ಬರಗಾಲದಲ್ಲಿ ಜನರಿಗೆ ಅನ್ನ, ನೀರು ನೀಡಲು ಆಗದ ಕಾಂಗ್ರೆಸ್ ಸರ್ಕಾರ: ಬಿಜೆಪಿ ವಕ್ತಾರ ಎಂ.ಎ.ಮೋಹನ್

ಸಂಜೆವಾಣಿ ನ್ಯೂಸ್
ಮೈಸೂರು: ಮಾ.30:- ಬರಗಾಲದಲ್ಲಿ ತತ್ತರಿಸುತ್ತಿರುವ ಜನರಿಗೆ, ಪ್ರಾಣಿ ಪಕ್ಷಗಳಿಗೆ ಅನ್ನ, ನೀರು ನೀಡದ ರಾಜ್ಯ ಕಾಂಗ್ರೆಸ್ ಸರ್ಕಾರ ನಿಷ್ಕರುಣಿಯಂತೆ ವರ್ತಿಸುತ್ತಿದೆ ಎಂದು ಬಿಜೆಪಿ ಮೈಸೂರು ನಗರ ವಕ್ತಾರ ಎಂ.ಎ.ಮೋಹನ್ ಕಿಡಿಕಾರಿದರು.
ಶುಕ್ರವಾರ ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತೀವ್ರ ಬರಗಾಲದಿಂದಾಗಿ ನದಿ, ಕೆರೆ, ಅಂತರ್ಜಲವೆಲ್ಲಾ ಬತ್ತಿ ಹೋಗಿವೆ. ಜನರು, ಜಾನುವಾರುಗಳು, ಪ್ರಾಣಿ ಪಕ್ಷಿಗಳೂ ಕೂಡ ಕುಡಿಯುವ ನೀರಿಗಾಗಿ ಹಾಹಾಕಾರ ಪಡುತ್ತಿದ್ದಾರೆ. ಬೆಂಗಳೂರಿನಲ್ಲಂತೂ ಜನರಿಗೆ ಕುಡಿಯುವ ನೀರು ಸಿಗದೆ ಜನ ಗುಳೆ ಹೋಗುತ್ತಿದ್ದಾರೆ. ಹೀಗಿದ್ದರೂ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನರಿಗೆ ಕುಡಿಯುವ ನೀರಿನ ಪೂರೈಕೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಜನರ ನೀರಿನ ಹಾಹಾಕಾರವನ್ನು ಈ ಸರ್ಕಾರ ಗಂಭೀರವಾಗಿಯೇ ಪರಿಗಣಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಪಿಎಲ್ ಕಾಡ್ರ್ನವರಿಗೆ 10 ಕೆ.ಜಿ ಅಕ್ಕಿ ಕೊಡುವುದಾಗಿ ಹೇಳಿದ ಕಾಂಗ್ರೆಸ್ ಸರ್ಕಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೀಡುತ್ತಿರುವ ಐದು ಕೆಜಿ ಉಚಿತ ಅಕ್ಕಿಯನ್ನೂ ಕೂಡ ಜನರಿಗೆ ಸರಿಯಾಗಿ ತಲುಪಿಸುತ್ತಿಲ್ಲ. ಇನ್ನುಳಿದ ಐದು ಕೆಜಿ ಅಕ್ಕಿಯ ಬದಲು ಹಣ ನೀಡುವುದಾಗಿ ಹೇಳಿದ್ದ ಕಾಂಗ್ರೆಸ್ ಸರ್ಕಾರ ಆ ಹಣವನ್ನೂ ಕೂಡ ಕೊಟ್ಟಿಲ್ಲ, ಎಪಿಎಲ್ ಕಾಡ್ರ್ದಾರರಿಗೂ ಪಡಿತರ ಅಂಗಡಿಯಲ್ಲಿ ಅಕ್ಕಿಯನ್ನು ಕೊಡುತ್ತಿಲ್ಲ. ಹೀಗಾದರೆ ಜನರೇನು ಹಸಿವಿನಿಂದ ಸಾಯಬೇಕೇ ಎಂದು ತರಾಟೆಗೆ ತೆಗೆದುಕೊಂಡರು.
ಕಳೆದ ಎರಡು ದಿನಗಳ ಹಿಂದೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಿಎಂ ಸಿದ್ದರಾಮಯ್ಯನವರು ಬಿಜೆಪಿ ಸರ್ಕಾರ ಮೈಸೂರಿನ ಲ್ಯಾನ್ಸ್ಡೌನ್, ದೇವರಾಜ ಮಾರುಕಟ್ಟೆಯ ಪುನರ್ ನಿರ್ಮಾಣ ಮಾಡಲಿಲ್ಲ ಎಂದು ಆರೋಪಿಸಿದ್ದಾರೆ.
ಆದರೆ ಸಿದ್ದರಾಮಯ್ಯನವರು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದರೂ ಇವರು ಯಾಕೇ ಮಾಡಿಲಿಲ್ಲ. ಈಗ ಬಜೆಟ್‍ನಲ್ಲಿ ಈ ಎರಡು ಪಾರಂಪರಿಕ ಕಟ್ಟಡಗಳನ್ನು ಪುನರ್ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆಯೇ ವಿನಃ ಅನುದಾನವನ್ನು ಮಾತ್ರ ನಿಗದಿಪಡಿಸಿಲ್ಲ. ಅಭಿವೃದ್ಧಿ ಕೆಲಸಗಳಿಲ್ಲ ದುಡ್ಡಿಲ್ಲದಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದಾರೆ. ಜನರು ಇವರ ಮಾತಿಗೆ ಮರುಳಾಗುವುದಿಲ್ಲ ಎಂದು ಟಾಂಗ್ ನೀಡಿದರು.
