ಬದು ನಿರ್ಮಾಣ ಕಾಮಗಾರಿಗೆ ಚಾಲನೆ


ಲಕ್ಷ್ಮೇಶ್ವರ,ಏ.11: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರು ತಮ್ಮ ಹೊಲಗಳಲ್ಲಿಯೇ ಕೂಲಿ ಕೆಲಸ ಮಾಡಿಕೊಳ್ಳಲು ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಯಿಂದ ಜಲ ಸಂಜೀವಿನಿ ಅಭಿಯಾನದಡಿ ಬದು ನಿರ್ಮಾಣಕ್ಕೆ ಮುಂದಾಗಿದ್ದು, ಮುಂಗಾರು ಪೂರ್ವದಲ್ಲಿಯೇ ಮಳೆ ನೀರನ್ನು ಇಂಗಿಸಲು ಹೊಲದಲ್ಲಿ ಬದು ನಿರ್ಮಾಣ ಕಾಮಗಾರಿ ಆರಂಭಿಸಿದೆ.
ಲಕ್ಷ್ಮೇಶ್ವರ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳ ಹೊಲದಲ್ಲಿ ಬದು ನಿರ್ಮಾಣ ಕಾಮಗಾರಿಗೆ ಈಗಾಗಲೇ ಜಿಲ್ಲಾ ಪಂಚಾಯಿತಿಯು ಕ್ರಿಯಾ ಯೋಜನೆಯನ್ನು ಅನುಮೋದಿಸಿದೆ. ಅದರಂತೆ ತಾಲೂಕಿನಿ ಎಲ್ಲ ಗ್ರಾಮಗಳಲ್ಲಿ ಬದು ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಸಮಾನ ಕೂಲಿ: ಎನ್‍ಆರ್‍ಇಜಿಎ ಯೋಜನೆಯಡಿ ಮಹಿಳೆ, ಪುರುಷ ಎಂಬ ಭೇದವಿಲ್ಲದೆ ಎಲ್ಲರಿಗೂ 316 ರೂ. ಕೂಲಿ ಹಣ ನೀಡಲಾಗುತ್ತದೆ. ಗ್ರಾಮೀಣ ಜನರು ತಮ್ಮ ಜಮೀನುಗಳಲ್ಲಿ ತಮ್ಮದೇ ಕುಟುಂಬ ಸದಸ್ಯರು ಕೂಡಿಕೊಂಡು ಕೆಲಸ ಮಾಡಿ ಹಣ ಪಡೆಯಬಹದಾಗಿದೆ.
ವಲಸೆಗೆ ತಡೆ: ಬೇಸಿಗೆ ಕಾಲ ಆರಂಭವಾಗುತ್ತಲೆ ಲಕ್ಷ್ಮೇಶ್ವರ ತಾಲೂಕು ಬಹುತೇಕವಾಗಿ ತಾಂಡಾಗಳ ನಿವಾಸಿಗಳು ಕೆಲಸಕ್ಕಾಗಿ ಗೋವಾ, ಮಹಾರಾಷ್ಟ್ರ ಹಾಗೂ ಮಲೆನಾಡಿನ ಕಡೆಗೆ ತೆರಳುವುದು ಹೆಚ್ಚಾಗಿದೆ. ರೈತರ ಜಮೀನಿನಲ್ಲಿಯ ಕೆಲಸ ಕಾರ್ಯಗಳು ಪೂರ್ಣವಾಗಿವೆ. ಹೀಗಾಗಿ ತಾಲೂಕಿನ ಗ್ರಾಮೀಣ ಜನರಿಗೆ ಅವರ ಗ್ರಾಮದಲ್ಲಿಯೇ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲು ಬದು ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ಇದರಿಂದ ಉದ್ಯೋಗ ಅರಿಸಿ ವಲಸೆ ಹೋಗುವುದಕ್ಕೆ ಬ್ರೇಕ್ ಬಿದ್ದಿದೆ.
ಮಣ್ಣು ನೀರು ಸಂರಕ್ಷಣೆಗೆ ಜಲ ಸಂಜೀವಿನಿ: ಪ್ರಸಕ್ತ ಸಾಲಿನ ಜಲ ಸಂಜೀವಿನಿ ಕ್ರಿಯಾ ಯೋಜನೆ ತನ್ನದೆ ಆದ ವೈಶಿಷ್ಟ?ಯತೆ ಒಳಗೊಂಡಿದೆ. ಜಿಯೋ ಸ್ಪೇಷಿಯಲ್ ತಂತ್ರಜ್ಞಾನದ ನೆರವಿನೊಂದಿಗೆ ಕ್ರಿಯಾ ಯೋಜನೆ ಸಿದ್ದಪಡಿಸಲಾಗುತ್ತದೆ. ಕ್ಲಾರ್ಟ್ ಆ?ಯಪ್ ಮೂಲಕ ಸ್ಥಳಗಳನ್ನು ಗುರುತಿಸಿ ಭೌಗೋಳಿಕ ಸನ್ನಿವೇಶಗಳನ್ನು ಅರಿತು ಯೋಜನೆ ರೂಪಿಸಲಾಗಿದೆ. ರೈತರು ತಮ್ಮ ಜಮೀನಿನಲ್ಲಿ ವೈಜ್ಞಾನಿಕ ತತ್ವಗಳ ಅನುಸಾರ ಬದು ನಿರ್ಮಾಣ ಮಾಡಿಕೊಳ್ಳುವುದರಿಂದ ಜಮೀನಿನಲ್ಲಿ ಸುರಿದ ಮಳೆ ನೀರು ಅಲ್ಲಿಯೇ ಇಂಗಿ ಅಂತರ್ಜಲ ಪ್ರಮಾಣ ಹೆಚ್ಚಾಗಲಿದೆ. ಮೇಲ್ಮಣ್ಣು ಕೊಚ್ಚಿ ಹೋಗದೆ ಗುಂಡಿಗಳಲ್ಲಿಯೇ ಸಂಗ್ರಹವಾಗಲಿದೆ. ಮಳೆಗಾಲದಲ್ಲಿ ಹೆಚ್ಚು ಮಳೆಯಾದಾಗ ಮಳೆನೀರು ಹರಿದು ಕೊಚ್ಚಿ ಹೋಗದಂತೆ ಬದುವಿನಲ್ಲಿ ಮಣ್ಣಿನ ಏರಿ ಹಾಕುವುದರಿಂದ ಮಣ್ಣು ಮತ್ತು ನೀರನ್ನು ತಡೆದು ಭೂಮಿಯ ಫಲವತ್ತತೆ ವೃದ್ಧಿಯಾಗಿ ಉತ್ತಮ ಇಳುವರಿ ಪಡೆಯಲು ಸಹಾಯಕವಾಗಲಿದೆ.

