ಬದುಕು ಸಮೃದ್ಧವಾಗಬೇಕಾದರೆ ಮಾನಸಿಕ ಶಾಂತಿ ಅಗತ್ಯ

ಕಲಬುರಗಿ:ಸೆ.21: ‘ಶಾಂತಿ’ ಎಂಬುದು ಕೇವಲ ಎರಡಕ್ಷರದ ಶಬ್ದವಲ್ಲ. ಅದರಲ್ಲಿ ಬಹುದೊಡ್ಡ ಶಕ್ತಿಯಿದೆ. ಆಧುನಿಕ ಕಾಲದ ಒತ್ತಡದ ಬದುಕಿನಲ್ಲಿಂದು ಮಾನವ ತನಗೆ ಲಭ್ಯವಿರುವುದನ್ನು ಅನುಭವಿಸಿ ನೆಮ್ಮದಿ ಹಾಗೂ ಶಾಂತಿಯಿಂದ ಜೀವಿಸುವದನ್ನು ಬಿಟ್ಟು, ಮತ್ತೊಬ್ಬರ ಜೊತೆಗೆ ಹೋಲಿಕೆ ಮಾಡುತ್ತಿರುವದರಿಂದ ಕೊರತೆಯೆನಿಸಿ, ಮಾನಸಿಕ ಅಶಾಂತಿಯನ್ನು ಎದುರಿಸುತ್ತಿದ್ದಾನೆ. ಬದುಕು ಸಮೃದ್ಧವಾಗಬೇಕಾದರೆ ಮಾನಸಿಕ ಶಾಂತಿ ಅಗತ್ಯವಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಅಭಿಮತ ವ್ಯಕ್ತಪಡಿಸಿದರು.
ನಗರದ ಖಾದ್ರಿ ಚೌಕನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಏರ್ಪಡಿಸಿದ್ದ ‘ವಿಶ್ವ ಶಾಂತಿ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇಂದು ಇಡೀ ಜಗತ್ತೇ ‘ಶಾಂತಿ’ಯ ಮಂತ್ರ ಪಠಿಸುತ್ತಿದೆ. ಭಯೋತ್ಪಾದನೆ, ವೈಷಮ್ಯ, ಒತ್ತಡದ ಬದುಕು, ಅನೀತಿ, ಅನ್ಯಾಯ, ಅಜ್ಞಾನ, ಹೊಂದಾಣಿಕೆ ಇಲ್ಲದಿರುವುದು, ಭ್ರಷ್ಟಾಚಾರ, ಮಾನವೀಯ ಮೌಲ್ಯಗಳು ನಶಿಸುತ್ತಿರುವುದು ಸೇರಿದಂತೆ ಮುಂತಾದ ಕಾರಣಗಳಿಂದ ಶಾಂತಿಯೆಂಬುದು ಇಲ್ಲವಾಗಿದೆ. ಸತ್ಯ ಶುದ್ದವಾದ ಕಾಯಕ ಮಾಡುವುದು, ಅನುಭಾವಿಗಳ ಸತ್ಸಂಗ ಮಾಡುವುದು, ಇದ್ದದ್ದರಲ್ಲಿಯೇ ತೃಪ್ತಿ ಅನುಭವಿಸುವ ಮನೋಭಾವ ಬೆಳೆಸಿಕೊಳ್ಳುವುದು, ಸದಾ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗುವುದು, ಮಹಾತ್ಮರ ತತ್ವಗಳು ಪಾಲಿಸುವುದು ಸೇರಿದಂತೆ ಮುಂತಾದ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಶಾಂತಿಯುತ ಜೀವನ ನಮ್ಮದಾಗಿಸಿಕೊಳ್ಳಬಹುದಾಗಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್ ಮಾತನಾಡಿ, ‘ಶಾಂತಿ’ ಎಂಬುದು ಮಾರುಕಟ್ಟೆಯಲ್ಲಿ ಹಣಕ್ಕೆ ಕೊಳ್ಳುವುದಾದರೆ, ನಾವೆಲ್ಲರೂ ಅದನ್ನು ಖರೀದಿಸಿ ಬಿಡಬಹುದಾಗಿತ್ತು. ಆದರೆ ಇದು ಬಾಹ್ಯವಾಗಿ ದೊರೆಯದ, ಹಣಕ್ಕೆ ಕೊಂಡುಕೊಳ್ಳಲಾಗದ ಬಹು ಬೆಲೆಯಳ್ಳದಾಗಿದೆ. ಶಾಂತಿ ಎಂಬುದು ಮನಸ್ಸಿನ ಸ್ಥಿತಿಯಾಗಿದೆ. ಮನುಷ್ಯನಿಗೆ ಇದು ತುಂಬಾ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ, ಸಂಸ್ಥೆಯ ಸಿಬ್ಬಂದಿಗಳಾದ ಪಾಯಲ್ ಹಿಬಾರೆ, ಪ್ರಿಯಾಂಕಾ ದೊಟಿಕೊಳ್ಳ, ಶೃತಿ ಸಿರೂರ್, ಐಶ್ವರ್ಯ ಬಿರಾದಾರ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.