
ಚಿತ್ರದುರ್ಗ, ಜ.13; ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಅಂತರ್ಜಲ ಹೆಚ್ಚಳಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎನ್.ಇ.ಜೀವನಮೂರ್ತಿ ಹೇಳಿದರು.
ನಗರದ ತಮಟಕಲ್ಲು ರಸ್ತೆಯ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬಿ.ಎಂ.ನಂಜುಂಡಪ್ಪ ವರದಿಯ ಆಧಾರ ಮೇಲೆ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯು 1995ರಿಂದ ಜಾರಿಗೆ ಬಂದಿದ್ದು, ಬಯಲುಸೀಮೆ ಪ್ರದೇಶದ ಸರ್ವಾಗೀಣ ಅಭಿವೃದ್ಧಿಗಾಗಿ ಮಂಡಳಿ ರಚನೆಯಾಗಿದೆ. ಈ ಪ್ರದೇಶಗಳ ಕೃಷಿ ತತ್ಸಂಬಂಧಿತ ಚಟುವಟಿಕೆಗಳಾದ ಕೃಷಿ, ತೋಟಗಾರಿಕೆ, ಅರಣ್ಯ, ಪಶು ಸಂಗೋಪನೆ, ಮಣ್ಣು ಮತ್ತು ನೀರು ಸಂರಕ್ಷಣಾ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.
ರಾಜ್ಯದ ಬಾಗಲಕೋಟೆ, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಹಾಸನ, ಹಾವೇರಿ, ಕೋಲಾರ, ರಾಮನಗರ, ತುಮಕೂರು, ವಿಜಯಪುರ ಜಿಲ್ಲೆ ಸೇರಿದಂತೆ ಒಟ್ಟು 14 ಜಿಲ್ಲೆಗಳನ್ನೊಳಗೊಂಡ 58 ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಬರುವ 70 ವಿಧಾನಸಭಾ ಕ್ಷೇತ್ರಗಳು ಮಂಡಳಿಯ ವ್ಯಾಪ್ತಿಗೆ ಒಳಪಟ್ಟಿವೆ. 14 ಲೋಕಸಭಾ ಸದಸ್ಯರು, 70 ವಿಧಾನಸಭಾ ಸದಸ್ಯರು, 24 ವಿಧಾನಪರಿಷತ್ತು ಸದಸ್ಯರು, 10 ಮಂಡಳಿಯ ನಾಮನಿರ್ದೇಶಿತ ಸದಸ್ಯರು, 14 ಜಿಲ್ಲಾ ಪಂಚಾಯತ್ ಸದಸ್ಯರು, 14 ಜಿಲ್ಲಾಧಿಕಾರಿಗಳು ಹಾಗೂ ಒಬ್ಬ ಕಾರ್ಯದರ್ಶಿ ಸೇರಿದಂತೆ ಒಟ್ಟು 147 ಮಂದಿ ಮಂಡಳಿಯ ಸದಸ್ಯರಿದ್ದಾರೆ ಎಂದು ಮಾಹಿತಿ ನೀಡಿದರು.
ಮಣ್ಣು ಮತ್ತು ನೀರು ಸಂರಕ್ಷಣಾ ಕಾಮಗಾರಿಗಳಲ್ಲಿ ವಿವಿದೋದ್ದೇಶದಿಂದ ಕೂಡಿದ ಕಾಮಗಾರಿಗಳು ಅಂದರೆ ರಸ್ತೆಯ ಮೇಲೆ ಹರಿಯುವ ಹಳ್ಳಕ್ಕೆ ಬಂದಾರ ನಿರ್ಮಿಸಿ, ಸುತ್ತಮುತ್ತಲ ಜಮೀನುಗಳ ಬೋರ್ವೆಲ್ಗಳನ್ನು ರಿಜಾರ್ಚ್ ಮಾಡಲು, ದನ ಕರುಗಳಿಗೆ, ನೀರಿನ ವ್ಯವಸ್ಥೆ ಮತ್ತು ಸಾರ್ವಜನಿಕರ ಉಪಯೋಗಕ್ಕಾಗಿ ಊರಿಂದ ಊರಿಗೆ ಸಂಪರ್ಕ ಕಲ್ಪಿಸಿ, ಸಂಚರಿಸಲು ಅನುಕೂಲ ಕಲ್ಪಿಸುವಂತಹ ಕಾಮಗಾರಿಗಳು, ಸರ್ಕಾರಿ ಜಮೀನುಗಳಲ್ಲಿ ಚೆಕ್ಡ್ಯಾಂ ನಿರ್ಮಾಣ, ಸಣ್ಣ ಕೆರೆಗಳ ಬದು ಮತ್ತು ಕೋಡಿ ನಿರ್ಮಾಣ, ಮಳೆ ನೀರು ತಡೆಗೋಡೆ, ಗೋಕಟ್ಟೆ ನಿರ್ಮಾಣ, ಕಲ್ಯಾಣಿಗಳ ಜೀರ್ಣೋದ್ಧಾರ ಮುಂತಾದ ಕಾಮಗಾರಿಗಳು, ಸರ್ಕಾರಿ ಜಾಗಗಳಲ್ಲಿ ಕಿರು ಕಾಲುವೆಗಳು ಇಂಗು ಗುಂಡಿ ನಿರ್ಮಿಸಿ ಅಂತರ್ಜಲ ಹೆಚ್ಚಿಸುವ ಕಾಮಗಾರಿಗಳು ಇತ್ಯಾದಿ, ಅರಣ್ಯೀಕರಣ, ತೋಟಗಾರಿಕೆ, ಸಮುದಾಯ ಕೃಷಿ ಕಾಮಗಾರಿಗಳು, ರಸ್ತೆ ನಿರ್ಮಾಣ, ಚರಂಡಿ ನಿರ್ಮಾಣ ಸೇರಿದಂತೆ ಇತರೆ ಅಭಿವೃದ್ಧಿ ಕಾಮಗಾರಿಗಳನ್ನು ಮಂಡಳಿ ವ್ಯಾಪ್ತಿಯಲ್ಲಿ ಆದ್ಯತೆಯ ಮೇರೆಗೆ ತೆಗೆದುಕೊಳ್ಳಲಾಗುತ್ತಿದೆ ಎಂದರು.
ಮಂಡಳಿಯು ಅನುಮೋದಿಸಿದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯು ತನ್ನದೇ ಆದ ಯಾವುದೇ ಅನುಷ್ಠಾನಾಧಿಕಾರಿಗಳನ್ನು ಹೊಂದಿರುವುದಿಲ್ಲ. ಮಂಡಳಿಯ ಕಾಮಗಾರಿಗಳನ್ನು ಮುಖ್ಯವಾಗಿ ಕೃಷಿ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಲೋಕೋಪಯೋಗಿ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ, ನಿರ್ಮಿತಿ ಕೇಂದ್ರ ಹಾಗೂ ಅರಣ್ಯ ಇಲಾಖೆ ಮತ್ತು ಇತರೆ ಸರ್ಕಾರಿ ಇಲಾಖೆಗಳಿಂದ ಮಂಡಳಿಯ ಅಭಿವೃದ್ದಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
