ಬಯಲು ಆಂಜನೇಯ ದೇವಸ್ಥಾನದಲ್ಲಿ ಶ್ರೀ ಪುರಂದರ ದಾಸರ ಆರಾಧನೆ

ರಾಯಚೂರು,ಜ.೨೨- ನಗರದ ಜವಾಹರನಗರ ಬಯಲು ಆಂಜನೇಯ ದೇವಸ್ಥಾನದಲ್ಲಿ ಶ್ರೀ ಪುರಂದರದಾಸರ ಆರಾಧನೆಯನ್ನು ಇಂದು ಸಂಜೆ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ವೇದಮೂರ್ತಿ ಪಂಡಿತ್ ಪ್ರಹ್ಲಾದ ಆಚಾರ್ಯ ಗಲಗಲಿ ಅವರು ಮಾತನಾಡಿ, ಪುರಂದರದಾಸರು, ದಾಸ ಶ್ರೇಷ್ಠರು, ನಾಲ್ಕು ಲಕ್ಷಕ್ಕೂ ಅಧಿಕ ಸಂಕೀರ್ತನೆಗಳನ್ನು ರಚಿಸಿದ ಮಹಾನುಭಾವರು. ಅವರ ವಿಚಾರಗಳು ಯಾವುದೇ ಜಾತಿಗೆ ಸೀಮಿತವಾಗಿಲ್ಲ. ಮಾನವ ಜನ್ಮ ದೊಡ್ಡದು ಅದನ್ನು ಹಾಳು ಮಾಡಿಕೊಳ್ಳಬೇಡಿ ಹುಚ್ಚಪ್ಪ ಗಳಿರಾ!! ಎಂದು ಮಾನವ ಸಮುದಾಯಕ್ಕೆ ಆತ್ಮಸ್ಥೈರ್ಯವನ್ನು ತುಂಬಿದ ದಾಸ ಶ್ರೇಷ್ಠರು ಎಂದು ಹೇಳಿದರು.
ಇನ್ನೊಬ್ಬ ಪಂಡಿತರಾಗಿರುವ ಸಮೀರ್ ಆಚಾರ್ಯ ಅವರು ಮಾತನಾಡಿ, ಪುರಂದರ ದಾಸರ ಸಂಕೀರ್ತನೆಗಳು, ಉಗಾ ಬೋಗಗಳು, ಮುಂಡಿಗೆಗಳು , ಭಾಗವತ ಧರ್ಮವನ್ನು ಸಾರುವ ಜೊತೆಗೆ ಮಾನವೀಯ ಮೌಲ್ಯಗಳನ್ನು ಸಾರುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಂಡಿತರಾದ ಹರಿ ಆಚಾರ್ಯ ಅವರು ಮಾತನಾಡಿ, ಶ್ರೀ ಪುರಂದರದಾಸರು ಮಧ್ವ ಸಿದ್ದಾಂತದ ಆಧಾರದ ಮೇಲೆ ಸಂಕೀರ್ತನೆಗಳು ರಚಿಸಿದರೂ ಸಹ, ಸಮಾಜದಲ್ಲಿರುವ ಹಲವಾರು ಅಂಕುಡೊಂಕುಗಳನ್ನು ತಿದ್ದುವ ರೀತಿಯಲ್ಲಿ ಸಹಕಾರಿಯಾಗಿವೆ ಎಂದು ಹೇಳಿದರು. ಶೃತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಮಾತನಾಡಿ, ಪುರಂದರದಾಸರ ಕೀರ್ತನೆಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ಕೀರ್ತನೆಗಳಲ್ಲಿ ನೈತಿಕತೆ, ಮಾನವೀಯ ಮೌಲ್ಯಗಳು, ಆದರ್ಶಗಳು ಇದ್ದು, ಇವುಗಳು ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಬಹಳ ಉಪಯುಕ್ತವಾಗಿವೆ.
ಆದುದರಿಂದ ಕರ್ನಾಟಕ ಸರ್ಕಾರ ಪುರಂದರದಾಸರ ಆರಾಧನೆಯನ್ನು ಆಚರಿಸಬೇಕೆಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ರವೀಂದ್ರ ಕುಲಕರ್ಣಿ ಸ್ವಾಗತಿಸಿದರು. ರಾಘವೇಂದ್ರ ಮಠದ್, ಜಯತೀರ್ಥ ದಾಸ್, ಸುದರ್ಶನ್, ಅರ್ಚಕರಾದ ಶ್ರೀಧರ್ ಮುಂಗಲಿ, ವೆಂಕಟೇಶ್, ರಾಜಪ್ಪಾಚಾರ್ಯ, ಅಶ್ವಥ್ ಮುಂತಾದವರಿದ್ದರು.