ಬನ್ನೂರಿನಲ್ಲಿ ಸೀ-ಪುಢ್ ಪಾರ್ಕ್ ಕಾರ್ಯಗತ- ಶಾಸಕ ಸಂಜೀವ ಮಠಂದೂರು

ಊರಿನ ಅಭಿವೃದ್ಧಿಯಲ್ಲಿ ‘ಅಪಸ್ವರ’ ಬೇಡ

ಪುತ್ತೂರು, ನ.೧೮- ಪ್ರಧಾನಿ ಅವರ ಆತ್ಮನಿರ್ಭರ ಭಾರತದ ಯೋಜನೆಯಂತೆ ಗ್ರಾಮೀಣ ಭಾಗದ ಯುವಜನತೆಗೆ ಉದ್ಯೋಗ ಮತ್ತು ಉದ್ಯಮ ನಿರ್ಮಾಣದ ಕನಸುಗಳ ಉತ್ತೇಜನಕ್ಕೆ ಪುತ್ತೂರಿನ ಬನ್ನೂರಿನಲ್ಲಿ ಸೀ-ಪುಢ್ ಪಾರ್ಕ್ ಯೋಜನೆ ಕಾರ್ಯಗತವಾಗಲಿದೆ. ರಾಜಕೀಯ ಹೇಳಿಕೆಗಳ ಅಪಸ್ವರ ಬಿಟ್ಟು ಎಲ್ಲರೂ ಒಂದಾಗಿ ಊರಿನ ಅಭಿವೃದ್ಧಿಗೆ ಮುಂದಾಗಬೇಕು ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದರು.

 ಮಂಗಳವಾರ ಅವರು ಪತ್ರಕರ್ತರೊಂದಿಗೆ ಮಾತನಾಡಿ, ದಕ ಜಿಲ್ಲೆಗೆ ಮತ್ಸೋದ್ಯಮ ಮತ್ತು ಸೀ-ಪುಢ್ ಪಾರ್ಕ್ ನಿರ್ಮಾಣದ ಯೋಜನೆಗಳು ಆತ್ಮನಿರ್ಭರ ಭಾರತ ಯೋಜನೆಯಲ್ಲಿ ದೊರೆತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಪುತ್ತೂರು ವಿಧಾನಸಭಾ ವ್ಯಾಪ್ತಿಗೆ ಸೀ-ಪುಢ್ ಪಾರ್ಕ್ ಯೋಜನೆಯನ್ನು ನೀಡಿದ್ದಾರೆ. ಇದೊಂದು ಮೌಲ್ಯವರ್ಧಿತ ಉತ್ಪನ್ನ ಮತ್ತು ಗೃಹ ಉಪಯೋಗಿ ಆಹಾರ ಉತ್ಪನ್ನ ಉದ್ಯಮವಾಗಿದೆ. ಸುಮಾರು ೨ ಸಾವಿರಕ್ಕೂ ಹೆಚ್ಚು ಮಂದಿಗೆ ಇದರಲ್ಲಿ ಉದ್ಯೋಗ ದೊರೆಯಲಿದೆ ಎಂದು ಅವರು ತಿಳಿಸಿದರು.

