ಬನ್ನಿ, ಬಂಡವಾಳ ಹೂಡಿ ಡಿಸಿಎಂ ಕರೆ


ಬೆಂಗಳೂರು: ಮಾ. ೩೦- ಭಾರತದಲ್ಲಿ ಕರ್ನಾಟಕ ಹೂಡಿಕೆದಾರರಿಗೆ ಅತ್ಯಂತ ಪ್ರಶಸ್ತ ಸ್ಥಳವಾಗಿದೆ. ಹೂಡಿಕೆದಾರ ಸ್ನೇಹಿ ವಾತಾವರಣ ರಾಜ್ಯದಲ್ಲಿ ಇದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ. ಕೇರಳದಲ್ಲಿನ ಚುನಾವಣಾ ಪ್ರಚಾರದ ನಡುವೆಯೇ ಭಾರತ-ಅಮೆರಿಕ ಕಾರ್ಯತಂತ್ರದ ಸಹಭಾಗಿತ್ವ ವೇದಿಕೆ ಹಮ್ಮಿಕೊಂಡಿದ್ದ ವರ್ಚುವಲ್ ಸಭೆಯಲ್ಲಿ ತಿರುವನಂತಪುರದಿಂದಲೇ ಪಾಲ್ಗೊಂಡು ಮಾತನಾಡಿದ ಅವರು
ಕೋವಿಡ್ ನಂತರದ ದಿನಗಳಲ್ಲಿ ಕೈಗಾರಿಕೆ, ಹೂಡಿಕೆ, ಆವಿಷ್ಕಾರ ಮುಂತಾದ ಕ್ಷೇತ್ರಗಳಲ್ಲಿ ಪುಟಿದೆದ್ದಿರುವ ಭಾರತವು, ಇಡೀ ಜಗತ್ತಿನಲ್ಲಿಯೇ ಸಹಜಸ್ಥಿತಿಗೆ ಮರಳಿದ ಮೊದಲ ದೇಶವಾಗಿದೆ. ಹಾಗೆಯೇ ಕರ್ನಾಟಕವು ಹೂಡಿಕೆಗೆ ಅತ್ಯಂತ ಸೂಕ್ತ ತಾಣವಾಗಿದ್ದು ರಾಜ್ಯ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.
ಕೈಗಾರಿಕೆ ಮತ್ತು ಹೂಡಿಕೆಗೆ ಪೂರಕವಾದ ರಾಜ್ಯ ಕರ್ನಾಟಕ. ಹೊಸ ಉದ್ಯಮಗಳನ್ನು ಸ್ಥಾಪಿಸಲು ಸೂಕ್ತವಾದ ತಾಣ. ಈ ನಿಟ್ಟಿನಲ್ಲಿ ನಮ್ಮ ಸರಕಾರ ಎಲ್ಲ ರೀತಿಯ ಸಹಕಾರ ನೀಡುತ್ತಿದೆ ಎಂದ ಅವರು; ರಾಜ್ಯದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಭಾರತೀಯ ತಾಂತ್ರಿಕ ಸಂಸ್ಥೆ ಹಾಗೂ ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಯಂಥ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಿವೆ. ಹೀಗಾಗಿ ಉತ್ಕೃಷ್ಟ ಮಾನವ ಸಂಪನ್ಮೂಲಕ್ಕೂ ರಾಜ್ಯದಲ್ಲಿ ಕೊರತೆ ಇಲ್ಲ ಎಂದು ಅವರು ನುಡಿದರು.
