ಬದುಕುವುದನ್ನು ಕಲಿತರೇ ದೇವನ ಅಸ್ತಿತ್ವವನ್ನು ಕಾಣಬಹುದು

ಭಾಲ್ಕಿ:ನ.30:ಬೆಳಕು ಕತ್ತಲೆ ಇವೆರಡೂ ಈ ಜಗತ್ತಿನಲ್ಲಿ ಇವೆ. ಕತ್ತಲೆಯ ನಂತರ ಬೆಳಕು ಬೆಳಕಿನ ನಂತರ ಕತ್ತಲೆ. ಇದು ನಿರಂತರ ಸಾಗುತ್ತಿರುತ್ತದೆ. ಹಗಲು ಸೂರ್ಯ ಎಲ್ಲೆಡೆ ಪ್ರಕಾಶಮಾನವಾಗಿ ಬೆಳಗುವನು, ಶಾಖ ನೀಡುವನು ಮಳೆ ಸುರಿಯುವಂತೆ ಮಾಡುವನು, ಎತ್ತರ ಎತ್ತರದ ವೃಕ್ಷಗಳು, ವೃಕ್ಷದ ತುಂಬೆಲ್ಲಾ ಹಸಿರು-ಉಸಿರು. ಒಂದಲ್ಲ ಎರಡಲ್ಲ ಸಾವಿರಾರು ಪ್ರಕಾರದ ವೃಕ್ಷಗಳು ಅವುಗಳಲ್ಲಿ ಸೌಂದರ್ಯದ ಜೀವ. ಎರಡರ ಒಳಗೆ ಜೀವ ಮಿಡಿಯುತ್ತಿರುತ್ತದೆ. ಹೊರಗೆ ಸೌಂದರ್ಯ ಹೊರಹೊಮ್ಮುತ್ತಿದೆ. ಅವುಗಳ ಜೀವನದಲ್ಲಿ ನಮಗೆ ಕಾಣುವುದು ಬರಿ ಸೌಂದರ್ಯ ಮಾತ್ರ ಆದರೆ ಅದರ ಹಿಂದಿರುವ ಶಕ್ತಿ ಜೀವಶಕ್ತಿ ಅದು ನಮಗೆ ಕಾಣುವುದಿಲ್ಲ.
ಇವೆರಡರ ಮಿಶ್ರಣದಲ್ಲಿ ಈ ಜಗತ್ತು ಸುಂದರವಾಗಿ ಕಾಣುತ್ತಿದೆ. ಇದಕ್ಕೆಲ್ಲ ಕಾರಣ ಈ ಸೂರ್ಯ. ಸರಿಯಾದ ಸಮಯಕ್ಕೆ ಪ್ರತಿಕ್ಷಣವೂ ಪ್ರತಿದಿನವೂ ಉದಯಿಸುವನು. ಎಲ್ಲೆಡೆಯೂ ತನ್ನ ಬೆಳಕನ್ನು ಹರವುವನು. ಅದಕ್ಕೆ ಭಾರತೀಯ ಜ್ಞಾನಿಗಳು ಬೆಳಕನ್ನು ದೇವರು ಎಂದರು. ದೇವಾ ಎಂದರೆ ಸಂಸ್ಕøತದಲ್ಲಿ ಬೆಳಕು. ಬೆಳಕು ಇರುವುದರಿಂದ ಜೀವನ, ಮನಸ್ಸಿನಲ್ಲಿ ಸುಖದ ತೆರೆಯಾಡುವುದು. ಬುದ್ಧಿ ಒಳಗೆ ತೇಜಸ್ಸು ಆಡುವುದು ಇಷ್ಟೆಲ್ಲಾ ಆಗಲಿಕ್ಕೆ ಕಾರಣ ಬೆಳಕು.
ಸೂರ್ಯ ಇರುವುದರಿಂದ ಸುಖ ಸೂರ್ಯ ಇರುವುದಿಂದ ಮಳೆ-ಬೆಳೆ. ಆದ್ದರಿಂದ ಭಾರತೀಯರು ಸೂರ್ಯನಿಗೆ ಅಷ್ಟು ಬೆಲೆ ನೀಡಿದರು ದೇವರ ಸ್ಥಾನ ನೀಡಿದರು. ವೃಕ್ಷಗಳು ಗಿಡಮರಗಳು ಬಳ್ಳಿಗಳು ಹೂವು ಹಣ್ಣು ಎಲ್ಲವೂ ಬೆಳೆಯುವುದು ಸೂರ್ಯನ ಶಾಖದಿಂದಲೆ. ಮಳೆ-ಬೆಳೆ ಎಲ್ಲವೂ ಸೂರ್ಯನಿಂದಲೆ.
ನಾವೂ ಉತ್ತಮ ಉನ್ನತ ಮಟ್ಟಕ್ಕೆ ಸೇರಲು ಸಹ ಸೂರ್ಯನೇ ಕಾರಣ. ಬೆಳಕನ್ನು ಕಂಡರೆ ದೇವರನ್ನು ಕಂಡಂತೆ. ನಾವು ದೇವರನ್ನು ಕಾಣಲು ಎಲ್ಲಿಯೂ ಹೋಗಬೇಕಾಗಿಲ್ಲ ಬೆಳಕಿನಲ್ಲಿ ಬೆಳಕಾಗಿ ಬರುವನು ದೇವರು.
ಸೂರ್ಯ ಎಲ್ಲರಿಗೂ ಒಂದೇ, ಎಲ್ಲರಿಗೂ ಸಮನಾಗಿ ಬೆಳಕು ನೀಡುವನು. ಹಿರಿತನ, ಕಿರಿತನ, ವರ್ಣ, ಕುಲ, ಜಾತಿ ನೋಡಿ ಸೂರ್ಯ ಬೆಳಕು ನೀಡುವುದಿಲ್ಲ ಎಲ್ಲರಿಗೂ ಸಮನಾಗಿ ಬೆಳಕು ನೀಡುವನು.
ಎತ್ತೆತ್ತ ನೋಡಿದಡತ್ತತ್ತ ನೀನೇ ದೇವಾ
ಸಕಲವಿಸ್ತಾರದ ರೂಹು ನೀನೇ ದೇವಾ
ವಿಶ್ವತಶ್ಚಕ್ಷು' ನೀನೆ ದೇವಾ ವಿಶ್ವತೋಮುಖ’ ನೀನೆ ದೇವಾ
ವಿಶ್ವತೋಬಾಹು' ನೀನೇ ದೇವಾ ವಿಶ್ವತಃಪಾದ’ ನೀನೆ ದೇವಾ
ಕೂಡಲಸಂಗಮದೇವಾ.
ಬಸವಣ್ಣರು ಹೇಗೆ ತಾವು ಕಂಡಲ್ಲೆಲ್ಲ ದೇವರನ್ನು ಕಂಡರು

