ಬದುಕು ಒಂದು ಸುವರ್ಣ ಅವಕಾಶ ಸಮರ್ಪಕವಾಗಿ ಬಳಸಿಕೊಳ್ಳಿ : ಶಂಭುಲಿಂಗ ಕಾಮಣ್ಣ

ಭಾಲ್ಕಿ : ಮಾ.29:73ನೇ ದಿನದ ಮನೆಗೊಂದು ಅನುಭವ ಮಂಟಪ ಕಾರ್ಯಕ್ರಮವು ಶರಣೆ ಉಮಾ ಪ್ರಕಾಶ ಖಂಡ್ರೆ ಚನ್ನಬಸವ ಆಶ್ರಮ ಹತ್ತಿರ ಗಂಜ ಭಾಲ್ಕಿ ಅವರ ಮನೆಯಲ್ಲಿ ನಡೆಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೆವರು ಹಾಗೂ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ ಅವರು ವಹಿಸಿದ್ದರು.
ಖಂಡ್ರೆ ಪರಿವಾರದವರು ಬಸವ ಗುರು ಪೂಜೆ ಸಲ್ಲಿಸಿದರು. ಸುಮನಬಾಯಿ ಬಾಬುರಾವ್ ಜಲದೆ, ರೇಖಾ ಮಹಾಜನ್, ಬಾಬುರಾವ್ ಜಲ್ದೇ, ಸುಭಾಷ್ ಖಂಡ್ರೆ, ಶಕುಂತಲಾ ಖಂಡ್ರೆ, ಗುರುಬಸವ ಪಟ್ಟದೇವರು, ಹಾಗೂ ಶಿವಾನಂದ ದೇವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಮಾ ಪ್ರಕಾಶ್ ಖಂಡ್ರೆ ಎಲ್ಲರನ್ನೂ ಸ್ವಾಗತಿಸಿ ಮಾತನಾಡಿದರು. ಶ್ರೀದೇವಿ ಶಾಂತಯ್ಯ ಸ್ವಾಮಿ ಭಕ್ತಿ ಗೀತೆ ಹಾಡಿದರು. ಬಸವೇಶ್ವರಿ ವಚನ ಗಾಯನ ಮಾಡಿದರು. ಬಸವ ಪ್ರಾರ್ಥನೆಯನ್ನು ರಾಜು ಜೂಬ್ರೆ ನೆರವೇರಿಸಿದರು. ಶಂಭುಲಿಂಗ ಕಾಮಣ್ಣ ಭಾಲ್ಕಿ ಅವರು ಶರಣರ ದ್ರಷ್ಟಿಯಲ್ಲಿ ಜೀವನ ಎನ್ನುವ ವಿಷಯದ ಕುರಿತು ಅನುಭಾವ ನುಡಿದರು.
ಶರಣರು ಬದುಕನ್ನು ತುಂಬಾ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ನಮಗೆ ತಿಳಿಸಿದ್ದಾರೆ. ಬದುಕು ಏನು? ಹೇಗೆ ಬದುಕಬೇಕು? ಎಂದೆಲ್ಲವು ತಮ್ಮ ವಚನದಲ್ಲಿ ಹೇಳಿದ್ದಾರೆ.
