ಬಯಲುಶೌಚ ಮುಕ್ತ ವಿಜಯಪುರಕ್ಕಾಗಿ ಮಹಿಳೆಯರು ಸಂಕಲ್ಪಿಸಿ: ಲೋಕಾಯುಕ್ತ ಎಸ್ಪಿ ಅನಿತಾ ಹದ್ದಣ್ಣನವರ ಕರೆ

(ಸಂಜೆವಾಣಿ ವಾರ್ತೆ)
ವಿಜಯಪುರ :ಆ.19: ಗ್ರಾಮೀಣ ಭಾಗದಲ್ಲಿ ಮಹಿಳೆಯರಿಗೆ ಬಯಲುಶೌಚದಿಂದ ಅವರ ಗೌರವಕ್ಕೆ, ಆರೋಗ್ಯಕ್ಕೆ ಧಕ್ಕೆಯಾಗುತ್ತಿದೆ. ನೈಸರ್ಗಿಕ ಕ್ರಿಯೆಗೆ ಮಹಿಳೆಯರು ಭಯಪಡುವ ದುಸ್ಥಿತಿ ಇದೆ. ಮನೆಯಲ್ಲಿ ಶೌಚಾಲಯವಿದ್ದರೆ ಯಾವ ಸಮಯದಲ್ಲಾದರೂ ಬಳಸಬಹುದು. ಮನೆ ಬಳಿ ಸ್ಥಳವಿದ್ದರೆ ಕಡ್ಡಾಯವಾಗಿ ಶೌಚಾಲಯ ಕಟ್ಟಿ ಉಪಯೋಗ ಮಾಡಿ ಸ್ವಚ್ಚತೆ ಕಾಪಾಡಿಕೊಳ್ಳಿ. ಪ್ರತಿ ಗ್ರಾಮಗಳಲ್ಲಿ ಜಾಗೃತಿ ಮೂಡಿಸಿ ಬಯಲುಶೌಚ ಮುಕ್ತ ವಿಜಯಪುರಕ್ಕಾಗಿ ಮಹಿಳೆಯರು ಸಂಕಲ್ಪಿಸಬೇಕು ಎಂದು ಲೋಕಾಯುಕ್ತ ಎಸ್ಪಿ ಅನಿತಾ ಹದ್ದಣ್ಣನವರ ಕರೆ ನೀಡಿದರು.
ನಗರದ ಜಿಲ್ಲಾ ಸಂಪನ್ಮೂಲ ಕೇಂದ್ರದಲ್ಲಿ ಜಿ.ಪಂ, ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ಐ.ಆರ್.ಡಿ) ಸಂಯುಕ್ತಾಶ್ರಯದಲ್ಲಿ ಗ್ರಾ.ಪಂ ಮಟ್ಟದ ಒಕ್ಕೂಟದ ಮಹಿಳೆಯರಿಗೆ ಘನತ್ಯಾಜ್ಯ ನಿರ್ವಹಣೆ ಮತ್ತು ಕಾರ್ಯಾಚರಣೆ ತರಬೇತಿಯ 2 ನೇ ಬ್ಯಾಚ್ ನ ಮುಕ್ತಾಯ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಲ್ಲಿವರೆಗೂ ತರಬೇತಿ ಪಡೆದ 21 ಬ್ಯಾಚ್ ಗಳ ಸುಮಾರು 600 ಮಹಿಳಾ ಶಿಬಿರಾರ್ಥಿಗಳು ತಮ್ಮ ಗ್ರಾಮೀಣ ಭಾಗದಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಿ, ನಿಮ್ಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಶೌಚಾಲಯಗಳ ಬಳಕೆ ಹಾಗೂ ಮಹತ್ವದ ಕುರಿತು ಜಾಗೃತಿ ಮೂಡಿಸಿ ಗ್ರಾ.ಪಂ ಯೂ ಬಯಲುಶೌಚ ಮುಕ್ತ ಗ್ರಾಮ ಎಂದು ಘೋಷಿಸಿ, ಫಲಕ ಅಳವಡಿಸುವ ಹಾಗೇ ಶ್ರಮಿಸಬೇಕು. ಸಂವಿಧಾನ ಮಹಿಳೆಯರಿಗೆ 33 % ಮೀಸಲಾತಿ ಕಲ್ಪಿಸಿದ್ದರೂ ವಿಶೇಷವಾಗಿ ಗ್ರಾಮೀಣ ಮಹಿಳೆಯರು ಶಿಕ್ಷಣ, ಸಾಮಾನ್ಯಜ್ಞಾನ ಇಲ್ಲದ ಕಾರಣ ಇನ್ನೂ ಪೂರ್ಣ ಸಬಲೀಕರಣರಾಗಿಲ್ಲ. ಮಹಿಳಾ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದರು.
