ಬಯಲು ಗ್ರಂಥಾಲಯ-ಪುಸ್ತಕಗಳ ಬಿಡುಗಡೆ

ಕೋಲಾರ, ಮೇ ೧:ಉತ್ತಮ ಸಂವಹನ ಕೌಶಲ್ಯ ಬೆಳೆಯಲು ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಿ, ಮೊಬೈಲ್‌ಗೆ ದಾಸರಾಗುವುದನ್ನು ತಪ್ಪಿಸಿ ಎಂದು ಜಿಲ್ಲಾ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಕರೆ ನೀಡಿದರು.
ನಗರದ ಜಯನಗರದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನದಲ್ಲಿ ಕೋಲಾರ ಕ್ರೀಡಾಸಂಘದಿಂದ ದಿವಂಗತ ಸುಧಾಕರ್ ನೆನಪಿನಲ್ಲಿ ನಡೆಸುತ್ತಿರುವ ಬೇಸಿಗೆ ಶಿಬಿರದಲ್ಲಿ ಬಯಲು ಗ್ರಂಥಾಲಯಕ್ಕೆ ಚಾಲನೆ ಹಾಗೂ ರಾಷ್ಟ್ರೋತ್ಥಾನ ಪರಿಷತ್ ಹೊರ ತಂದಿರುವ ದೇಶಭಕ್ತರು ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.
ಮಕ್ಕಳು ಓದು ಎಂದರೆ ಕೇವಲ ಪಠ್ಯಪುಸ್ತಕ ಓದು,ಪರೀಕ್ಷೆಗೆ ಸೀಮಿತವಾಗಿದ್ದು, ಪಠ್ಯೇತರ ಪುಸ್ತಕಗಳ ಓದುವುದನ್ನು ಮರೆತಿರುವುದರಿಂದ ಸಂಪೂರ್ಣ ಜ್ಞಾನ ಸಿಗುತ್ತಿಲ್ಲ, ಗೂಗಲ್‌ಗೆ ದಾಸರಾಗಿ ಅಗತ್ಯ ಜ್ಞಾನ ಮಾತ್ರ ಹುಡುಕುವ ಮೂಲಕ ಸರ್ವಾಂಗೀಣ ಕಲಿಕೆಯಿಂದ ವಂಚಿತರಾಗುತ್ತಿದ್ದಾರೆ ಎಂದರು.ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಪುಸ್ತಕ ಓದುವ ಅಭ್ಯಾಸ ಬೆಳೆಸಿದರೆ ಅವರು ದುಶ್ಚಟಗಳತ್ತ ಗಮನಹರಿಸಲು ಸಾಧ್ಯವಾಗುವುದಿಲ್ಲ, ಇದರಿಂದ ಉತ್ತಮ ಸಮಾಜ ನಿರ್ಮಾಣದ ಜತೆಗೆ ಮಕ್ಕಳಲ್ಲಿ ಸಾಮಾನ್ಯ ಜ್ಞಾನ, ನೈತಿಕ ಮೌಲ್ಯಗಳು ಬೆಳೆಯಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.
ಮಕ್ಕಳು ಪ್ರತಿ ವಾರ ಓದಿದ ರಾಷ್ಟ್ರಸಾಧಕರ ಪುಸ್ತಕಗಳಲ್ಲಿನ ಮಾಹಿತಿಯನ್ನು ಕಥೆಯ ರೂಪದಲ್ಲಿ ತಿಳಿಸಲು ಕ್ರಮವಹಿಸುವ ಮೂಲಕ ಮಕ್ಕಳಲ್ಲಿ ಗ್ರಂಥಾಲಯದ ಮಹತ್ವ, ಅಗತ್ಯತೆ ಕುರಿತು ಮನವರಿಕೆ ಮಾಡುವ ಸಣ್ಣಪ್ರಯತ್ನ ಇದಾಗಿದೆ ಎಂದರು.
ಕೋಲಾರ ಕ್ರೀಡಾಸಂಘದ ಕಾರ್ಯದರ್ಶಿ ಎಂ.ಹರೀಶ್‌ಬಬು ನಿರೂಪಿಸಿದ ಕಾರ್ಯಕ್ರಮದಲ್ಲಿ ಕರ್ನಾಟಕ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಉಪಾಧ್ಯಕ್ಷ ನಾ.ನಾರಾಯಣಸ್ವಾಮಿ, ಸೇರಿದಂತೆ ಮಕ್ಕಳು, ಪೋಷಕರು ಉಪಸ್ಥಿತರಿದ್ದು, ನಗರದ ಆರ್ಯವೈಶ್ಯ ಮಂಡಳಿ, ವಾಸವಿ ಕ್ಲಬ್ ವತಿಯಿಂದ ಮಕ್ಕಳಿಗೆ ಬೆಳಗಿನ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.