ಬಯಲಸಿರಿ ಕೊಪ್ಪಳ ಜಿಲ್ಲೆಯಲ್ಲೂ ದಸರಾ ಕಾವ್ಯ ಸಂಭ್ರಮ


ಸಂಜೆವಾಣಿ ವಾರ್ತೆ
ಕೊಪ್ಪಳ ಅ:16: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಂಭ್ರಮ ಮನೆ ಮಾಡಿರುವ ಸಂದರ್ಭದಲ್ಲಿಯೇ ಉತ್ತರ ಕರ್ನಾಟಕದ ಬಯಲನೆಲದ ಸಿರಿ ಕೊಪಣಾದ್ರಿಯಲ್ಲೂ ಜರುಗಿದ ದಸರಾ ಕಾವ್ಯ ಹಬ್ಬವು ಸಾಹಿತ್ಯ ಪ್ರಿಯರ ಮನ ತಣಿಸಿತು.
ಸಾಹಿತ್ಯ ಅಕಾಡೆಮಿಗಳು ನಡೆಸುವ ಮಾದರಿಯಲ್ಲಿ ಕೊಪ್ಪಳ ವಿಶ್ವವಿದ್ಯಾಲಯವು ಸಹ ವಿನೂತನವಾಗಿ ಕೊಪ್ಪಳ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಕ್ಟೋಬರ್ ಹಮ್ಮಿಕೊಂಡಿದ್ದ ಈ ದಸರಾ ಕಾವ್ಯ ಸಂಭ್ರಮಕ್ಕೆ ಜಿಲ್ಲೆಯ ಅನೇಕ ಹಿರಿ-ಕಿರಿ ಕವಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆರೆದು ಖುಷಿಪಟ್ಟರು. ಕೊಪ್ಪಳ ವಿಶ್ವವಿದ್ಯಾಲಯ ವತಿಯಿಂದ ಕೊಪ್ಪಳ ಜಿಲ್ಲೆಯ ಜನದನಿ ಪ್ರಕಾಶನದ ಸಹಯೋಗದೊಂದಿಗೆ
ಕೊಪ್ಪಳ ಜಿಲ್ಲಾ ರಜತ ಮಹೋತ್ಸವ ಅಂಗವಾಗಿ ಅಕ್ಟೋಬರ್ 15 ರಂದು ನಡೆದ ಈ ಕಾರ್ಯಕ್ರಮವನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ವಿ. ಪರಮಶಿವಮೂರ್ತಿ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಂಪರೆಯು ಶ್ರೀಮಂತಿಕೆಯಿಂದ ಕೂಡಿದೆ. ದೇಶದ, ಸಮಾಜದ ಏಳ್ಗೆಯಲ್ಲಿ ಸಾಹಿತಿಗಳು, ಕಲಾವಿದರ ಪಾತ್ರವು ಸಹ ಅಷ್ಟೆ ಪ್ರಾಮುಖ್ಯತೆಯಿಂದ ಕೂಡಿದೆ. ಸಾಹಿತ್ಯ, ಸಂಶೋಧನೆ, ವಿಮರ್ಶಾ ಕ್ಷೇತ್ರವು ಶಿಸ್ತುಬದ್ಧ ಅಧ್ಯಯನ ಬೇಡುತ್ತವೆ. ಇದನ್ನು ಹೊಸ ತಲೆಮಾರಿನ ಲೇಖಕರು ಉದಯೋನ್ಮೂಖ ಲೇಖಕರು ಅರ್ಥೈಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿ ಕರ್ನಾಟಕ ಜಾನಪದ ವಿಶ್ವ ವಿದ್ಯಾಲಯದ ಕುಲಪತಿಗಳಾದ ಪ್ರೊ.ಟಿ.ಎಂ.ಭಾಸ್ಕರ ಅವರು ಮಾತನಾಡಿ, ಮಾಧ್ಯಮಗಳು ವ್ಯವಸ್ಥೆಯ ಜತೆಗೆ ರಾಜಿ ಮಾಡಿಕೊಂಡಿವೆ ಎನ್ನುವಂತಹ ವಾತಾವರಣವು ಕೆಲವೇ ಕೆಲವು ಜನರು ಮಾಡುವ ಕೃತ್ಯದಿಂದಾಗಿ ನಿರ್ಮಾಣವಾಗುತ್ತಿದೆ. ಅದರಂತೆ ಕವಿಯು ಕೂಡ ಅಸತ್ಯದ ಜತೆಗೆ ರಾಜಿ ಮಾಡಿಕೊಳ್ಳುತ್ತಿದ್ದಾನೆ ಎನ್ನುವ ಭಾವನೆ ಬರುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ವಿಶ್ವ ವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಕೆ.ರವಿ ಅವರು ಮಾತನಾಡಿ, ಬರೆಹಗಾರರಿಗೆ ಸತತ ಅಧ್ಯಯನ ಮುಖ್ಯ. ಸಾಮಾಜಿಕ ಬದ್ಧತೆಯೊಂದಿಗೆ ಕಾವ್ಯ ಕೃಷಿಗೆ ಮುಂದಾಗಬೇಕು ಎಂದು ಸಲಹೆ ಮಾಡಿದರು. ಇದೆ ವೇಳೆ ಕುಲಪತಿಗಳು, ಸ್ವರಚಿತ ಕವಿತೆಯೊಂದನ್ನು ವಾಚಿಸಿ ಕವಿಗಳಿಗೆ ಸ್ಫೂರ್ತಿ ನೀಡಿದರು.