ಹೆಣ್ಣು ದೈಹಿಕವಾಗಿ ಬಹಳ ಗಟ್ಟಿಗಳು, ಹಾಗಾಗಿ ದೇವರು ಆಕೆಗೆ ತಾಯತ್ವ ಗುಣ ಕರುಣಿಸಿದ್ದಾನೆ. ಮಹಿಳೆಯರಿಗೆ ಸಮಾಜದಲ್ಲಿ ಅಷ್ಟೇ ಅಲ್ಲದೇ ತನ್ನ ಮನೆ, ಕುಟುಂಬಗಳಲ್ಲಿಯೂ ಕಿರುಕುಳ, ದೌರ್ಜನ್ಯವಾಗುತ್ತಿರುವುದು ನೋವಿನ ಸಂಗತಿ. ಹಾಗಾಗಿ ಮಹಿಳೆಯರು ಇದೆಲ್ಲವನ್ನು ಧೈರ್ಯದಿಂದ ಎದುರಿಸಿ ನಿಂತು ಯಾರ ಮೇಲೂ ಅವಲಂಭಿತರಾಗದೇ ಸ್ವ ಸಾಮಥ್ರ್ಯದಿಂದ ಸ್ವಯಂ ರಕ್ಷಣೆ ಮಾಡಿಕೊಳ್ಳಬೇಕು. ನಮ್ಮಲ್ಲಿ ಮಹಿಳಾಪರ ರಕ್ಷಣೆ, ಸಬಲೀಕರಣಕ್ಕಾಗಿ ಸಾಕಷ್ಟು ಕಾನೂನು ಹಾಗೂ ಸರ್ಕಾರದ ಯೋಜನೆಗಳಿವೆ. ಎಲ್ಲವನ್ನು ಬಳಸಿಕೊಂಡು ಬಾಲ್ಯವಿವಾಹ, ಬಾಲಕಾರ್ಮಿಕ ಪದ್ದತಿ, ದೌರ್ಜನ್ಯ, ಕಿರುಕುಳಗಳನ್ನು ಮೆಟ್ಟಿನಿಂತು ಸಬಲಳಾಗಳು ಪ್ರತಿ ಹೆಣ್ಣಿಗೆ ಹೆಣ್ಣೇ ಶಕ್ತಿಯಾಗಿ ನಿಲ್ಲಬೇಕು ಎಂದು ಸಲಹೆ ನೀಡಿದರು.
ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಿಇಒ ಡಾ.ಬಾಬು ಸಜ್ಜನ ಪ್ರಸ್ತಾವಿಕವಾಗಿ ಮಾತನಾಡಿ, ಜಿ.ಪಂ ಮುಕ್ತ ಸಹಕಾರದೊಂದಿಗೆ ಗ್ರಾಮೀಣ ಸ್ವಚ್ಚತೆ, ತ್ಯಾಜ್ಯ ನಿರ್ವಹಣೆ ಹಾಗೂ ಕಾರ್ಯಾಚರಣೆ ಕುರಿತು ಕಳೆದ ಎರಡು ವರ್ಷಗಳಿಂದ ತಲಾ 30 ಶಿಬಿರಾರ್ಥಿಗಳಂತೆ 21 ಬ್ಯಾಚ್ ಗಳಾಗಿ ಸುಮಾರು 600 ಮಹಿಳಾ ಶಿಬಿರಾರ್ಥಿಗಳಗೆ ಹಮ್ಮಿಕೊಂಡ ಐದು ದಿನಗಳ ತರಬೇತಿ ಕಾರ್ಯಕ್ರಮದ ಯಶಸ್ಸು ಹಾಗೂ ಕಾರ್ಯಸಾಧನೆ ಕುರಿತು ವಿಚಾರಗಳನ್ನು ಹಂಚಿಕೊಂಡರು. ಜಿ.ಪಂ ಎನ್.ಆರ್.ಎಲ್.ಎಂ ಜಿಲ್ಲಾ ಯೋಜನಾ ವ್ಯವಸ್ಥಾಪಕ ವಿಶ್ವನಾಥ ಶಹಾಪುರ ತರಬೇತಿ ಕುರಿತು ಮಾತನಾಡಿದರು. ಶಿಬಿರಾರ್ಥಿಗಳು ತಮ್ಮ ಅನುಭವ ಹಾಗೂ ಕಲಿಕೆ ಕುರಿತು ಅಭಿಪ್ರಾಯ ಹೇಳಿಕೊಂಡರು.
ಈ ವೇಳೆ ಜಿ.ಪಂ ಮುಖ್ಯ ಯೋಜನಾ ನಿರ್ದೇಶಕ ನಿಂಗಪ್ಪ ಗೋಠೆ ಅಧ್ಯಕ್ಷತೆ ವಹಿಸಿದ್ದರು. ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕಿ ಹಾಗೂ ಸಂಪನ್ಮೂಲ ವ್ಯಕ್ತಿ ವಿಮಲಾ ಹಂದಿಗೋಳ, ಪ್ರ.ಕಾರ್ಯದರ್ಶಿ ಬಸವರಾಜ್ ಸಜ್ಜನ, ಜಿ.ಪಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಅಮೋಘ ಗವಳಿ, ಜಿ.ಪಂ ನ ಎಸ್.ಬಿ.ಎಂ ಸಮಾಲೋಚಕರಾದ ರಾಜು ಚವ್ಹಾಣ, ಅನುಪಮಾ ಹಳೇಪಳೆಕರ, ಪುನೀತ ಕೇಲುರ, ಸಹಾಯಕರಾದ ಶುಭಂ ಕ್ಷೀರಸಾಗರ, ರಶ್ಮಿ ಕುಲಕರ್ಣಿ ಇದ್ದರು.