ಅಲ್ಲಮ ಪ್ರಭುಗಳು ಒಂದು ವಚನದಲ್ಲಿ ಹೇಳುವರು.ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯನೇರ ಬಯಸುವರು
ವೀರರೂ ಅಲ್ಲ
ಧೀರರೂ ಅಲ್ಲ
ಇದು ಕಾರಣ_ ನೆರೆ ಮೂರು ಲೋಕವೆಲ್ಲವೂ ಹಲ್ಲಣವ ಹೊತ್ತುಕೊಂಡು
ತೊಳಲುತ್ತ ಇದ್ದಾರೆ. ಗುಹೇಶ್ವರನೆಂಬ ಲಿಂಗವನವರೆತ್ತ ಬಲ್ಲರು? ಅಲ್ಲಮ ಪ್ರಭುಗಳು ರಚಿತ ಜೀವನದ ಕುರಿತು ಒಂದು ಸುಂದರ ವಚನ. ಈ ವಚನದಲ್ಲಿ ಅಲ್ಲಮರು ಹೇಳುವರು, ದೇವರು ನಿನಗೆ ಒಂದು ದೇಹ ಮತ್ತು ಬದುಕು ಎಂಬ ಕುದುರೆ ನೀಡಿದ್ದಾರೆ. ಎಲ್ಲರಿಗೂ ವಿಶೇಷವಾಗಿ ಇರುವುದು ಆ ಕುದುರೆ. ಆದರೆ ಜನ ಅದನ್ನು ಮುನ್ನಡೆಸಲು ಬಾರದೆ ಬೇರೆಯವರ ಪಕ್ಕದವರ ಕುದುರೆ ಚೆನ್ನಾಗಿದೆ ಎಂದು ಹೇಳಿ ಅದನ್ನು ನಡೆಸಬೇಕು ಎಂದು ಯೋಚಿಸುವರು. ಈ ರೀತಿ ಯೋಚನೆ ಮಾಡುವ ಜನರು ವೀರರು ಅಲ್ಲ ಧೀರರೂ ಅಲ್ಲ. ಈ ದೇಹವೆಂಬ ಕುದುರೆಯ ಮೇಲೆ ಕುಳಿತು ಸವಾರಿ ಮಾಡಬೇಕೆ ಹೊರತು ಇದು ಕಪ್ಪು ಇದು ಬಿಳಿ ಇದು ಹಾಗೇ ಅದು ಹಾಗೆ ಎಂದು ಚಿಂತೆ ಬೆನ್ನಿಗೆ ಕಟ್ಟಿಕೊಂಡು ಮೂರು ಲೋಕವನ್ನು ಸುತ್ತುತ್ತಾ ಇರಬಾರದು. ಬಂದ ಬದುಕನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು. ಇನ್ನೊಬ್ಬರು ಹೇಳುವರು ಜೀವನ ಎಂದರೆ ಏನು ಎಂದು!?
ಲೈಫ್ ಇಸ್ ನಥಿಂಗ್ ಬಟ್ ಅನ್ ಒಪ್ಪಾರ್ಚುನಿಟಿ ಅಂದರೆ ಜೀವನ ಎಂದರೆ ಒಂದು ಸುವರ್ಣ ಅವಕಾಶ ಅದನ್ನು ಸಮರ್ಧಕವಾಗಿ ಬಳಸಿಕೊಳ್ಳಿ ಎಂದು ಹೇಳಿದರು. ಹರಿದ ಚಪ್ಪಲಿಗೆ ಬೆಲೆ ಇದೆ ಸತ್ತ ದೇಹಕ್ಕೆ ಬೆಲೆ ಇಲ್ಲ ಅದಕ್ಕೆ ಇರುವಾಗಲೇ ಈ ದೇಹದಿಂದ ಒಳ್ಳೆಯ ಕಾರ್ಯವನ್ನು ಮಾಡುತ್ತ ಸಮರ್ಪಕವಾಗಿ ಬದುಕು ನಡೆಸಬೇಕು ಎಂದು ಹೇಳಿದರು
ಅನೇಕ ಶರಣ ಶರಣೆಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವೇದಿಕೆಯ ಮೇಲಿದ್ದ ಗಣ್ಯರನ್ನು ಸನ್ಮಾನಿಸಲಾಯಿತು. ರಾಜೇಶ್ವರಿ ಖಂಡ್ರೆ ವಂದನಾರ್ಪನೆ ಮಾಡಿದರು. ಇದೇ ಸಂದರ್ಭದಲ್ಲಿ ವೇದಿಕೆಯ ಮೇಲಿದ್ದ ಗಣ್ಯರನ್ನು ಸನ್ಮಾನಿಸಲಾಯಿತು. ದೀಪಕ ಠಮಕೇ ನಿರೂಪಿಸಿದರು. ಮಂಗಲ ಹಾಗೂ ಪ್ರಸಾದದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು ಎಂದು ಶ್ರೀ ಶಾಂತಯ್ಯ ಸ್ವಾಮಿ ಹೇಳಿದರು.