ದೂರದರ್ಶ‌‌ನ ಕೇಂದ್ರದ ನಿರ್ದೇಶಕರಾದ ಡಾ.ನಿರ್ಮಲಾ ಯಲಿಗಾರ ಅವರು ಮಾತನಾಡಿ, ಸಾಹಿತ್ಯ ಅಕಾಡೆಮಿಗಳು ಮಾಡಬೇಕಾದ ಕೆಲಸವನ್ನು ವಿಶ್ವವಿದ್ಯಾಲಯಗಳು ಮಾಡುತ್ತಿರುವುದು ಅಭಿನಂದನಾರ್ಹ ಕೆಲಸ. ಸಾಂಸ್ಕೃತಿಕ ಪ್ರಜ್ಞೆಯೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದಕ್ಕಾಗಿ ಈ ಶ್ರೇಯಸ್ಸು ಕೊಪ್ಪಳ ವಿಶ್ವ ವಿದ್ಯಾಲಯದ ನೂತನ ಕುಲಪತಿಗಳಾದ ಪ್ರೊ.ಬಿ.ಕೆ.ರವಿ ಅವರಿಗೆ ಸಲ್ಲುತ್ತದೆ ಎಂದರು.
ಜನದನಿ ಪ್ರಕಾಶನದ ಪ್ರಕಾಶಕಿ, ಲೇಖಕಿ ಸಾವಿತ್ರಿ ಮುಜುಮದಾರ ಅವರು ಮಾತನಾಡಿ, ಬರೆಹಗಾರರಿಗೆ ಸಾಹಿತ್ಯದ ಜೊತೆಗೆ ಸಾಮಾಜಿಕ ಜವಾಬ್ದಾರಿ ಸಹ ಇರಬೇಕು ಎಂದು ಆಶಿಸಿದರು. ಜನದನಿ ಪ್ರಕಾಶನವು ದಶಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಈ ಸವಿ ಸಂದರ್ಭದಲ್ಲಿ ಜಿಲ್ಲೆಗೆ ಕಿರೀಟಪ್ರಾಯವಾದ ಕೊಪ್ಪಳ ವಿಶ್ವವಿದ್ಯಾಲಯದೊಂದಿಗೆ ದಸರಾ ಕಾವ್ಯ ಸಂಭ್ರಮ ಏರ್ಪಾಡು ಮಾಡಿರುವುದು ಅತೀವ ಸಂತಷ ತಂದಿದೆ ಎಂದರು. ನೂರಾರು ಸಂಖ್ಯೆಯಲ್ಲಿ ಕವಿಗಳು ಆಗಮಿಸಿ ಭಾಗಿಯಾಗಿದ್ದು ದಾಖಲಾರ್ಹವಾದುದು ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ತಿಮ್ಮಾರೆಡ್ಡಿ ಮೇಟಿ ಅವರು ಮಾತನಾಡಿ, ವಿದ್ಯಾರ್ಥಿ ಯುವಜನರು ಸಾಹಿತ್ಯಾಭಿರುಚಿ ಬೆಳೆಸಿಕೊಳ್ಳಬೇಕು. ಪ್ರತಿ ದಿನ ಗ್ರಂಥಾಲಯಕ್ಕೆ ಹೋಗಿ ಪುಸ್ತಕ ಓದುವ ವಿದ್ಯಾರ್ಥಿಗಳಿಗೆ ಓದು, ಭವಿಷ್ಯದ ಬಗ್ಗೆ ವಿಶ್ವಾಸ ಮೂಡುತ್ತದೆ ಎಂದು ಸಲಹೆ ಮಾಡಿದರು.
*ಗಣ್ಯರಿಗೆ ಸನ್ಮಾನ:* ಗವಿಸಿದ್ದೇಶ್ವರ ಅರ್ಬನ್ ಕೋ ಆಪರೇಟಿವ್ ಬ್ಯಾಂಕನ ಅಧ್ಯಕ್ಷರಾದ ರಾಜಶೇಖರ ಅಡೂರ, ನಿವೃತ್ತ ಬ್ಯಾ‌ಂಕ್ ಮ್ಯಾನೇಜರ್ ಸುಮಂಗಲಾ ಹಂಚಿನಾಳ, ಇನ್ನರ್ ವಿಲ್ ಅಧ್ಯಕ್ಷೆ ವಿಜಯಲಕ್ಷ್ಮಿ ಹಂಚಾಟೆ ಅವರಿಗೆ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಕೊಪ್ಪಳ ವಿವಿಯ ಕುಲಸಚಿವ ಪ್ರೊ.ಕೆ.ವಿ.ಪ್ರಸಾದ್, ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕರು ಮತ್ತು ನಿರ್ದೇಶಕರಾದ ಪ್ರೊ.ಮನೋಜ ಡೊಳ್ಳಿ, ವಿವಿಧ ಸ್ನಾತಕೋತ್ತರ ಕೇಂದ್ರಗಳ ಸಹಾಯಕ ಪ್ರಾಧ್ಯಾಪಕರಾದ ಡಾ.ಪ್ರಕಾಶ ಯಳವಟ್ಟಿ, ಡಾ.ಐ.ಸಿ.ಚಲವಾದಿ, ಜಡೆಪ್ಪ, ಡಾ.ಚಾಂದ ಭಾಷಾ, ಡಾ.ಸಾಧು ಸೂರ್ಯಕಾಂತ, ಡಾ.ಅಶ್ವಿನ್ ಕುಮಾರ್, ಬಸವರಾಜ ಈಳಿಗನೂರ, ಸರಸ್ವತಿ ಹಾಗೂ ಇತರರು ಉಪಸ್ಥಿತರಿದ್ದರು. ಬಳಿಕ ಎರಡು ಕಡೆಯಲ್ಲಿ ಕವಿಗೋಷ್ಠಿ ನಡೆಯಿತು,