
ಬಾಳೆಹೊನ್ನೂರು.ಮೇ.೬; ಸ್ವಾರ್ಥ ರಹಿತ ಬದುಕಿಗೆ ಬೆಲೆ ನೆಲೆಯಿದೆ. ಅಷ್ಟೇ ಅದ್ಭುತ ಶಕ್ತಿಯಿದೆ. ಮನುಷ್ಯನ ಬಯಕೆಗಳು ಒಳ್ಳೆಯದು ಇದ್ದರೆ ಬದುಕು ಉಜ್ವಲಗೊಳ್ಳುತ್ತದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು ಶ್ರೀ ರಂಭಾಪುರಿ ಪೀಠದಲ್ಲಿ ಹುಣ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಮನುಷ್ಯನ ಕೈ ಸ್ವಚ್ಛವಿದ್ದರೆ ವ್ಯವಹಾರಕ್ಕೆ ತೊಂದರೆಯಿಲ್ಲ. ನಾಲಿಗೆ ಶುದ್ಧವಿದ್ದರೆ ಸ್ನೇಹ ಸಂಬAಧಗಳಿಗೆ ತೊಂದರೆಯಿಲ್ಲ. ಮನಸ್ಸು ಸ್ವಚ್ಛವಿದ್ದರೆ ಪ್ರೀತಿ ವಾತ್ಸಲ್ಯಕ್ಕೆ ತೊಂದರೆಯಿಲ್ಲ. ಈ ಮೂರು ಸ್ವಚ್ಛವಿದ್ದರೆ ಜೀವನದಲ್ಲಿ ಯಾವುದಕ್ಕೂ ತೊಂದರೆಯಿಲ್ಲ. ಒಂದು ನಿಮಿಷದಲ್ಲಿ ಬದುಕು ಬದಲಾವಣೆ ಆಗುವುದಿಲ್ಲ. ಆದರೆ ಒಂದು ನಿಮಿಷದಲ್ಲಿ ತೆಗೆದುಕೊಂಡ ನಿರ್ಧಾರ ನಮ್ಮ ಬದುಕನ್ನು ಬದಲಾಯಿಸುತ್ತದೆ. ಮನುಷ್ಯನ ಬಯಕೆಗಳು ರಚನಾತ್ಮಕವಾಗಿರಬೇಕೇ ವಿನ: ವಿನಾಶಕಾರಿಯಾಗಿರಬಾರದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿ ಸ್ಪಷ್ಟವಾಗಿ ಬೋಧಿಸಿದ್ದಾರೆ. ವೀರಶೈವ ಧರ್ಮ ಮನುಷ್ಯ ಜೀವನದ ವಿಕಾಸಕ್ಕೆ ಹೆಚ್ಚು ಒತ್ತು ಕೊಟ್ಟಿದೆ. ಅರಿವು ಆದರ್ಶ ಮತ್ತು ಆಚರಣೆಗಳಿಂದ ಮನುಷ್ಯ ಜೀವನ ಉಜ್ವಲಗೊಳ್ಳುತ್ತದೆ ಎಂದರು.ಬೇರುಗಂಡಿ ಬೃಹನ್ಮಠದ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮಿಗಳು ಸುಮಾರು 15 ಜನ ವೀರಮಾಹೇಶ್ವರ ವಟುಗಳಿಗೆ ಶಿವದೀಕ್ಷೆಯಿತ್ತು ಪಂಚಾಕ್ಷರ ಮಂತ್ರವನ್ನು ಬೋಧಿಸಿದರು. ತರೀಕೆರೆ ಹಿರೇಮಠದ ಜಗದೀಶ್ವರ ಶಿವಾಚಾರ್ಯರು, ಓಂಕಾರ ಬೆನ್ನೂರಿನ ಸಿದ್ಧರೇಣುಕ ಶಿವಾಚಾರ್ಯರು, ಸೇಡಂ ವಿರಕ್ತಮಠದ ಪಂಚಾಕ್ಷರ ಶ್ರೀಗಳು, ಮಳಖೇಡದ ಕೊಟ್ಟೂರೇಶ್ವರ ಶಿವಾಚಾರ್ಯರು, ಚಿಪ್ಪಲಕಟ್ಟಿ ಕಲ್ಲಯ್ಯಸ್ವಾಮಿ ಉಪಸ್ಥಿತರಿದ್ದು ನುಡಿ ನಮನ ಸಲ್ಲಿಸಿದರು.ನಾಡಿನ ನಾನಾ ಭಾಗಗಳಿಂದ ಆಗಮಿಸಿದ ಭಕ್ತ ಸಮೂಹಕ್ಕೆ ಶ್ರೀ ರಂಭಾಪುರಿ ಜಗದ್ಗುರುಗಳು ಫಲ ಮಂತ್ರಾಕ್ಷತೆಯಿತ್ತು ಶುಭ ಹಾರೈಸಿದರು. ಕ್ಷೇತ್ರದ ಎಲ್ಲ ದೈವಗಳಿಗೆ ವಿಶೇಷ ಪೂಜೆ ಜರುಗಿತು. ಆಗಮಿಸಿದ ಸಕಲ ಸದ್ಭಕ್ತರಿಗೆ ಅನ್ನ ದಾಸೋಹ ಜರುಗಿತು.