ಕೋಟ್…
ಉದ್ಯೋಗ ಖಾತ್ರಿಯಲ್ಲಿ ಏಪ್ರಿಲ್ 1ರಿಂದ ದಿನಕ್ಕೆ 316 ರೂ. ಕೂಲಿ ನೀಡಲಾಗುತ್ತಿದೆ. ಜಲ ಸಂಜೀವಿನಿ ಕಾರ್ಯಕ್ರಮದಡಿ ಕ್ರಿಯಾ ಯೋಜನೆ ಸಿದ್ದಪಡಿಸಿ ಬದು ನಿರ್ಮಾಣ ಯೋಜನೆಗೆ ಆದ್ಯತೆ ನೀಡಿದ್ದೇವೆ. ಬದು ನಿರ್ಮಾಣದಿಂದ ರೈತರಿಗೆ ಎರಡು ರೀತಿಯ ಲಾಭವಿದೆ. ಇದರಿಂದ ರೈತರ ಜಮೀನಿನ ಫಲವತ್ತತೆ ಹೆಚ್ಚುವುದರ, ಜತೆಗೆ ದುಡಿದ ಹಣವನ್ನು ಮುಂದೆ ಬೀಜ, ಗೊಬ್ಬರ ಸೇರಿ ಜಮೀನಿನ ಇತರ ಕೆಲಸಕ್ಕೆ ಬಳಕೆ ಮಾಡಬಹುದಾಗಿದೆ. ಈಗಾಗಲೇ ಪ್ರತಿದಿನ 5226ಕ್ಕೂ ಹೆಚ್ಚು ಕೂಲಿಕಾರರ ಕೆಲಸಕ್ಕೆ ಬರುತ್ತಿದ್ದಾರೆ. ತಾಲೂಕಿನ ಎಲ್ಲ ರೈತರು ತಮ್ಮ ಜಮೀನನಲ್ಲಿ ಈ ಯೋಜನೆಯಡಿ ಬದು ನಿರ್ಮಿಸಿಕೊಳ್ಳಲು ಮುಂದಾಗಬೇಕು.

  • ಕೃಷ್ಣಪ್ಪ ಧರ್ಮರ, ಸಹಾಯಕ ನಿರ್ದೇಶಕರು (ಗ್ರಾಉ) ತಾಲೂಕು ಪಂಚಾಯತಿ ಲಕ್ಷ್ಮೇಶ್ವರ