ಬರಗಾಲದಲ್ಲಿ ಕೈ ಹಿಡಿದಿದೆ ಉದ್ಯೋಗ ಖಾತ್ರಿ: ಎಂವೈಪಿ

ಕಲಬುರಗಿ:ಜೂ.23: ಮಳೆ ಅಭಾವದಿಂದ ಕಂಗಾಲಾಗಿರುವ ಪ್ರಸ್ತುತ ಕಷ್ಟಕರ ಕಾಲದಲ್ಲಿ ಉದ್ಯೋಗ ಖಾತ್ರಿ ಕೈ ಹಿಡಿದು ಮುನ್ನೆಡೆಸಿದೆ ಎಂದು ಅಫಜಲಪುರ ಕ್ಷೇತ್ರದ ಶಾಸಕ ಎಂ.ವೈ ಪಾಟೀಲ್ ಹೇಳಿದರು.

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ 50 ದಿನಗಳ ಕಾಲ ಉದ್ಯೋಗ ಖಾತ್ರಿ ದಿನಗಳನ್ನು ಪೂರೈಸಿದ ಪ್ರಯುಕ್ತ ಉದ್ಯೋ ಖಾತ್ರಿಯಿಂದ ನಿರ್ಮಾಣಗೊಂಡ ಕಾಮಗಾರಿಗಳನ್ನು ವೀಕ್ಷಿಸಿ ಹಾಗೂ ಕಾರ್ಮಿಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ನಮ್ಮ ಭಾಗದಲ್ಲಿ‌ಮಳೆ ಕೊರತೆಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇದೇ ಕಾರಣಕ್ಕೆ ಕುಡಿಯುವ ನೀರು ಪೂರೈಕೆ, ಉದ್ಯೋಗ ಖಾತ್ರಿ ಕಾಮಗಾರಿಗಳನ್ನು ವ್ಯಾಪಕವಾಗಿ ಕೈಗೊಳ್ಳಲಾಗಿದೆ ಎಂದರು.

ಕೆರೆ ಹೂಳೆತ್ತಿರುವುದು, ಹೊಲಗಳ ಬದುಗಳ ನಿರ್ಮಾಣ ಕಾರ್ಯ ಉತ್ತಮವಾಗಿವೆ.‌ ಇದರಿಂದ ಎಲ್ಲರಿಗೂ ಅನುಕೂಲ. ಶೃದ್ದೆಯಿಂದ ಕೆಲಸ ಮಾಡಿದರೆ ಖಂಡಿತ ಫಲ ಸಿಗುತ್ತದೆ ಎಂದು ಪಾಟೀಲ್ ರು ಮಾರ್ಮಿಕವಾಗಿ ನುಡಿದರು.

ಉದ್ಯೋಗ ಖಾತ್ರಿ ಕಾರ್ಮಿಕರು ಇದೇ ಸಂದರ್ಭದಲ್ಲಿ ಶಾಸಕರನ್ನಿ ಸನ್ಮಾನಿಸಿ, ನಾವು ಹೊನ್ನಕಿರಣಗಿ ಗ್ರಾಮದಲ್ಲಿ 350 ಕ್ಕೂ ಹೆಚ್ಚು ಕಾರ್ಮಿಕರಿದ್ದು, ಈಗಾಗಲೇ 50 ಮಾನವ ದಿನಗಳನ್ನು ಪೂರ್ಣಗೊಳಿಸಲಾಗಿದೆ. ಮಳೆ ಬಾರದೇ ಬರಗಾಲ ಪರಿಸ್ಥಿತಿ ನಿರ್ಮಾಣ ವಾಗಿದ್ದರಿಂದ ಇನ್ನೂ 50 ದಿನಗಳ ಕಾಲ ಉದ್ಯೋಗ ಖಾತ್ರಿ ಕೆಲಸ ಸಿಗಬೇಕೆಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸದ ಶಾಸಕರು, ಇನ್ನಷ್ಟು ಉದ್ಯೋಗ ಖಾತ್ರಿ ದಿನಗಳನ್ನು ವಿಸ್ತರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವುದಾಗಿ ಸ್ಪಷ್ಟ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಶಾಸಕ ಎಂ.ವೈ ಪಾಟೀಲ್ ಹೊಸ ಜಾಬ್ ಕಾರ್ಡಗಳನ್ನು ವಿತರಿಸಿದರು. ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಸಾಯಬಣ್ಣ ನೀಲಪ್ಪಗೋಳ, ಫರಹತಾಬಾದ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಶಾಖ್ ಪಟೇಲ್, ಮಾಜಿ ಅಧ್ಯಕ್ಷ ಸುರೇಶ ತಿಬಶೆಟ್ಟಿ, ತಾಲೂಕಾ ಪಂಚಾಯತ್ ಮಾಜಿ ಸದಸ್ಯ ಸುರೇಶ ಜೋಗುರ, ಪ್ರಮುಖರಾದ ನಾಗೀಂದ್ರಪ್ಪ ನಿಂಬರಗಿ, ಅಶೋಕ ಕಂಚೇಗೌಡ, ಜ್ಯೋತಿ ಮರಗೋಳ, ಸಂಗಮನಾಥ್, ಸುಧೀರ ಸಂಗಾಣೆ ಸೇರಿದಂತೆ ಮುಂತಾದವರಿದ್ದರು.