ಬಬಲೇಶ್ವರ ಶಾಂತವೀರ ಕಾಲೇಜು ತಂಡಕ್ಕೆ ಕಬಡ್ಡಿ ಪ್ರಶಸ್ತಿ

ನಿಡಗುಂದಿ :ಆ.27: ಬಬಲೇಶ್ವರದ ಶ್ರೀ ಶಾಂತವೀರ ಪದವಿ ಕಾಲೇಜು ತಂಡ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಮೂರನೆಯ ವಲಯ ಮಟ್ಟದ 2022-23 ನೇ ಸಾಲಿನ ಪುರುಷರ ಕಬಡ್ಡಿ ಟೂರ್ನಿ ಗೆದ್ದು ಪ್ರಶಸ್ತಿ ತನ್ನದಾಗಿಸಿಕೊಂಡಿದೆ.
ನಿಡಗುಂದಿ ತಾಲೂಕಿನ ಗೊಳಸಂಗಿಯ ಶ್ರೀ ಚನ್ನಮಲ್ಲಪ್ಪ ಚನ್ನವೀರಪ್ಪ ಹೆಬ್ಬಾಳ ಸರಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ಆಯೋಜನೆಗೊಂಡಿದ್ದ ಕಬಡ್ಡಿ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ವಿಜೇತ ಬಬಲೇಶ್ವರ ಕಾಲೇಜು ತಂಡವು ಮುದ್ದೇಬಿಹಾಳದ ಎಸ್.ಎಸ್.ಪಿ.ಒ.ಸರಕಾರಿ ಪ್ರಥಮ ದರ್ಜೆ ಕಾಲೇಜು ತಂಡವನ್ನು ಮಣಿಸಿ ಪ್ರಥಮ ಸ್ಥಾನದೊಂದಿಗೆ ಪ್ರಶಸ್ತಿ ಬಾಚಿಕೊಂಡಿತು.
ತಿಕೋಟಾದ ನ್ಯೂ ಆಟ್ರ್ಸ ಆಂಡ್ ಕಾಮರ್ಸ ಕಾಲೇಜು ತಂಡ ತೃತೀಯ ಸ್ಥಾನಕ್ಕೆ ತೃಪ್ತಿ ಪಡೆಯತು. ಪಂದ್ಯಾವಳಿಯ ಉತ್ತಮ ಕ್ಯಾಚರ್, ರೈಡರ್ ಹಾಗೂ ಆಲ್ ರೌಂಡರ್ ಸೇರಿದಂತೆ ಹಲವು ಪ್ರಶಸ್ತಿ, ಪುರಸ್ಕಾರ ಆಟಗಾರರಿಗೆ ಕೊಡಮಾಡಲಾಯಿತು.
ದೇಶಿ ಕ್ರೀಡೆ ಕಬಡ್ಡಿ ಸವಿ ಉಂಡ ಜನತೆ : ಗ್ರಾಮೀಣ ಪ್ರದೇಶದ ಅಚ್ಚುಮೆಚ್ಚಿನ ದೇಶಿ ಕ್ರೀಡೆ ಕಬಡ್ಡಿ ಪಂದ್ಯಗಳ ರಸಸ್ವಾದವನ್ನು ಗೊಳಸಂಗಿ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳ ಕ್ರೀಡಾಸಕ್ತರು ಸವಿದು ಸಂತಸ ಪಟ್ಟರು. ದಿನವಿಡಿ ನಡೆದ ಕಬಡ್ಡಿ ಪಂದ್ಯದ ರೋಚಕತೆಯನ್ನು ಕಣ್ತುಂಬಿಸಿಕೊಂಡರು.ಅದರಲ್ಲೂ ರಾತ್ರಿ ಹೊನಲು ಬೆಳಕಿನಲ್ಲಿ ನಡೆದ ಸೆಮಿಫೈನಲ್ಸ್ ಮತ್ತು ಫೈನಲ್ ಕಬಡ್ಡಿ ಪಂದ್ಯದ ಕ್ಷಣಕ್ಷಣದ ಜಿದ್ದಾಜಿದ್ದಿನ ಜಿದ್ದಾಟವನ್ನು ಕಂಡು ಕೇಕೇ ಹಾಕಿದರು. ಕತ್ತಲಾದ ನಂತರವೂ ಕ್ರೀಡಾಪ್ರಿಯರ ಉತ್ಸಾಹ ಕಹಳೆ ಮೊಳಗಿತ್ತು. ಸಿಳ್ಳೆ ಚಪ್ಪಾಳೆ ತಟ್ಟಿ ಆಟಗಾರರಿಗೆ ಹುರಿದುಂಬಿಸಿ ಖುಷಿ ಪಟ್ಟರು. ಇನ್ನೊಂದೆಡೆ ಆಯೋಜಕರಲ್ಲಿ ಸಂತೃಪ್ತ ಭಾವ ಮೂಡಿ ಪಂದ್ಯಾಟ ಯಶಸ್ವಿ ಕಂಡಿತು.