ಸೀ ಫುಡ್ ಪಾರ್ಕ್‌ಗೆ ಕನಿಷ್ಠ ೫೦ ಎಕರೆ ನಿವೇಶನ ಬೇಕಾಗಿದೆ. ಇದಕ್ಕೆ ೫೦ ಲಕ್ಷದ ಅನುದಾನವಿದೆ. ಜಾಗದ ಕೊರತೆಯಿಂದ ಈ ಅವಕಾಶ ತಪ್ಪಬಾರದು ಎಂಬ ಉದ್ದೇಶದಿಂದ ಈ ಹಿಂದೆ ಮೆಡಿಕಲ್ ಕಾಲೇಜಿಗೆಂದು ಕಾಯ್ದಿರಿಸಿದ ಜಾಗದಲ್ಲಿ ಸೀ-ಪುಢ್ ಪಾರ್ಕಿನ ಚಿಂತನೆ ನಡೆಸಲಾಗಿದೆ. ಅಧಿಕಾರಿಗಳ ಸಲಹೆಯಂತೆ ಮೆಡಿಕಲ್ ಕಾಲೇಜಿಗೂ ಬೇರೆ ಕಡೆಯಲ್ಲಿ ನಿವೇಶನ ಹುಡುಕುವ ಕಾರ್ಯಕ್ಕೆ ಚಿಂತನೆ ನಡೆದಿದೆ.  ಪುತ್ತೂರಿನ ಅಭಿವೃದ್ಧಿಯ ಹಿನ್ನಲೆಯಲ್ಲಿ ಯುವಕರು ಉದ್ಯಮಗಳನ್ನು ತೆರೆಯುವ ಕಾರ್ಯವಾಗಬೇಕು. ಆದರೆ ಇದೀಗ ಬನ್ನೂರಿನ ಈ ಸ್ಥಳದ ವಿಚಾರದಲ್ಲಿ ಅಪಸ್ವರ ಬರುತ್ತಿದೆ. ರಾಜಕೀಯ ಮುಖಂಡರು ಹೇಳಿಕೆ ನೀಡಿ ಜನತೆಯಲ್ಲಿ ಗೊಂದಲ ನಿರ್ಮಾಣ ಮಾಡುವುದನ್ನು ಬಿಟ್ಟು, ಊರಿನ ಅಭಿವೃದ್ಧಿ ಕುರಿತು ಯೋಚನೆ ಮಾಡಬೇಕಾಗಿದೆ. ನಮ್ಮ ಜತೆ ಮಾತುಕತೆ ನಡೆಸುವುದಾದರೆ ನಾವು ಸದಾ ಸಿದ್ಧವಾಗಿದ್ದೇವೆ. ನಾವು ಜನವಿರೋಧಿಗಳಲ್ಲ.  ಮುಂದಿನ ೨೫ ವರ್ಷಗಳಲ್ಲಿ ಪುತ್ತೂರಿನ ಬೆಳವಣಿಗೆಯನ್ನು ಮುಂದಿಟ್ಟುಕೊಂಡು ಈ ಯೋಜನೆಗೆ ಮುಂದಾಗಿದ್ದೇವೆ.  ಕೇವಲ ರಾಜಕೀಯ ದುರುದ್ದೇಶಪೂರಿತ ಹೇಳಿಕೆ ಬಿಟ್ಟು ಪುತ್ತೂರು ಅಭಿವೃದ್ಧಿಯಲ್ಲಿ ರಾಜಕೀಯ ರಹಿತವಾಗಿ ಎಲ್ಲರೂ ಪಾಲ್ಗೊಂಡರೆ ನಮ್ಮೂರಿನ ಜನತೆಗೆ ಪ್ರಯೋಜನವಾಗುತ್ತದೆ ಎಂದು ಅವರು ಹೇಳಿದರು.

ಜನರ ಹಿತ ಮತ್ತು ಅಭಿವೃದ್ಧಿಯ ಕಲ್ಪಣೆ ಕೊಡುವ ಯೋಜನೆ ತಂದಿದ್ದೇವೆ. ಜನರು ಅಪೇಕ್ಷೆ ಪಟ್ಟಂತೆ ಅನುಗುಣವಾಗಿ ಯೋಜನೆ ಎಲ್ಲಿ ಮಾಡಬೇಕೋ ಅಲ್ಲಿ ಮಾಡಲು ಕಾರ್ಯಪ್ರವರ್ತರಾಗಲಿದ್ದೇವೆ ಎಂದು ಅವರು ಹೇಳಿದರು. ಈ ಸಂದರ್ಭ ಪುತ್ತೂರು ನಗರಸಭಾಧ್ಯಕ್ಷ ಕೆ. ಜೀವಂಧರ ಜೈನ್ ಅವರು ಇದ್ದರು.