ಕಾಂಗ್ರೆಸ್ ಸಂಸ್ಕೃತಿ ಹೀನ ಪಕ್ಷ;
ಜಗತ್ತಿನಲ್ಲಿ ಸಂಸ್ಕೃತಿ ಇಲ್ಲದ ಯಾವುದಾದರೂ ಪಕ್ಷವಿದ್ದರೆ ಅದು ಕಾಂಗ್ರೆಸ್ ಮಾತ್ರ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ?ಮಣ್ ಕಳೆದ ಮೂರು ದಿನಗಳ ಹಿಂದೆ ಸಂಸ್ಕೃತಿಯಿಲ್ಲದರಂತೆ ಮೈಸೂರಿನ ರಾಜಮನೆತನಕ್ಕೆ ಸೇರಿದ ಬಿಜೆಪಿ ಅಭ್ಯರ್ಥಿ ಯದುವೀರ್ ಬಗ್ಗೆ ಮಾತನಾಡಿದರು.
ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರರಾದ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಕೇಂದ್ರ ಗೃಹ ಸಚಿವ ಅಮೀತ್ ಶಾ ಹಾಗೂ ಅವರ ಪುತ್ರರನ್ನು ಗೂಂಡಾಗಳು ಎಂದು ಕರೆಯುವ ಮೂಲಕ ತಮ್ಮ ಸಂಸ್ಕೃತಿ ಎಂತಹದ್ದು ಎಂಬುದನ್ನು ತೋರಿಸಿಕೊಂಡಿದ್ದಾರೆ.
ಜಮ್ಮು ಕಾಶ್ಮೀರದ ಸಮಸ್ಯೆ, ಭಯೋತ್ಫಾಧಕರನ್ನು ಹತ್ತಿಕ್ಕಿದ್ದು ಸೇರಿದಂತೆ ದೇಶದ ಅನೇಕ ಸಮಸ್ಯೆಗಳನ್ನು ಕೇಂದ್ರ ಗೃಹ ಸಚಿವರಾಗಿ ಅಮೀತ್ ಶಾ ಅವರು ಬಗೆಹರಿಸಿದ್ದಾರೆ. ಅಂತಹ ದೇಶದ ಹಿರಿಯ ನಾಯಕರನ್ನು ಗೂಂಡಾ ಎಂದು ಕರೆದಿರುವುದು ಖಂಡನೀಯ. ಡಾ.ಯತೀಂದ್ರ ಸಿದ್ದರಾಮಯ್ಯ ಒಬ್ಬರು ವೈದ್ಯರೂ ಕೂಡ ಆಗಿದ್ದಾರೆ.
ಓದಿದವರು. ಹಾಗಾಗಿ ಅವರು ತಿಳುವಳಿಕೆಯಿಂದ ಸಂಸ್ಕೃತರಂತೆ, ಸಂಭಾವಿತರಂತೆ ಮಾತನಾಡದೆ ಸಂಸ್ಕೃತ ಹೀನರಂತೆ ಮಾತನಾಡುತ್ತಿದ್ದಾರೆ. ಅವರಿಗೆ ಸಮಾಜ, ನ್ಯಾಯಾಂಗದ ವ್ಯವಸ್ಥೆ ಮೇಲೆ ಗೌರವವಿದ್ದಂತೆ ಕಾಣುತ್ತಿಲ್ಲ. ಹಾಗಾಗಿ ಸಿಎಂ ಸಿದ್ದರಾಮಯ್ಯನವರು ತಮ್ಮ ಪುತ್ರ ಡಾ.ಯತೀಂದ್ರರಿಗೆ ಸರಿಯಾದ ತಿಳುವಳಿಕೆ, ಬುದ್ದಿಯನ್ನು ಹೇಳಿ ಕಲಿಸಲಿ. ಅವರಿಗೆ ಸಾಧ್ಯವಾಗದಿದ್ದರೆ, ನಮ್ಮ ಬಳಿಗೆ ಕಳುಹಿಸಲಿ. ನಾವು ಯತೀಂದ್ರ ಸಿದ್ದರಾಮಯ್ಯರಿಗೆ ಸರಿಯಾದ ತಿಳುವಳಿಕೆ ಹೇಳಿ, ಸರಿಯಾದ ಸಂಸ್ಕೃತಿಯನ್ನು ಕಲಿಸಿಕೊಡುತ್ತೇವೆ ಎಂದರು.
ಕೇಂದ್ರ ಗೃಹ ಸಚಿವರನ್ನು ಅವಹೇಳನ ಮಾಡಿರುವ ಡಾ.ಯತೀಂದ್ರ ಸಿದ್ದರಾಮಯ್ಯ ಕೂಡಲೇ ಬಹಿರಂಗವಾಗಿ ದೇಶದ ಜನರಲ್ಲಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮೈಸೂರು ನಗರ ಮಾಧ್ಯಮ ಸಂಚಾಲಕ ಮಹೇಶ್‍ರಾಜೇ ಅರಸ್ ಉಪಸ್ಥಿತರಿದ್ದರು.