ಸಮಾರೋಪ ಸಮಾರಂಭ : ತಡರಾತ್ರಿ ಜರುಗಿದ ಪಂದ್ಯಾವಳಿ ಮುಕ್ತಾಯ ಸಮಾರಂಭದಲ್ಲಿ ಪ್ರಥಮ,ದ್ವೀತಿಯ, ತೃತೀಯ ಸ್ಥಾನ ಪಡೆದ ವಿಜೇತ ತಂಡಗಳಿಗೆ ಹಾಗೂ ವೈಯಕ್ತಿಕ ಪ್ರಶಸ್ತಿಗೆ ಭಾಜನರಾದ ಆಟಗಾರರಿಗೆ ಪ್ರಶಸ್ತಿ ಬಹುಮಾನ ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ರಾಣಿ ಚನ್ನಮ್ಮ ವಿವಿ ಬೆಳಗಾವಿ ವಲಯ ಸರಕಾರಿ ಮಹಾವಿದ್ಯಾಲಯಗಳ ಪ್ರಾಧ್ಯಾಪಕರ ಸಂಘದ ಅಧ್ಯಕ್ಷ ಡಾ.ನೀಲಪ್ಪ ಹೊಸಮನಿ ಮಾತನಾಡಿ, ಗ್ರಾಮಸ್ಥರ ನೆರವಿನಿಂದ ಅಚ್ಚುಕಟ್ಟಾಗಿ, ಅದ್ದೂರಿಯಾಗಿ ಪಂದ್ಯಾವಳಿ ಸಂಘಟಿಸಿ ಯಶಸ್ವಿಗೊಳಿಸಿದ ಕಾಲೇಜಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಪ್ರೊ.ಎಸ್.ಎಸ್.ರಾಜಮಾನ್ಯ, ಪಂದ್ಯಾವಳಿ ಯಶಸ್ವಿಗೆ ಸಹಕರಿಸಿದ ಮಹನೀಯರನ್ನು ಸ್ಮರಿಸಿದರು. ಪಂದ್ಯಗಳು ಎಲ್ಲರನ್ನು ತೃಪ್ತಿಗೊಳಿಸಿವೆ. ಭವಿಷ್ಯದಲ್ಲಿ ಇಂಥಹ ಕ್ರೀಡಾಕೂಟ ಸೇರಿದಂತೆ ಹಲವು ಸೃಜನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆಯನ್ನು ಹೊಂದಿರುವದಾಗಿ ತಿಳಿಸಿದರು.
ಪಂದ್ಯಾವಳಿಗೆ ಪ್ರೋತ್ಸಾಹದೊಂದಿಗೆ ಸಹಕರಿಸಿದ ಮತ್ತು ನೆರವು ನೀಡಿದ ಗ್ರಾಮಸ್ಥರು ಮತ್ತು ಹಲ ಮಹಾವಿದ್ಯಾಲಯಗಳ ಸಿಬ್ಬಂದಿಗಳನ್ನು, ಕಬಡ್ಡಿ ಅಸೋಸಿಯೇಷನ್ ನ ಎಲ್ಲ ಪದಾಧಿಕಾರಿಗಳನ್ನು ಇದೇ ವೇಳೆ ಅಭಿನಂದಿಸಿ ಸನ್ಮಾನಿಸಲಾಯಿತು.
ದೇ.ಹಿಪ್ಪರಗಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಅಶೋಕಕುಮಾರ ಜಾಧವ, ಗೊಳಸಂಗಿ ಗ್ರಾಪಂ ಅಧ್ಯಕ್ಷ ಕೇಶವ ಪವಾರ, ಸಮಾಜ ಸೇವಕ,ಕರವೇ ಜಿಲ್ಲಾಧ್ಯಕ್ಷ ಫಯಾಜ ಕಲಾದಗಿ, ಭಾರತ ಸೇವಾದಳದ ಜಿಲ್ಲಾ ಪ್ರಮುಖರಾದ ನಾಗೇಶ ಡೋಣೂರ, ಕಲಾವಿದ ಸೋಮಶೇಖರ ರಾಠೋಡ, ಮುಖಂಡರಾದ ಮಹಾಂತೇಶ ಕಮತಗಿ, ಡಾ.ಎಮ್. ಎಸ್.ಮೇಟಿ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಅಮೃತ ಯಾದವ, ಶೇಖು ಲಮಾಣಿ, ಸುರೇಶ್ ಕಿರಗತ, ಪ್ರೊ,ಸಿ.ಎಸ್.ನಾಯಕ, ಡಾ.ದ್ರಾಕ್ಷಾಯಣಿ ಟಕ್ಕಳಕಿ, ಪ್ರೊ.ಎಸ್.ಆರ್.ಕುಂಬಾರ,ಪ್ರೊ.ಪಿ.ಎಮ್.ದೇವಿ,ಡಾ. ಸಿ.ಎನ್. ಗೊಳಸಂಗಿ, ಡಾ.ಸಂತೋಷ ಹೊಸಮನಿ,ಡಾ.ಎಸ್.ಬಿ.ಬಿರಾದಾರ, ಎಂ.ಡಿ.ರಿಜ್ವಾನುಲ್ಲಾ ಹುಣಚಗಿ, ಶ್ರೀಮತಿ ಬೇಬಿ ಕೂಡಗಿ ಸೇರಿದಂತೆ ವಿವಿಧ ಕಾಲೇಜುಗಳ ಸಿಬ್ಬಂದಿಗಳು, ಗ್ರಾಮದ ಮುಖಂಡರು ಇದ್ದರು.
ಪಂದ್ಯಾವಳಿ ಆಯೋಜಿಸುವಲ್ಲಿ ಮಹತ್ತರ ಪಾತ್ರ ವಹಿಸಿದ ದೈಹಿಕ ಶಿಕ್ಷಣ ನಿರ್ದೇಶಕಿ ಡಾ.ಶೋಭಾ ವಾಲಿ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು. ಪ್ರೊ.ಸುಭಾಷ ಡಿ ನಿರೂಪಿಸಿದರು. ಪ್ರೊ.ರುದ್ರೇಶ ಅಳ್ಳೊಳ್ಳಿ ವಂದಿಸಿದರು.