ಬನ್ನಡ್ಕದಲ್ಲಿ ಕಾರ್ಖಾನೆಯಿಂದ ಸುತ್ತಮುತ್ತಲಿನ ಪರಿಸರದಲ್ಲಿ ಮಾಲಿನ್ಯ: ದೂರು


ಮಂಗಳೂರು, ನ.೧೮- ಮೂಡುಬಿದಿರೆ ತಾಲೂಕಿನ ಪಡುಮಾರ್ನಾಡು ಗ್ರಾಮದ ಬನ್ನಡ್ಕದಲ್ಲಿ ಬೆಂಗಳೂರು ಮೂಲದ ಎಸ್ಕೆಎಫ್ ಬಾಯ್ಲರ್ ಮತ್ತು ಡ್ರೈಯರ್ ಕಾರ್ಖಾನೆಯಿಂದ ಸುತ್ತಮುತ್ತಲಿನ ಪರಿಸರದಲ್ಲಿ ಮಾಲಿನ್ಯ ಉಂಟಾಗುತ್ತಿದ್ದು, ಈ ಬಗ್ಗೆ ಇಂದು ಮಂಗಳೂರಿನಲ್ಲಿರುವ ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ಸಲ್ಲಿಸಲಾಯಿತು.
ಕಾರ್ಖಾನೆಯಿಂದಾಗಿ ಸುತ್ತಮುತ್ತಲಿನ ಪರಿಸರದಲ್ಲಿ ಮಾಲಿನ್ಯ ಹೆಚ್ಚಾಗುತ್ತಿದೆಯೆಂದು, ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಈ ಹಿಂದೆಯೇ ಕಾರ್ಖಾನೆಯ ಅಧಿಕಾರಿಗಳಿಗೆ, ಸ್ಥಳೀಯ ಪಂಚಾಯತ್ ಕಚೇರಿಗೆ ಮನವಿ ಸಲ್ಲಿಸಲಾಗಿತ್ತು. ಆದರೂ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿರಲ್ಲಿಲ್ಲ.
ಹೀಗಾಗಿ ಕಾರ್ಖಾನೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸ್ಥಳೀಯ ನಿವಾಸಿಗಳ ನಿಯೋಗ ಮಂಗಳೂರಿನಲ್ಲಿರುವ ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗೆ ಮನವಿ ಸಲ್ಲಿಸಿದೆ.
ಕಾರ್ಖಾನೆಯಿಂದ ಪರಿಸರದಲ್ಲಾಗುತ್ತಿರುವ ಸಮಸ್ಯೆ, ಪೈಂಟ್ನಿಂದ ಗಾಳಿಯಲ್ಲಿ ಬರುವ ತೀಕ್ಷ್ಣ ವಾಸನೆ, ತಾಜ್ಯ ನೀರಿನ ಹರಿವಿನಿಂದಾಗುತ್ತಿರುವ ತೊಂದರೆ ಮೊದಲಾದ ವಿಚಾರಗಳ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ.
ಈ ಹಿಂದೆ ಸ್ಥಳೀಯ ಪಂಚಾಯತ್ ಕಾರ್ಖಾನೆಗೆ ಎಚ್ಚರಿಕೆ ನೀಡಿ, ನೋಟಿಸ್ ಕಳುಹಿಸಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳದ ಕಾರಣ, ಆರು ತಿಂಗಳ ಹಿಂದೆಯೇ ಪ್ರತಿಭಟನೆ ನಡೆಸುವುದಾಗಿ ಜನರು ಎಚ್ಚರಿಕೆ ನೀಡಿದ್ದರು.
ಪರಿಸರ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಶೀಘ್ರ ಸ್ಥಳಕ್ಕೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆದು ೨೦ ದಿನಗಳಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಮುಂದಿನ ಕ್ರಮವಾಗಿ ಕಾರ್ಖಾನೆ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ನಿಯೋಗದ ಪ್ರಮುಖರು ಹೇಳಿದ್ದಾರೆ.
ಮನವಿ ಸ್ವೀಕರಿಸಿದ ಪರಿಸರ ಇಲಾಖೆಯ ಅಧಿಕಾರಿ ಕೀರ್ತಿ ಕುಮಾರ್ ಮಾತನಾಡಿ, ಅಧಿಕಾರಿಗಳು ಈಗಾಗಲೇ ಕಾರ್ಖಾನೆಗೆ ಬೇಟಿ ನೀಡಿದ್ದು, ಇಂಜಿನಿಯರಿಂಗ್ ಕೆಲಸ ನಿರ್ವಹಿಸಲು ಪರವಾನಿಗೆ ಇದ್ದು, ಪರವಾನಿಗೆ ಇಲ್ಲದೆ ಇದೀಗ ಪೈಂಟಿಂಗ್ ಕಾರ್ಯ ನಿರ್ವಹಿಸುವುತ್ತಿರುವುದು ಕಂಡು ಬಂದಿದೆ. ಇದಕ್ಕೆ ಪರವಾನಿಗೆ ತೆಗೆದುಕೊಂಡು ಕಾರ್ಯ ನಿರ್ವಹಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಇದಕ್ಕೆ ಸ್ವಲ್ಪ ಸಮಯಾವಕಾಶ ಕೋರಿದ್ದಾರೆ. ಈ ಬಗ್ಗೆ ಮತ್ತೊಮ್ಮೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.
ನಿಯೋಗದ ಸಂದೀಪ್ ಪೂಜಾರಿ, ಸೂರಜ್ ಜೈನ್, ಮಾಜಿ ಅಧ್ಯಕ್ಷರಾದ ದಯಾನಂದ ಪೈ, ಶ್ರೀನಾಥ್ ಸುವರ್ಣ, ಸದಸ್ಯರಾದ ಎಸ್ತಿನಾ ರೋಡ್ರಿಗಸ್, ಸ್ಥಳೀಯ ಪ್ರಮುಖರಾದ ಪ್ರಸನ್ನ ಶೆಟ್ಟಿ, ಭಾರತಿ ದೇವಾಡಿಗ, ನಿರೀಕ್ಷಾ, ರೇಖಾ, ಪ್ರದೀಪ್,ಲೀಲಾ, ಪ್ರಶಾಂತ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.