ಬಬಲೇಶ್ವರ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಸಿಇಓ ಭೇಟಿ: ಪರಿಶೀಲನೆ

ವಿಜಯಪುರ, ಆ.5-ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ರಾಹುಲ್ ಶಿಂಧೆ ಅವರು ಬಬಲೇಶ್ವರ ತಾಲೂಕಿನ ಸಾರವಾಡ, ನಿಡೋಣಿ, ಅರ್ಜುಣಗಿ, ಹಲಗಣಿ ಹಾಗೂ ಕಂಬಾಗಿ ಗ್ರಾಮ ಪಂಚಾಯತಿಗಳಿಗೆ ಆಗಸ್ಟ್ 4ರಂದು ಭೇಟಿ ನೀಡಿ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದರು.

ಸಾರವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದದಾಮಟ್ಟಿ ಗ್ರಾಮದಲ್ಲಿ ಜಲ ಜೀವನ ಮಿಷನ್ ಯೋಜನೆಯಡಿ ಪ್ರತಿ ಮನೆಮನೆಗೆ ಕಾರ್ಯಾತ್ಮಕ ನಳ ಸಂಪರ್ಕದ ಪೈಪ್ ಲೈನ್ ಕಾಮಗಾರಿ ವೀಕ್ಷಿಸಿದರು. ಅರ್ಜುಣಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಕ್ಕುಂಡಿಯಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಭೇಟಿ ಮಾಡಿ ಮಕ್ಕಳ ಹಾಜರಾತಿ ವಹಿ ಪರಿಶೀಲಿಸಿದರು. ಮಕ್ಕಳಿಗೆ ನೀಡುವ ಆಹಾರದ ಗುಣಮಟ್ಟವನ್ನು ಪರಿಶೀಲಿಸಿದರು.

ಪ್ರತಿದಿನ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಹಾಲು, ಮೊಟ್ಟೆ, ಊಟ, ತಿಂಡಿ ಕೊಡಬೇಕು, ಬಾಲ ವಿಕಾಸ ಸಮಿತಿ ರಚನೆ ಮಾಡಬೇಕು ಮತ್ತು ಮಕ್ಕಳಿಗೆ ಸರಿಯಾಗಿ ಆಟ ಪಾಠ ಹೇಳಬೇಕು ಎಂದು ಅಂಗನವಾಡಿ ಶಿಕ್ಷಕಿ ಹಾಗೂ ಕಾರ್ಯಕರ್ತರಿಗೆ ಸೂಚಿಸಿದರು. ಯಕ್ಕುಂಡಿ ಗ್ರಾಮದ ಸರಕಾರಿ ಶಾಲೆಗೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕಾಂಪೌಂಡ್ ನಿರ್ಮಾಣದ ಕಾಮಗಾರಿ ವೀಕ್ಷಿಸಿ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಬೇಕು ಎಂದು ತಾಂತ್ರಿಕ ಸಂಯೋಜಕರಿಗೆ ನಿರ್ದೇಶನ ನೀಡಿದರು. ಯಕ್ಕುಂಡಿ ಹಾಗೂ ಹೊಕ್ಕುಂಡಿ ಗ್ರಾಮಗಳಲ್ಲಿ ಜಲ ಜೀವನ ಮಿಷನ್ ಯೋಜನೆಯಡಿ ಪ್ರತಿ ಮನೆ ಮನೆಗೆ ಕಾರ್ಯಾತ್ಮಕ ನಳ ಸಂಪರ್ಕದ ಕಾಮಗಾರಿಯ ವೀಕ್ಷಣೆ ನಡೆಸಿದರು.

ಹಲಗಣಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಂಗಾಪುರ ಎಚ್ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಬಾಣಂತಿಯರಿಗೆ, ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ವಿತರಿಸುವ ಆಹಾರದ ಬಗ್ಗೆ ದಾಖಲಾತಿಗಳನ್ನು ಪರಿಶೀಲಿಸಿದರು. ಇದೇ ವೇಳೆ ಶೇಗುಣಸಿ ಗ್ರಾಮದ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಮಹಾಲಕ್ಷ್ಮಿ ಸ್ವ-ಸಹಾಯ ಸಂಘದ ಸದಸ್ಯರಿಂದ ನಿರ್ಮಿಸುತ್ತಿರುವ ನರ್ಸರಿ ಅಭಿವೃದ್ಧಿ ಕಾಮಗಾರಿಯ ಬಗ್ಗೆ ಮಾಹಿತಿ ಪಡೆದರು. ನರ್ಸರಿ ಕಾಮಗಾರಿಯ ಬಗ್ಗೆ ಜನಸಾಮಾನ್ಯರಿಗೆ ಸಂಪೂರ್ಣ ಮಾಹಿತಿ ತಿಳಿಯಲು ಮುಖ್ಯ ರಸ್ತೆಗೆ ಮಾಹಿತಿ ಫಲಕವನ್ನು ಅಳವಡಿಸಲು ಹಲಗಣಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು. ಸಂಗಾಪೂರ ಎಚ್ ಗ್ರಾಮದಲ್ಲಿ ಜಲಜೀವನ ಮಿಷನ್ ಯೋಜನೆಯಡಿ ಪ್ರತಿ ಮನೆಮನೆಗೆ ಕಾರ್ಯಾತ್ಮಕ ನಳ ಸಂಪರ್ಕದ ಕಾಮಗಾರಿಯ ಬಗ್ಗೆ ಮಾಹಿತಿ ಪಡೆದರು.

ನಿಡೋಣಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತಿಗಣಿಬಿದರಿ, ಕಂಬಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಂಬಾಗಿ ಹಾಗೂ ಹಣಮಸಾಗರ ಗ್ರಾಮಗಳಲ್ಲಿ ಜಲ ಜೀವನ ಮಿಷನ್ ಯೋಜನೆಯಡಿ ಪ್ರತಿ ಮನೆಮನೆಗೆ ಕಾರ್ಯಾತ್ಮಕ ನಳ ಸಂಪರ್ಕದ ಕಾಮಗಾರಿಯ ಬಗ್ಗೆ ಮಾಹಿತಿ ಪಡೆದರು.

ಮಕ್ಕಳೊಂದಿಗೆ ಸಂವಾದ: ಜಿಪಂ ಸಿಇಓ ರಾಹುಲ್ ಶಿಂಧೆ ಅವರು, ಗ್ರಾಮೀಣ ಭಾಗದಲ್ಲಿ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಅರ್ಜುಣಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಯಕ್ಕುಂಡಿ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿಯ ಶಾಲಾ ಕೊಠಡಿಗೆ ತೆರಳಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದ್ದರಿಂದ ಕನ್ನಡ ಭಾಷಾ ಮಾಧ್ಯಮದಲ್ಲಿ ಓದಲು ಹಿಂಜರಿಯಬಾರದು. ಐಎಎಸ್, ಐಪಿಎಸ್, ಐಎಫ್‍ಎಸ್ ಮತ್ತು ಕೆಎಎಸ್‍ದಂತಹ

ಉನ್ನತ ಪರೀಕ್ಷೆಗಳನ್ನು ಪಾಸುಮಾಡಿಕೊಂಡು ಉನ್ನತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುವ ಗುರಿಯೊಂದಿಗೆ ಅಧ್ಯಯನ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.

ಓದಲು ಪುಸ್ತಕ ನೀಡಿ: ಸಾರವಾಡ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಿಇಓ ಅವರು, ಆ ಪಂಚಾಯತಿ ವ್ಯಾಪ್ತಿಯ ದದಾಮಟ್ಟಿ ಗ್ರಾಮದ ಚಾವಡಿ ಕಟ್ಟೆಯಲ್ಲಿ ಕುಳಿತುಕೊಂಡಿದ್ದ ಹಿರಿಯ ನಾಗರಿಕರು ಮತ್ತು ಸಾರ್ವಜನಿಕರೊಂದಿಗೆ ಆಪ್ತವಾಗಿ ಮಾತನಾಡಿದರು. ಅವರಿಗೆ ಓದಲು ದಿನ ಪತ್ರಿಕೆ, ಉತ್ತಮ ಪುಸ್ತಕಗಳು, ಮಾಸಿಕ ಪತ್ರಿಕೆಗಳು ಹಾಗೂ ಇತರೆ ಪುಸ್ತಕಗಳನ್ನು ವಿತರಿಸಲು ಕ್ರಮಕೈಗೊಳ್ಳುವಂತೆ ಆ ಪಂಚಾಯತಿ ಅಭಿವೃದ್ಧಿ ಅಧಕಾರಿಗಳಿಗೆ ಸಿಇಓ ಅವರು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಬಬಲೇಶ್ವರ ತಾಲೂಕಿನ ಸಹಾಯಕ ನಿರ್ದೇಶಕರಾದ ಭಾರತಿ ಹಿರೇಮಠ, ಬಬಲೇಶ್ವರ ತಾಲೂಕಿನ ಯೋಜನಾಧಿಕಾರಿಗಳಾದ ಎಸ್.ಬಿ.ಪಾಟೀಲ, ವಿಜಯ ಪುರದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಬಿ.ಬಿ.ಜಂಗಮಶೆಟ್ಟಿ, ಕಿರಿಯ ಸಹಾಯಕ ಅಭಿಯಂತರರಾದ ಹೆಚ್.ಎಮ್.ಸಾರವಾಡ, ಅರ್ಜುಣಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಿ.ಎಚ್.ಮುಜಾವರ್, ಹಲಗಣಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸವಿತಾ ತಳವಾರ, ಕಂಬಾಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರೇಖಾ ಪಾಟೀಲ, ಸಹಾಯಕ ಎಂಜಿನಿಯರ್ ಪಿ.ಎಚ್ ಹೆಬ್ಬಾರ, ಪಂಚಾಯತ್ ರಾಜ್ ಇಲಾಖೆಯ ಬಿ.ಜೆ. ಪಾಟೀಲ, ಬಬಲೇಶ್ವರ ತಾಲೂಕಿನ ತಾಂತ್ರಿಕ ಸಂಯೋಜಕರಾದ ಕಲ್ಲನಗೌಡ ಬಿರಾದಾರ ಹಾಗೂ ಇತರರು ಹಾಜರಿದ್ದರು.