ಬಯಲುಸೀಮೆ ನೀರಾವರಿ ಯೋಜನೆ-ಅನುಷ್ಠಾನ ಚರ್ಚೆ


ಚಿತ್ರದುರ್ಗ.ಅ.೨೬; ತಾವಿದ್ದಲ್ಲಿಯೇ ಶರಣ ಸಂಸ್ಕೃತಿ ಉತ್ಸವದಲ್ಲಿ ನಡೆದ ಕೃಷಿ ಮೇಳ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ ಬಯಲು ಸೀಮೆ ನೀರಾವರಿ ಯೋಜನೆ ಮತ್ತು ಅನುಷ್ಠಾನ ಕುರಿತ ಚರ್ಚೆಯ ಧಿವ್ಯಸಾನಿಧ್ಯ ವಹಿಸಿದ್ದ ಡಾ.ಶಿವಮೂರ್ತಿ ಮುರುಘಾ ಶರಣರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಧ್ಯಕರ್ನಾಟಕದ ಚಿತ್ರದುರ್ಗ ಜಿಲ್ಲೆ ಬಯಲುಸೀಮೆ ಪ್ರದೇಶವಾಗಿದ್ದು ಇಲ್ಲಿ ಯಾವುದೇ ನೀರಾವರಿ ಯೋಜನೆ ಹಾಗೂ ಕೈಗಾರಿಕೆಗಳು ಇಲ್ಲ. ಕಳೆದ ೨೫-೩೦ ವರ್ಷಗಳಿಂದ ಎಲ್ಲಾ ಸರ್ಕಾರಗಳಿಗೂ ನೀರಾವರಿ ಯೋಜನೆಗಾಗಿ ಒತ್ತಾಯಿಸುತ್ತಾ ಬಂದಿದ್ದೇವೆ. ಎಲ್ಲಾ ಸರ್ಕಾರಗಳಿಗೂ ದುಂಬಾಲು ಬಿದ್ದಿದ್ದೇವೆ. ಬರದ ಭೂಮಿಗೆ ನೀರು ಹಾಗೂ ನೀರಾವರಿ ಯೋಜನೆಗೆ ಹಕ್ಕೊತ್ತಾಯ ಮಾಡಿದ್ದೇವೆ. ಅದರ ಫಲವಾಗಿ ಭದ್ರಾ ಮೇಲ್ದಂಡೆ ಯೋಜನೆ ಕಾರ್ಯಗತವಾಗುತ್ತಿದೆ. ಅರಣ್ಯ ಸಮಸ್ಯೆಗಳು ಜೀವಂತವಾಗಿವೆ, ರೈತರ ಪರಿಹಾರದ ಹಣ ಬಂದಿಲ್ಲವೆಂಬ ಕೂಗು ರೈತರಿಂದ ಕೇಳಿ ಬರುತ್ತಿದೆ. ಈ ರೀತಿಯ ಸವಾಲುಗಳಿಂದ ಯೋಜನೆಗೆ ತೊಡಕಾಗುತ್ತಿದೆ. ಸರ್ಕಾರ ಮಧ್ಯ ಪ್ರವೇಶ ಮಾಡಿ ಸಮಸ್ಯೆಗಳನ್ನು ನಿವಾರಿಸಬೇಕು. ಮಠಾಧೀಶರು, ರೈತರು, ಸಾರ್ವಜನಿಕರು, ಮಾಧ್ಯಮಗಳು ಒಕ್ಕೊರಲಿನಿಂದ ಹೋರಾಟ ಮುಂದುವರಿಸದಿದ್ದರೆ ಬಯಲುಸೀಮೆ ನೀರಾವರಿ ಯೋಜನೆ ಅನುಷ್ಠಾನವಾಗದು. ಹೋರಾಟ ಮಾಡದಿದ್ದರೇ ಸರ್ಕಾರದಿಂದ ಯಾವುದೇ ಯೋಜನೆ ಅನುಷ್ಠಾನವಾಗುವುದಿಲ್ಲ. ಆದ್ದರಿಂದ ಹೋರಾಟದ ಮೂಲಕ ನಾವು ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು. ಕೊರೊನಾ ಸಂದರ್ಭದಲ್ಲಿಯೂ ಕೃಷಿಮೇಳ ಯಶಸ್ವಿಯಾಗಿದೆ. ನೂರಾರು ಜೋಡಿ ಎತ್ತು ಹಾಗೂ ಎಮ್ಮೆಗಳು ಪ್ರದರ್ಶನಕ್ಕೆ ಬಂದಿವೆ. ಹಾಗೆಯೇ ಕೃಷಿ ವಸ್ತು ಪ್ರದರ್ಶನದಲ್ಲಿ ಹಲವಾರು ಕೃಷಿ ಯಂತ್ರೋಪಕರಣಗಳು ಕೂಡಾ ಪ್ರದರ್ಶಿತವಾಗುತ್ತಿವೆ ಎಂದರು.
