ಬದುಕು- ಬೌದ್ಧಿಕ ವಿಕಸನಕ್ಕೆ ರಂಗಭೂಮಿ ಪೂರಕ  


ಸಂಜೆವಾಣಿ ವಾರ್ತೆ
ಹೊಸಪೇಟೆ ಮಾ28: ಮಾನವನ ಬದುಕು ಹಾಗೂ ವಿಕಸನಕ್ಕೆ ರಂಗಭೂಮಿ ಪೂರಕವಾಗಿದ್ದು, ಈ ನಿಟ್ಟಿನಲ್ಲಿ ಸಮಾಜ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಹಿರಿಯ ರಂಗಕರ್ಮಿ ಹಾಗೂ ಬಿ.ವಿ.ಕಾರಂತ ಪ್ರಶಸ್ತಿ ವಿಜೇತ ಪಿ.ಅಬ್ದುಲ್  ಹೇಳಿದರು.
ವಿಶ್ವ ರಂಗಭೂಮಿ ದಿನ ಅಂಗವಾಗಿ ಟೌನ್  ರೀಡಿಂಗ್ ಹಾಲ್ ಬಳಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಹಾಗೂ ವಿಶ್ವರಂಗಭೂಮಿ ದಿನ ವಿಶೇಷ ಜಾಥಾಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಮೂಢನಂಬಿಕೆ, ಅಜ್ಞಾನ ಕಳೆಯಲು ರಂಗಭೂಮಿ ಅದರಲ್ಲೂ ಬೀದಿ ನಾಟಕಗಳು ಸಹಕಾರಿಯಾಗಿವೆ. ಮನುಷ್ಯ ಸಂಕುಲದ ಏಳಿಗೆಗೆ ರಂಗಭೂಮಿ ಅತ್ಯವಶ್ಯವೆಂದು ವಿಶ್ವ ಸಂಸ್ಥೆ ಅರಿತ ಮೇಲೆ ರಂಗಭೂಮಿಗೆ ಇನ್ನಷ್ಟು ಪ್ರಾಮುಖ್ಯತೆ ದೊರೆತಿದೆ ಎಂದರು.
ಪ್ರಜಾಪ್ರಭುತ್ವ ನಮಗೆ ಮತದಾನದ ಹಕ್ಕನ್ನು ನೀಡಿದೆ. ಪವಿತ್ರವಾದ ಈ ಹಕ್ಕನ್ನು ನಾವು ಮರೆಯದೇ ಚಲಾಯಿಸಬೇಕು ಎಂದರು.
ಬಳಿಕ ಟೌನ್ ರೀಡಿಂಗ್ ಹಾಲ್ ನಿಂದ ಮತದಾನ ಜಾಗೃತಿ ಜಾಥಾ ನಡೆಯಿತು. ಶಿಕ್ಷಕ ಯತ್ನಾಳ ಮಲ್ಲಯ್ಯ, ಹವ್ಯಾಸಿ  ರಂಗಭೂಮಿ ಕಲಾವಿದರಾದ ಶೇಕ್ಷಾವಲಿ, ಕಬೀರ್, ಅಮೃತ, ಮಹ್ಮದ್ ಇನೂಸ್, ರಿಷಾದ್, ತನುಷಾ, ಅಕಲೇಶ್ ಹಾಗೂ ಪಿವಿಎಸ್‍ಬಿಸಿ ಶಾಲಾ ಮಕ್ಕಳಿದ್ದರು.