ಬದುಕು ಬದಲಾಗಬೇಕಾದರೆ ಬದುಕುವ ದಾರಿ ಬದಲಾಗಬೇಕು : ಶ್ರೀ ರಂಭಾಪುರಿ ಜಗದ್ಗುರುಗಳು

ಕಲಬುರಗಿ,ಸೆ.16:ಬದುಕು ಭಗವಂತ ಕೊಟ್ಟ ಅಮೂಲ್ಯ ಕೊಡುಗೆ. ಹಣ ಗಳಿಕೆಯೊಂದೇ ಮನುಷ್ಯನ ಗುರಿಯಲ್ಲ. ಅದರೊಂದಿಗೆ ಒಂದಿಷ್ಟು ಶಿವಜ್ಞಾನ ಸಂಪಾದಿಸಿಕೊಂಡು ಬಾಳಬೇಕು. ಬದುಕಿನ ಬದಲಾವಣೆಗೆ ಗುರಿ ಮತ್ತು ಸಾಧನೆ ಮುಖ್ಯ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶನಿವಾರ ಆದರ್ಶ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶ್ರಾವಣ ಪುರಾಣ ಮಂಗಲ ಮಹೋತ್ಸವ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮುಕ್ತ ಮಾತು ಗೊಂದಲವಿಲ್ಲದ ನಡೆ ಸುಖ ಶಾಂತಿಗೆ ಮೂಲವಾದರೆ ಕೊಂಕು ನುಡಿ ಇನ್ನೊಬ್ಬರ ಅವಹೇಳನ ಕಷ್ಟಗಳಿಗೆ ಕಾರಣವಾಗುತ್ತವೆ. ಅಕ್ಷರ ಕಲಿತ ಮನುಷ್ಯ ಭ್ರಷ್ಟನಾದರೂ ಆಗಬಹುದು. ಆದರೆ ಸಂಸ್ಕಾರ ಕಲಿತ ವ್ಯಕ್ತಿ ಎಂದೆಂದಿಗೂ ಭ್ರಷ್ಟನಾಗಲಾರ. ಹಣವನ್ನು ಮನುಷ್ಯ ಗಳಿಸಬಹುದು. ಆದರೆ ಮಾತಿನಿಂದ ಕಳೆದುಕೊಂಡ ಸಂಬಂಧ ತಿರುಗಿ ಪಡೆಯಲು ಸಾಧ್ಯವಿಲ್ಲ. ನಿಶ್ಚಿತ ಗುರಿ ಮತ್ತು ಒಳ್ಳೆಯ ಉದ್ದೇಶ ಇಲ್ಲದಿದ್ದರೆ ಎಷ್ಟೇ ಪ್ರಯತ್ನಪಟ್ಟರೂ ಸಾಧನೆಯ ಮಟ್ಟಿಲು ಏರಲು ಸಾಧ್ಯವಾಗದು. ಹಣ ಇರುವವನು ಆಳಿಗಷ್ಟೇ ಯಜಮಾನ. ಉತ್ತಮ ಗುಣ ಇರುವವನು ಮಾನವ ಕುಲಕ್ಕೆ ಯಜಮಾನ. ಲಿಂ.ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳವರ ಬಾಳ ಬದುಕು ಮಾನವ ಕುಲಕೋಟಿಗೆ ದಾರಿದೀಪ. ಅವರು ಮಾಡಿದ ತಪಸ್ಸು ಕೊಟ್ಟ ಸಂದೇಶ ಭಾವೈಕ್ಯತೆಗೆ ಆಶಾಕಿರಣವಾಗಿವೆ. ಹೂವಿನ ಹಾರ ಎಲ್ಲರಿಗೂ ಕಾಣುತ್ತದೆ. ಅದರೊಳಗಿರುವ ದಾರ ಕಾಣುವುದಿಲ್ಲ. ಹಾಗೆಯೇ ಮರದ ಹಣ್ಣುಗಳು ಕಾಣುತ್ತವೆ ಹೊರತು ಮೂಲ ತಾಯ್ಬೇರು ಕಾಣುವುದಿಲ್ಲ. ಧರ್ಮ ಅವಿನಾಶಿಯಾಗಿದ್ದು ನಾಶ ಎಂಬುದು ಇಲ್ಲವೇ ಇಲ್ಲ. ಧರ್ಮ ನಾಶ ಮಾಡುವವರೇ ಆ ಧರ್ಮದಿಂದ ನಾಶಗೊಳ್ಳುತ್ತಾರೆ. ಶ್ರೀ ಗಿರಿಯಪ್ಪ ಮುತ್ಯಾ ಅವರು ಆಧ್ಯಾತ್ಮ ಜೀವಿಯಾಗಿದ್ದು ಶ್ರೀ ಜಗದ್ಗುರು ರೇವಣಸಿದ್ಧೇಶ್ವರರಲ್ಲಿ ಅಪಾರ ಶ್ರದ್ಧೆ ಹೊಂದಿದ್ದಾರೆ. ಇಂದು ಅವರಿಗೆ “ಆಚಾರ್ಯ ಸೇವಾ ಸಿಂಧು” ಹಾಗೂ 25 ವರುಷ ಸೇವೆ ಸಲ್ಲಿಸಿದ ಶಿವಾಜಿ ಜಮಾದಾರ ಅವರಿಗೆ “ಗುರು ಭಕ್ತಿ ಕಂಠೀರವ” ಪ್ರಶಸ್ತಿ ರೇಶ್ಮೆ ಶಾಲು ಸ್ಮರಣಿಕೆ ನೀಡಿ ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು.