ಕೃಷಿ ಸಚಿವ ಬಿ.ಸಿ.ಪಾಟೀಲ್‌ರವರು ಮಾತನಾಡಿ, ಕಳೆದ ಹದಿನೈದು ದಿನಗಳಿಂದ ಸುರಿದ ಮಳೆಯಿಂದಾಗಿ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕಗಳಲ್ಲಿ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಈರುಳ್ಳಿ, ಶೇಂಗಾ ಸೇರಿದಂತೆ ಹಲವು ಬೆಳೆಗಳು ನಾಶವಾಗಿವೆ. ಸರ್ಕಾರ ರೈತರ ಬೆಳೆಗಳಿಗೆ ಬೆಂಬಲ ನೀಡಲು ಸಿದ್ಧವಾಗಿದೆ. ಕೇಂದ್ರ ಸರ್ಕಾರದ ಪಡಿತರ ವ್ಯವಸ್ಥೆಯಲ್ಲಿ ಮೆಕ್ಕೆಜೋಳ ಸೇರಿಲ್ಲವಾದ್ದರಿಂದ ಮೆಕ್ಕೆಜೋಳ ಖರೀದಿ ಮಾಡಲು ಸಾಧ್ಯವಾಗಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ಬಗ್ಗೆ ಚರ್ಚಿಸಿ ಕೇಂದ್ರಕ್ಕೆ ಮತ್ತೊಮ್ಮೆ ಪತ್ರ ಬರೆಯಲು ಸೂಚಿಸಲಾಗುವುದು. ಪ್ರತಿ ರೈತ ಸಂಪರ್ಕಕ್ಕೆ ಮೊಬೈಲ್ ಹೆಲ್ಪ್ ಸೆಂಟರ್ ವಾಹನ ನೀಡಬೇಕು. ಇದಕ್ಕೆ ಒಬ್ಬ ಡಿಪ್ಲೊಮಾ ಪದವೀಧರ ಸಿಬ್ಬಂದಿಯನ್ನು ನೇಮಿಸಬೇಕು. ಈ ವಾಹನಕ್ಕೆ ೧೦೮ ಅಂಬುಲೆನ್ಸ್ ವಾಹನದಂತೆ ಸಹಾಯವಾಣಿ ಸಂಖ್ಯೆ ನೀಡಲಾಗುವುದು. ರೈತರು ಕರೆ ಮಾಡಿದ ತಕ್ಷಣ ಈ ವಾಹನ ರೈತರ ಹೊಲಗಳಿಗೆ ತೆರಳಿ ಮಣ್ಣು ಪರೀಕ್ಷೆ ಸೇರಿದಂತೆ ರೈತರ ಸಮಸ್ಯೆಗಳಿಗೆ ಪರಿಹಾರ, ಸಲಹೆ ಸೂಚನೆಗಳನ್ನು ನೀಡುವ ವ್ಯವಸ್ಥೆಯನ್ನು ಕೊಪ್ಪಳದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತಿದೆ. ಕೊಪ್ಪಳದಲ್ಲಿ ೨೦ರೈತ ಸಂಪರ್ಕ ಕೇಂದ್ರಗಳಿದ್ದು, ೨೦ ವಾಹನಗಳನ್ನು ಈಗಾಗಲೇ ಖರೀದಿ ಮಾಡಲಾಗಿದೆ. ಕೊಪ್ಪಳದಲ್ಲಿ ಈ ಯೋಜನೆ ಪ್ರಥಮವಾಗಿ ಜಾರಿಗೆ ಬರುತ್ತಿದೆ. ನಂತರ ಬಳ್ಳಾರಿಯಲ್ಲಿ ಜಾರಿಗೆ ತರಲಾಗುವುದು. ರೈತರಿಗೆ ಸ್ವಾಭಿಮಾನಿ ರೈತ ಎಂಬ ವಿಶೇಷ ಗುರುತಿನ ಚೀಟಿ ನೀಡುವ ಯೋಜನೆ ಇದೆ. ಈ ಕಾರ್ಡ್‌ನ್ನು ಸ್ವೈಪ್ ಮಾಡಿದ ತಕ್ಷಣ ಅದರಲ್ಲಿ ರೈತನ ಎಲ್ಲ ವಿವರಗಳೂ ಲಭ್ಯವಾಗಬೇಕು. ರೈತನ ಆಧಾರ್ ನಂಬರ್, ಅವರ ಬಳಿ ಇರುವ ಭೂಮಿ ಮಾಹಿತಿ, ಬ್ಯಾಂಕ್ ಖಾತೆ ಸಂಖ್ಯೆ ಎಲ್ಲವನ್ನೂ ಒಳಗೊಂಡಿರುತ್ತದೆ. ಈ ಯೋಜನೆ ಕೂಡ ಕೊಪ್ಪಳದಲ್ಲಿ ಜಾರಿಗೆ ಬರುತ್ತಿದೆ. ನಂತರ ರಾಜ್ಯದಲ್ಲಿ ಇದನ್ನು ಆರಂಭಿಸಲಾಗುವುದು. ಪ್ರಸ್ತುತ ನೀತಿ ಸಂಹಿತೆ ಇರುವುದರಿಂದ ನವೆಂಬರ್ ೧೦ರ ನಂತರ ಮುಖ್ಯಮಂತ್ರಿಗಳ ಜೊತೆ ರೈತರ ಸಭೆ ನಡೆಸಲಾಗುವುದು. ಮುಖ್ಯಮಂತ್ರಿ, ನೀರಾವರಿ ಮಂತ್ರಿಗಳ ಜೊತೆ ರೈತ ಮುಖಂಡರನ್ನು ಸಭೆ ನಡೆಸಿ ಬೆಳೆ ವಿಮೆ, ಬೆಂಬಲ ಬೆಲೆ, ಖರೀದಿ ಕೇಂದ್ರಗಳ ಬಗ್ಗೆ ಚರ್ಚೆ ಮಾಡಲಾಗುವುದು. ಕೋಲಾರದಲ್ಲಿ ರೈತರು ಸಮಗ್ರ ಕೃಷಿ ನೀರಿ ಅಳವಡಿಸಿಕೊಂಡು ಒಂದು ಎಕರೆಯಲ್ಲಿ ಆರೇಳು ಬೆಳೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಕಡಿಮೆ ನೀರಿದ್ದರೂ ನೀರಿನ ಸದ್ಬಳಕೆ ಮಾಡಿಕೊಂಡಿದ್ದಾರೆ. ಈ ರೀತಿಯ ಕೃಷಿ ಪದ್ಧತಿ ರಾಜ್ಯಾದ್ಯಂತ ಜಾರಿಗೆ ಬರಬೇಕು. ರೈತರು ಕೃಷಿಯಲ್ಲಿ ಆಧುನಿಕತೆಯನ್ನು ಬೆಳೆಸಿಕೊಳ್ಳಬೇಕು. ತಾವು ಬೆಳೆದ ಬೆಳೆಗಳನ್ನು, ಆಹಾರ ಪದಾರ್ಥ, ಹಣ್ಣು-ತರಕಾರಿಗಳನ್ನು ಸಂಸ್ಕರಿಸಿ ಮಾರುಕಟ್ಟೆ ಮಾಡಬೇಕು. ರೈತರು ಉದ್ಯಮಿಗಳಾಗಬೇಕು. ಆ ಮೂಲಕ ತಮ್ಮ ಬೆಳೆಗಳಿಗೆ ತಾವೇ ಬೆಲೆ ನಿರ್ಧರಿಸಬೇಕು. ರೈತರು ಬೆಳೆ ಬೆಳೆಯುವ ಮೊದಲು ಮಣ್ಣಿನ ಪರೀಕ್ಷೆ ಮಾಡಿಸುವುದು ಅಗತ್ಯವಾಗಿದೆ. ರಾಜ್ಯದಲ್ಲಿ ೨೪೭ ಮಣ್ಣು ಪರೀಕ್ಷೆ ಕೇಂದ್ರಗಳಿವೆ. ಆದರೆ ರೈತರು ಯಾರೂ ಈ ಪರೀಕ್ಷಾ ಕೇಂದ್ರಗಳಿಗೆ ತೆರಳಿ ಮಣ್ಣು ಪರೀಕ್ಷೆ ಮಾಡಿಸುತ್ತಿಲ್ಲ. ರೈತರು ಇದಕ್ಕೆ ಒತ್ತು ನೀಡಬೇಕು ಎಂದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಕರ್ನಾಟಕ ರಾಜ್ಯ ಸಮೃದ್ಧಿಯಾದ ನಾಡು. ನಮ್ಮಲ್ಲಿಹರಿಯುವ ತುಂಗಭದ್ರಾ ನದಿ ಪಕ್ಕದ ಆಂಧ್ರವನ್ನು ಸಮೃದ್ಧಿಯಾಗಿಸಿದೆ. ಆಂಧ್ರ ರಾಜ್ಯದ ಗಡಿ ಭಾಗದಲ್ಲಿ ಕೃಷ್ಣಾ ನದಿ ನೀರು ಹರಿಯುತತಿರುವುದರಿಂದ ಬರದ ತಾಲ್ಲೂಕು ಎನಿಸಿಕೊಂಡಿರುವ ಗೌರಿಬಿದನೂರು ತಾಲೂಕಿನ ಅಂತರ್ಜಲ ಜಾಸ್ತಿಯಾಗುತ್ತಿದೆ. ಈ ರೀತಿ ರಾಜ್ಯದ ಗಡಿ ಭಾಗದಲ್ಲಿ ನೀರಾವರಿ ಯೋಜನೆ ಜಾರಿಗೊಳಿಸಿದರೆ ಬಯಲು ಸೀಮೆಯ ನೀರಾವರಿ ಸಮಸ್ಯೆ ನಿವಾರಿಸಬಹುದು. ಪಶ್ಚಿಮಘಟ್ಟದಲ್ಲಿ ಸಿಗುವ ನೀರಿನ ಉತ್ಪನ್ನ ಬಹಳ ದೊಡ್ಡದು. ಪರಮಶಿವಯ್ಯ ವರದಿ, ಬಜಾಜ್ ಸಮಿತಿ ವರದಿಗಳು ಪಶ್ಚಿಮ ಘಟ್ಟಗಳಿಂದ ಕುಡಿಯುವ ನೀರಿಗಾಗಿ ಹಾಗೂ ನೀರಾವರಿ ಯೋಜನೆಗಳಿಗೆ ಎಷ್ಟು ಪ್ರಮಾಣದಲ್ಲಿ ನೀರನ್ನು ಬಳಸಿಕೊಳ್ಳಬೇಕು ಎಂಬ ಮಾಹಿತಿ ಇದೆ. ಈ ಮಾಹಿತಿ ಅನುಸಾರವಾಗಿ ನೀರಿನ ಯೋಜನೆಗಳನ್ನು ಸರ್ಕಾರ ಜಾರಿಗೆ ತರಬೇಕು. ನಾವು ಕೃಷ್ಣಾ ನೀರನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಳ್ಳುತ್ತಲೇ ಇಲ್ಲ. ನಮ್ಮ ಪಾಲಿನ ಗೋದಾವರಿಯ ೨೪ ಟಿಎಂಸಿ ನದಿ ನೀರು ಇದೆ. ಅದರ ಬಗ್ಗೆ ಇದುವರೆಗೂ ಯಾವುದೇ ಚರ್ಚೆ ನಡೆದಿಲ್ಲ. ಆಂಧ್ರದವರು ನಮಗೆ ಗೋದಾವರಿ ನೀರು ಬಳಸಿಕೊಳ್ಳಿ ಎನ್ನುತ್ತಿದ್ದಾರೆ. ಆದ್ದರಿಂದ ನಮ್ಮ ಪಾಲಿನ ನೀರನ್ನು ಪೂರ್ಣಪ್ರಮಾಣದಲ್ಲಿ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಪಶ್ಚಿಮಘಟ್ಟದಲ್ಲಿ ಸಮುದ್ರ ಸೇರುತ್ತಿರುವ ಕಾಳಿ ನದಿ ಹಾಗೂ ಅಘನಾಶಿನಿ ನದಿ ನೀರನ್ನು ಸ್ವಲ್ಪ ಪ್ರಮಾಣದಲ್ಲಿ ಲಿಫ್ಟ್ ಮಾಡಿದರೂ ಕೂಡ ಹಾವೇರಿ, ದಾವಣಗೆರೆ, ಚಿತ್ರದುರ್ಗಕ್ಕೆ ನೀರನ್ನು ಪೂರೈಸಬಹುದು. ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಿ ಈ ರೀತಿಯ ಯೋಜನೆಗಳನ್ನು ಜಾರಿಗೊಳಿಸುವ ಪ್ರಯತ್ನ ಮಾಡಬೇಕು. ಎಲ್ಲ ಉತ್ಪನ್ನಗಳ ಬೆಲೆ ಕುಸಿದಿದೆ. ಮೆಕ್ಕೆಜೋಳ ಖರೀದಿ ಮಾಡದಿದ್ದರೆ ರೈತರು ವಿಷ ಕುಡಿಯುವ ಸ್ಥಿತಿ ಇದೆ ಸರ್ಕಾರ ರೈತರ ಬೆಳೆಗಳನ್ನು ಬೆಂಬಲ ಬೆಲೆ ನೀಡಿ ಖರೀದಿ ಮಾಡಲೇಬೇಕು ಎಂದು ಒತ್ತಾಯಿಸಿದರು. ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಕೃಷಿ ಕ್ಷೇತ್ರ ಬಿಕ್ಕಟ್ಟಿನಲ್ಲಿದೆ. ಹಳ್ಳಿಗಳು ಸ್ಮಶಾನವಾಗುತ್ತಿವೆ. ಅನಾದಿಕಾಲದಿಂದ ಕೃಷಿ ಹಲವಾರು ಸಮಸ್ಯೆ ಎದುರಿಸುತ್ತಿದೆ. ಎಲ್ಲ ಕ್ಷೇತ್ರಗಳು ಅಭಿವೃದ್ಧಿಗೊಂಡರೂ ಕೃಷಿ ಕ್ಷೇತ್ರ ಮಾತ್ರ ಅಭಿವೃದ್ಧಿಯಾಗುತ್ತಿಲ್ಲ. ಸರ್ಕಾರ ರೈತರ ನಿಜವಾದ ಸಮಸ್ಯೆಗಳ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು. ದೇಶದಲ್ಲಿ ೨೮೫ ಮಿಲಿಯನ್ ಟನ್ ಆಹಾರ ಉತ್ಪಾದನೆ ಆಗಿದೆ. ಇದುವರೆಗೆ ೬೫ ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯವನ್ನು ಉತ್ಪಾದಿಸಲಾಗಿದೆ. ಮುಂದಿನ ಎರಡು ವರ್ಷಗಳಿಗೆ ಬೇಕಾದ ಆಹಾರ ಸಾಮಾಗ್ರಿಯನ್ನು ಉತ್ಪಾದಿಸಿ ಈಗಾಗಲೇ ಶೇಖರಣೆ ಮಾಡಿದ್ದೇವೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗತ್ಯ ವಸ್ತುಗಳ ಕಾಯಿದೆ ತಿದ್ದುಪಡಿ ತಂದಿರುವುದರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಅತಿವೃಷ್ಟಿಯಿಂದ ಶೇ.೬೦ರಷ್ಟು ಈರುಳ್ಳಿ ಬೆಳೆ ನಾಶವಾಗಿದೆ. ರಾಜ್ಯದಲ್ಲಿ ಹತ್ತು ಲಕ್ಷ ಹೆಕ್ಟೇರ್‌ನಷ್ಟು ಬೆಳೆ ನಾಶವಾಗಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಸರ್ಕಾರ ಕೃಷಿ ಸಮಸ್ಯೆಗಳನ್ನು ಗಂಭಿರವಾಗಿ ಪರಿಗಣಿಸಿಲ್ಲ. ಸರ್ಕಾರ ರೈತರಿಗೆ ತಾವು ಬೆಳೆದ ಬೆಳೆಗಳಿಗೆ ನ್ಯಾಯಯುತವಾದ ಹಾಗೂ ವೈಜ್ಞಾನಿಕ ಬೆಲೆ ನೀಡಬೇಕು. ಸರ್ಕಾರ ರೈತರ ಬೆಳೆಗಳಿಗೆ ಯಾವುದೇ ವೈಜ್ಞಾನಿಕ ಬೆಲೆ ನೀಡುತ್ತಿಲ್ಲ. ಯಾವುದೇ ವ್ಯಾಪಾರಿಗೆ ಲಾಭ ಬರುವ ಖಚಿತತೆ ಇದೆ. ಆದರೆ ರೈತರಿಗೆ ತಾವು ಬೆಳೆದ ಬೆಳೆಗಳಿಗೆ, ಉತ್ಪನ್ನಗಳಿಗೆ ಸರಿಯಾದ ವೈಜ್ಞಾನಿಕ ಬೆಲೆ ಕೂಡ ಲಭಿಸುತ್ತಿಲ್ಲ ಎಂದು ತಿಳಿಸಿದರು.
-೨