ಇನ್ನು ಆವಿಷ್ಕಾರದಲ್ಲೂ ಕರ್ನಾಟಕ ನಂಬರ್ ೧ ಸ್ಥಾನದಲ್ಲೇ ಇದೆ. ಅದೇ ರೀತಿ ಎಲೆಕ್ಟ್ರಾನಿಕ್ಸ್ ವ್ಯವಸ್ಥೆ ವಿನ್ಯಾಸ ಮತ್ತು ನಿರ್ವಹಣೆ ಅನಿಮೇಷನ್, ವಿಷ್ಯುಯೆಲ್ ಎಫೆಕ್ಟ್ಸ್, ಗೇಮ್ಸ್ ಮತ್ತು ಕಾಮಿಕ್ಸ್ ಕ್ಷೇತ್ರದಲ್ಲೂ ರಾಜ್ಯ ದಾಪುಗಾಲಿಡುತ್ತಿದೆ ಎಂಬ ಎಂಬ ಅಂಶವನ್ನು ಎಲ್ಲರ ಗಮನಕ್ಕೆ ತಂದರು.
ಭಾರತ-ಅಮೆರಿಕ ಪಾಲುದಾರಿಕೆಯಲ್ಲಿ ಕರ್ನಾಟಕದ ಪಾತ್ರ ಮಹತ್ವದ್ದಾಗಿದೆ. ತಂತ್ರಜ್ಞಾನ ಮತ್ತು ಡಿಜಿಟಲ್ ವ್ಯವಸ್ಥೆಯ ಬೆಳವಣಿಗೆಗೆ ರಾಜ್ಯವು ಅನನ್ಯ ಕೊಡುಗೆ ನೀಡಿದೆ. ೨೨೦ ಬಿಲಿಯನ್‌ನಷ್ಟು ಒಟ್ಟು ದೇಶೀಯ ಉತ್ಪನ್ನ (ಜಿಎಸ್‌ಡಿಪಿ) ಹೊಂದಿರುವ ಕರ್ನಾಟಕವು ದೇಶದ ಅತ್ಯಂತ ಶ್ರೀಮಂತ ರಾಜ್ಯಗಳಲ್ಲಿ ಒಂದು. ಮಾಹಿತಿ- ಜೈವಿಕ ತಂತ್ರಜ್ಞಾನ, ಆರೋಗ್ಯ, ಆವಿಷ್ಕಾರ, ಎಲೆಕ್ಟ್ರಾನಿಕ್ಸ್, ಯಂತ್ರೋಪಕರಣ, ಏರೋಸ್ಪೇಸ್ ಮುಂತಾದ ಕ್ಷೇತ್ರಗಳಲ್ಲಿಯೂ ರಾಜ್ಯವು ಮುಂಚೂಣಿಯಲ್ಲಿದೆ ಎಂದು ಹೇಳಿದರು.
ಈ ವರ್ಚುಯಲ್ ಸಭೆಯಲ್ಲಿ ಭಾರತದಲ್ಲಿರುವ ಸ್ಯಾನ್‌ಪ್ರಾನ್ಸಿಸ್ಕೋ ರಾಜ್ಯದ ಕಾನ್ಸುಲ್ ಜನರಲ್ ಡಾ.ಟಿ.ವಿ.ನಾಗೇಂದ್ರ ಪ್ರಸಾದ್, ಉಪ ಕಾನ್ಸುಲ್ ಜನರಲ್ ರಾಜೇಶ್ ನಾಯಕ್, ಅಮೆರಿಕ-ಭಾರತ ಕಾರ್ಯತಂತ್ರ ವೇದಿಕೆಯ ಅಧ್ಯಕ್ಷ ಜಾನ್ ಚಾಂಬರ್ಸ್, ಇದೇ ವೇದಿಕೆಯ ವೆಸ್ಟ್ ಕೋಸ್ಟ್ ವಿಭಾಗದ ಮುಖ್ಯಸ್ಥರಾದ ದೀಪ್ತಿ ದೇಸಾಯಿ, ಐಟಿಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ಟೆಕಿಯಾನ್ ಕಾರ್ಪ್ ಸಿಇಒ ಜೈ ವಿಜಯನ್ ಮತ್ತಿತರರು ಪಾಲ್ಗೊಂಡಿದ್ದರು.