ಈ ಪವಿತ್ರ ಧರ್ಮ ಸಮಾರಂಭದಲ್ಲಿ ಶ್ರೀನಿವಾಸ ಸರಡಗಿಯ ರೇವಣಸಿದ್ಧ ಶಿವಾಚಾರ್ಯರು, ಸ್ಟೇಷನ್ ಬಬಲಾದ ಶಿವಮೂರ್ತಿ ಶಿವಾಚಾರ್ಯರು, ರೋಜಾ ಹಿರೇಮಠದ ಕೆಂಚಬಸವೇಶ್ವರ ಶಿವಾಚಾರ್ಯರು, ತೋನಸನಹಳ್ಳಿ ಚರಂತೇಶ್ವರಮಠದ ರೇವಣಸಿದ್ಧ ಶಿವಾಚಾರ್ಯರು, ದಂಡಗುಂಡ ಹಿರೇಮಠದ ಸಂಗನಬಸವ ಶಿವಾಚಾರ್ಯರು, ಶ್ರೀನಿವಾಸ ಸರಡಗಿ ಹಿರೇಮಠದ ವೀರಭದ್ರ ಶಿವಾಚಾರ್ಯರು, ಕೆಂಭಾವಿ ಹಿರೇಮಠದ ಚನ್ನಬಸವ ಶಿವಾಚಾರ್ಯರು ಸೇರಿದಂತೆ ಇನ್ನೂ ಅನೇಕ ಮಠಾಧೀಶರು ಪಾಲ್ಗೊಂಡಿದ್ದರು.
ಶ್ರೀ ಗಿರಿಯಪ್ಪ ಮುತ್ಯಾ ಅವರಿಗೆ ಭಕ್ತರು ತುಲಾಭಾರ ಸೇವೆ ಸಲ್ಲಿಸಿದರು. ಅಬ್ಬೆ ತುಮಕೂರಿನ ತೋಟಯ್ಯ ಶಾಸ್ತ್ರಿಗಳು ಶ್ರಾವಣ ಪರ್ಯಂತರ ನಡೆಸಿಕೊಂಡು ಬಂದ ಶ್ರೀಮದ್ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಮಂಗಲ ಹಾಡಿದರು. ಶಿವಶರಣಪ್ಪ ಸೀರಿ, ಮಲ್ಲಿಕಾರ್ಜುನ ಮುದಗಾ, ರಾಚಯ್ಯಸ್ವಾಮಿ ಮಠಪತಿ, ಅಮೃತಸ್ವಾಮಿ ಮಠಪತಿ, ವಿರೂಪಾಪುರದ ಮಲ್ಲಿಕಾರ್ಜುನಸ್ವಾಮಿ, ಶಿವಕುಮಾರ ಬೋಸಗಾ, ವಾಸುಸ್ವಾಮಿ ಮೊದಲಾದ ಗಣ್ಯರು ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು. ಸೋಮಯ್ಯ ಹಿರೇಮಠ, ನಾಗರಾಜ ಕೊಟನೂರು ಗವಾಯಿಗಳಿಂದ ಭಕ್ತಿಗೀತೆ ಜರುಗಿತು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ನೆಗಳೂರು ಹಿರೇಮಠದ ಗದಿಗೆಯ್ಯ ಶಾಸ್ತ್ರಿಗಳಿಂದ ಸ್ವಾಗತ ಮತ್ತು ನಿರೂಪಣೆ ನಡೆಯಿತು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.ಸಮಾರಂಭಕ್ಕೂ ಮುನ್ನ ಎಂ.ಬಿ.ನಗರದ ಮಹಾತ್ಮಾ ಬಸವೇಶ್ವರ ದೇವಸ್ಥಾನದಿಂದ ವೀರಶೈವ ಕಲ್ಯಾಣ ಮಂಟಪದ ವರೆಗೆ ಅಲಂಕೃತ ಸಾರೋಟ ಮೆರವಣಿಗೆಯೊಂದಿಗೆ ಶ್ರೀ ರಂಭಾಪುರಿ ಜಗದ್ಗುರುಗಳವರನ್ನು ಬರಮಾಡಿಕೊಂಡರು.