2020-21ನೇ ಸಾಲಿನ ಆಯವ್ಯಯದಲ್ಲಿ ಮಂಡಳಿಗೆ ರೂ.22 ಕೋಟಿ 73 ಲಕ್ಷ ಆರ್ಥಿಕ ಗುರಿ ನಿಗಧಿಪಡಿಸಲಾಗಿದೆ. ಮಂಡಳಿಯಲ್ಲಿ ಪ್ರಾರಂಭಿಕ ಶುಲ್ಕು ರೂ.517 ಲಕ್ಷ ಇದೆ. ರೂ.22 ಕೋಟಿ 73 ಲಕ್ಷದಲ್ಲಿ ಮೊದಲ ಮತ್ತು ಎರಡನೇ ಕಂತಿನಲ್ಲಿ ರೂ.11 ಕೋಟಿ 52 ಲಕ್ಷ ಅನುದಾನ ಬಿಡುಗಡೆಯಾಗಿದೆ. ಶೇ.50ರಷ್ಟು ಅನುದಾನ ಬಿಡುಗಡೆಯಾಗಿದೆ. ಇನ್ನೂಳಿದ ಮೂರು ಮತ್ತು ನಾಲ್ಕನೇ ಕಂತಿನ ಹಣ ಬಿಡುಗಡೆಯಾಗಬೇಕಿದೆ. ಮಂಡಳಿಯಲ್ಲಿ ಒಟ್ಟು ರೂ.16 ಕೋಟಿ 69 ಲಕ್ಷ ಅನುದಾನ ಲಭ್ಯವಿದೆ. ಇದರಲ್ಲಿ 16ಕೋಟಿ 05 ಲಕ್ಷ ಅನುದಾನವನ್ನು ಖರ್ಚು ಮಾಡಲಾಗಿದೆ. ಮಂಡಳಿ ವ್ಯಾಪ್ತಿಯಲಿ 1724 ಕಾಮಗಾರಿಗಳು ಪ್ರಗತಿಯಲ್ಲಿದ್ದು, 196 ಕಾಮಗಾರಿಗಳು ಪೂರ್ಣಗೊಂಡಿವೆ ಎಂದರು.
2020-21ನೇ ಸಾಲಿನ ಮುಂದುವರೆದ ವಿಶೇಷ ಯೋಜನೆಯಡಿಯಲ್ಲಿ ರೂ.79 ಕೋಟಿ 82 ಲಕ್ಷ ಹಾಗೂ ಮುಂದುವರೆದ ಸಾಮಾನ್ಯ ಯೋಜನೆ ಕಾಮಗಾರಿಗಳಿಗೆ 540 ಲಕ್ಷಗಳು ಒಟ್ಟಾರೆಯಾಗಿ 85 ಕೋಟಿ 22 ಲಕ್ಷಗಳ ಅನುದಾನ ಅವಶ್ಯಕವಾಗಿ ಬೇಕಾಗಿರುತ್ತದೆ. 2020-21ನೇ ಸಾಲಿನ ಅಯವ್ಯಯದಲ್ಲಿ ಸಾಮಾನ್ಯ ಯೋಜನೆಯಡಿ ನಿಗದಿಪಡಿಸಿದ ಅನುದಾನ ರೂ.16 ಕೋಟಿ 72 ಲಕ್ಷ ಹಾಗೂ ಆರಂಭಿಕ ಶಿಲ್ಕು ರೂ.83 ಲಕ್ಷ ಸೇರಿ ಒಟ್ಟಾರೆ ರೂ.17 ಕೋಟಿ 55 ಲಕ್ಷಗಳನ್ನು 2020-21ನೇ ಸಾಲಿನಲ್ಲಿ ಬಳಸಿಕೊಂಡರೂ ರೂ.67 ಕೋಟಿ 67 ಲಕ್ಷ ಅನುದಾನ ಕೊರತೆಯಾಗುತ್ತದೆ. ಅನುದಾನ ಬಿಡುಗಡೆ ಮಾಡುವಂತೆ ಈಗಾಗಲೇ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೊರತೆಯಾಗುವ ಅನುದಾನ ರೂ.67 ಕೋಟಿ 67 ಲಕ್ಷಗಳನ್ನು ಇದೇ ಆರ್ಥಿಕ ವರ್ಷದಲ್ಲಿ ಒದಗಿಸಿದಲ್ಲಿ ಈ ಯೋಜನೆಯು ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ನಾಮನಿರ್ದೇಶಿತ ಸದಸ್ಯೆ ಶ್ಯಾಮಲಾ ಶಿವಪ್ರಕಾಶ್, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಬಸವರಾಜಪ್ಪ, ಉಪಕಾರ್ಯದರ್ಶಿ ಕೃಷ್ಣನಾಯ್ಕ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.