ಬಬಲೇಶ್ವರ ತಿಕೋಟಾ ಬಳಿ ಮಿನಿ ವಿಧಾನಸೌಧ ನಿರ್ಮಾಣ: ಶಾಸಕ ಎಂ.ಬಿ.ಪಾಟೀಲ್

ವಿಜಯಪುರ, ಮೇ.31-ಬಬಲೇಶ್ವರ ವಿಧಾನಸಭಾ ಕ್ಷೇತ್ರದ ನೂತನ ತಾಲೂಕು ಕೇಂದ್ರಗಳಾದ ಬಬಲೇಶ್ವರ ಮತ್ತು ತಿಕೋಟಾದಲ್ಲಿ ಮಿನಿ ವಿಧಾನಸೌಧಗಳನ್ನು ನಿರ್ಮಿಸಲು ಟೆಂಡರ್ ಕರೆಯಲಾಗಿದೆ ಎಂದು ಮಾಜಿ ಸಚಿವ, ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ನೂತನ ತಾಲೂಕು ಕೇಂದ್ರಗಳಲ್ಲಿ ಎಲ್ಲ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಕಛೇರಿಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ತಲಾ 10ಕೋಟಿ ರೂ. ವೆಚ್ಚದಲ್ಲಿ ಬಬಲೇಶ್ವರ ಹಾಗೂ ತಿಕೋಟಾ ಎರಡು ಕಡೆ ಸುಸಜ್ಜಿತ ಮಿನಿ ವಿಧಾನಸೌಧ ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಬಬಲೇಶ್ವರದಲ್ಲಿ ಅಡವಿಸಂಗಾಪುರ ರಸ್ತೆಯಲ್ಲಿರುವ ಸರ್ಕಾರಿ ಜಾಗೆಯಲ್ಲಿ ಹಾಗೂ ತಿಕೋಟಾದಲ್ಲಿ ಹಳೆಪ್ರವಾಸಿ ಮಂದಿರದ ಜಾಗೆಯಲ್ಲಿ ಈ ಮಿನಿ ವಿಧಾನಸೌಧಗಳನ್ನು ನಿರ್ಮಿಸಲಾಗುತ್ತಿದ್ದು, ಈಗಾಗಲೇ ಟೆಂಡರ್ ಕರೆಯಲಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದ ನಂತರ ಕಾಮಗಾರಿ ಆರಂಭಿಸಲಾಗುವುದು ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ.