕರ ಕಾಲಿಗೂ ನೀರು ಹಾಕಿ ಮದುವೆಯನ್ನು ಸಂಭ್ರಮಿಸಿದರು. ಕಪ್ಪೆಗಳ ಮದುವೆ ಹಾಗೂ ಈ ವಿಶೇಷ ಪೂಜೆಯಿಂದ ವರುಣ ಕೃಪೆ ತೋರುತ್ತಾನ ಎಂಬುದನ್ನು ಕಾದು ನೋಡಬೇಕಿದೆ.
ಕಪ್ಪೆಗಳ ಮದುವೆಯ ಬಗ್ಗೆ ಮಾತನಾಡಿದ ಪತ್ರಕರ್ತ ದಿನೇಶ್ ಕಪ್ಪೆಗಳ ಮದುವೆ ಮಾಡಿದರೆ ಮಳೆ ಬರುತ್ತದೆ ಎನ್ನುವುದು ನಮ್ಮ ಜನಪರ ನಂಬಿಕೆ. ಈ ನಂಬಿಕೆಯ ಪ್ರಕಾರ ಮಳೆಯಿಲ್ಲದ ಸಂದರ್ಭದಲ್ಲಿ ರಾಜ್ಯದ ನಾನಾ ಭಾಗಗಳಲ್ಲಿ ಗ್ರಾಮೀಣ ಜನ ಕಪ್ಪೆಗಳ ಮದುವೆ ಮಾಡಿದ್ದಾರೆ. ಕಪ್ಪೆಗಳ ಮದುವೆಯ ಅನಂತರ ಕೆಲವು ಕಡೆ ಮಳೆಯಾಗಿರುವುದೂ ಉಂಟು. ಕೆ.ಆರ್.ಪೇಟೆ ತಾಲೂಕಿನಲ್ಲಿ ಈ ವರ್ಷ ನಿರೀಕ್ಷಿತ ಪ್ರಮಾಣದ ಮಳೆಯಾಗಿಲ್ಲ. ಮಳೆ ಬೀಳದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಹೇಮಾವತಿ ಜಲಾಶಯದ ಕಾಲುವೆಗಳ ಮೂಲಕ ಕೆರೆ-ಕಟ್ಟೆಗಳನ್ನು ತುಂಬಿಸಿ ರೈತರಿಗೆ ಅನುಕೂಲ ಮಾಡಿಕೊಡುತ್ತಿತ್ತು. ಆದರೆ ಈ ವರ್ಷ ನಮ್ಮ ಕೆರೆ ಕಟ್ಟೆಗಳಿಗೆ ಹೇಮೆಯ ನೀರು ಹರಿದಿಲ್ಲ. ಕೆರೆಗಳು ಒಣಗಿ ನಿಂತಿದ್ದು ಅಂತರ್ಜಲ ಮಟ್ಟ ಕುಸಿದಿದೆ. ಅಂತರ್ಜಲ ಕುಸಿತದಿಂದ ನಮ್ಮ ಕೊಳವೆಬಾವಿಗಳು ಸ್ಥಗಿತಗೊಂಡಿದ್ದು ಪಂಪ್‍ಸೆಟ್ ಆಧಾರಿತ ಕೃಷಿ ಅಸ್ತವ್ಯಸ್ಥ ಗೊಂಡಿದೆ. ನಮ್ಮ ತೆಂಗು, ಅಡಿಕೆ ಮುಂತಾದ ಧೀರ್ಘಕಾಲಿಕ ವಾಣಿಜ್ಯ ಬೆಳೆಗಳು ಒಣಗುತ್ತಿದ್ದು ರೈತರ ಬದುಕು ನಾಶವಾಗುವ ಅಪಾಯಕಾರಿ ಪರಿಸ್ಥಿತಿ ಬಂದಿದೆ. ಮಳೆಬಂದರೆ ಮಾತ್ರ ನಮ್ಮ ಬೆಳೆ ಉಳಿಯಲು ಹಾಗೂ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲು ಸಾಧ್ಯ. ಆದಕಾರಣ ನಾವು ಕಪ್ಪೆಗಳ ಮದುವೆಯನ್ನು ಮೌಢ್ಯ ಎಂದು ಭಾವಿಸದೆ ನಮ್ಮ ಹಿರಿಯರ ಆಚರಣೆಗಳ ಮೇಲೆ ನಂಬಿಕೆಯಿಟ್ಟು ಕಪ್ಪೆಗಳ ಮದುವೆ ಮಾಡಿದ್ದಾರೆ ಗ್ರಾಮದಲ್ಲಿ ವಿಶೇಷ ಪೂಜೆ ಮಾಡಿ ಮಳೆಗಾಗಿ ಪ್ರಾರ್ಥಿಸಿದ್ದು ವರುಣನ ಕೃಪೆಗಾಗಿ ಕಾಯುತ್ತಿದ್ದೇವೆ ಎಂದಿದ್ದಾರೆ.
ಗ್ರಾಮದ ಯಜಮಾನರುಗಳಾದ ನಿಂಗೇಗೌಡ, ರಂಗೇಗೌಡ,ರಾಜೇಗೌಡ, ನಾಗೇಗೌಡ,ಪು: ರಾಮಕೃಷ್ಣೇಗೌಡ,ಚಂದ್ರೇಗೌಡ,ರಾಮಕೃಷ್ಣೇಗೌಡ,ಸುರೇಶ, ಗ್ರಾಮಸ್ಥರಾದ ಕೃಷ್ಣೇಗೌಡ, ಕಾಂತರಾಜು, ಕೇಬಲ್ ಅಶೋಕ, ಎಂ.ಆರ್. ಸುರೇಶ ಅಣ್ಣೇಗೌಡ, ಸುರೇಶ(ಲಕ್ಷ), ವಿಜಯ್ ಕುಮಾರ್ ಸೇರಿದಂತೆ ಹಲವರು ಕಪ್ಪೆಗಳ ಮದುವೆ ಕಾರ್ಯದ ನೇತೃತ್ವ ವಹಿಸಿ ಮೆರವಣಿಗೆಯಲ್ಲಿದ್ದರು.