ಬದುಕು ಕೊಟ್ಟ ಭಗವಂತನನ್ನು ಮರೆಯದಿರು :  ರಂಭಾಪುರಿ ಶ್ರೀ

ಬಾಳೆಹೊನ್ನೂರು.ಆ.೨೯; ಭಗವಂತನ ಸೃಷ್ಠಿ ಅದ್ಭುತ. ಅವನು ಕೊಟ್ಟ ಕೊಡುಗೆ ಅಮೂಲ್ಯ. ಏನೆಲ್ಲವನ್ನು ಕೊಟ್ಟ ಭಗವಂತನನ್ನು ಮರೆಯದೇ ದಿನದಲ್ಲಿ ಎರಡು ನಿಮಿಷ ನೆನಪಿಸಿಕೊಂಡರೆ ಜೀವನ ಸಾರ್ಥಕಗೊಳ್ಳುವುದೆಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು ಶ್ರಾವಣ 2ನೇ  ಶ್ರೀ ರಂಭಾಪುರಿ ಪೀಠದಲ್ಲಿ ಜರುಗಿದ ಪುರಾಣ ಪ್ರವಚನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಮನುಷ್ಯನ್ಲಿರುವ ಸಿಟ್ಟು ಅವಗುಣಗಳನ್ನು ಹೊರ ಹಾಕಿದರೆ ತಾಳ್ಮೆ ಎಂಬುದು ಒಳ್ಳೆಯ ಸಂಗತಿಗಳನ್ನು ಒಳಗೊಂಡಿರುತ್ತದೆ. ಅರ್ಥ ಮಾಡಿಕೊಳ್ಳುವ ಮನಸ್ಸು, ಕೈ ಜೋಡಿಸುವ ಸ್ನೇಹ, ಕ್ಷಮಿಸುವ ಗುಣ, ಸಮಾಧಾನ ಮಾಡುವ ಒಂದು ಹೃದಯ ಇವುಗಳೇ ಮನುಷ್ಯನ ನಿಜವಾದ ಆಸ್ತಿಗಳಾಗಿವೆ. ಕಾರ್ಯ ನಿರ್ವಹಿಸುವುದೊಂದೇ ನಮ್ಮ ಗುರಿಯಾಗಬೇಕು. ಜನ ಹೊಗಳಲಿ ಹೊಗಳದಿರಲಿ, ಯಶಸ್ಸು ಸಿಗಲಿ ಸಿಗದಿರಲಿ ಅದನ್ನು ಲೆಕ್ಕಿಸದೇ ಕಾರ್ಯ ನಿರ್ವಹಿಸು. ಫಲಾನುಫಲಗಳನ್ನು ಕೊಡುವುದು ಭಗವಂತನಿಗೆ ಸೇರಿದ್ದು. ಕಷ್ಟಗಳು ಬರುವುದು ಸುಖಾಗಮನದ ಹೆಗ್ಗುರುತು. ಕಷ್ಟಗಳು ಬರುವುದು ಮುಳುಗಿಸಲಿಕ್ಕಲ್ಲ. ಅವು ತೊಳೆದು ಶುಭ್ರಗೊಳಿಸುವುದಕ್ಕೆ ಎಂಬುದನ್ನು ನೆನಪಿಡಬೇಕಾಗುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ನೊಂದವರ ಬೆಂದವರ ಬಾಳಿಗೆ ಬಲವನ್ನು ತಂದು ಕೊಟ್ಟಿರುವುದನ್ನು ಇತಿಹಾಸದ ಪುಟಗಳಿಂದ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ವೀರಶೈವ ಧರ್ಮದಲ್ಲಿರುವ ಆಧ್ಯಾತ್ಮ ಸಂಪತ್ತು ಸಿದ್ಧಾಂತ ಶಿಖಾಮಣಿ ಅಮೂಲ್ಯ ಗ್ರಂಥದಲ್ಲಿ ನಿರೂಪಿಸಲ್ಪಟ್ಟಿದೆ ಎಂದರು.“ಶ್ರೀ ಜಗದ್ಗುರು ರೇಣುಕ ವಿಜಯ” ಪುರಾಣ ಪ್ರವಚನ ಮಾಡಿದ ಮಾದನ ಹಿಪ್ಪರಗಿ ಶಾಂತವೀರ ಶಿವಾಚಾರ್ಯ ಸ್ವಾಮಿಗಳು ಶ್ರೀ ಜಗದ್ಗುರು ರೇಣುಕಾಚಾರ್ಯರು ಮಾಡಿದ ಧಾರ್ಮಿಕ ಮತ್ತು ಸಾಮಾಜಿಕ ಸತ್ಕಾçಂತಿ ಎಲ್ಲ ಕ್ರಾಂತಿಗಳ ಮೂಲ ಸೆಲೆಯಾಗಿದೆ. ಜನಮನದಲ್ಲಿರುವ ದುಷ್ಟ ಪ್ರವೃತ್ತಿಗಳನ್ನು ದೂರ ಮಾಡಿ ಸಾತ್ವಿಕ ಶಕ್ತಿಯನ್ನು ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ಗಂಗಾಧರ ಹಿರೇಮಠ ಇವರಿಂದ ಪ್ರಾರ್ಥನೆೆ ಜರುಗಿತು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು. 6 ಜನ ವೀರಮಹೇಶ್ವರ ವಟುಗಳಿಗೆ ಶಿವದೀಕ್ಷಾ ಅಯ್ಯಾಚಾರ ಜರುಗಿತು.