ಎತ್ತೆತ್ತ ನೋಡಿದಡತ್ತತ್ತ ಬಸವನೆಂಬ ಬಳ್ಳಿ,
ಎತ್ತಿ ನೋಡಿದಡೆ ಲಿಂಗ ವೆಂಬ ಗೊಂಚಲು,
ಒತ್ತಿ ಹಿಂಡಿದಡೆ ಭಕ್ತಿಯೆಂಬ ರಸವಯ್ಯಾ,
ಆಯತವು ಬಸವಣ್ಣನಿಂದ, ಸ್ವಾಯತವು ಬಸವಣ್ಣನಿಂದ ಸನ್ನಿಹಿತವು ಬಸವಣ್ಣನಿಂದ,
ಗುರು ಬಸವಣ್ಣನಿಂದ, ಲಿಂಗ ಬಸವಣ್ಣನಿಂದ, ಜಂಗಮ ಬಸವಣ್ಣನಿಂದ,
ಪಾದೋದಕ ಬಸವಣ್ಣನಿಂದ, ಪ್ರಸಾದ ಬಸವಣ್ಣನಿಂದ
ಅತ್ತ ಬಲ್ಲಡೆ ನೀವು ಕೇಳಿರೇ, ಇತ್ತ ಬಲ್ಲಡೆ ನೀವು ಕೇಳಿರೇ,
ಬಸವ ಬಸವ ಬಸವಾ ಎಂದು ಮಜ್ಜನಕ್ಕೆರೆಯದವನ ಭಕ್ತಿ ಶೂನ್ಯ ಕಾಣಾ ಕಲಿದೇವರದೇವಾ.

 • ಮಡಿವಾಳ ಮಾಚಿದೇವ.
  ಹೀಗೆ ಬಸವಣ್ಣನವರಿಗೆ ಕೂಡಲಸಂಗಮದೇವ, ಅಕ್ಕಮಹಾದೇವಿಗೆ ಚನ್ನಮಲ್ಲಿಕಾರ್ಜುನ, ಮಡಿವಾಳ ಮಾಚಿದೇವರಿಗೆ ಕರಿಲಿಂಗರದೇವಾ ಎಲ್ಲರೂ ತಾವು ಕಂಡಲ್ಲೆಲ್ಲಾ ದೇವರು.
  ಸರ್ವಭರಿತನಾಗಿ ದೇವ.
  ಮನುಷ್ಯನೇ ಕಣ್ಣು ತೆರೆದು ನೋಡು ಮನಸು ಬಿಚ್ಚಿ ನೋಡು ನಿನಗೆ ಕಾಣುವುದಿಲ್ಲ ದೇವರೇ. ಅಕ್ಕಮಹಾದೇವಿ ದೇವರನ್ನು ಎಲ್ಲಿ ಕಂಡರು ಹೇಳಿ? ಎಲ್ಲಾ ರೂಪದಲ್ಲಿಯೇ ದೇವರನ್ನು ಕಂಡರು ಚೆನ್ನಮಲ್ಲಿಕಾರ್ಜುನ ನನ್ನು ಕಂಡರು. ಸುವಾಸನೆಯಾಗಿ ಬರುತ್ತಾನೆ ಸೌಂದರ್ಯವಾಗಿ ಬರುತ್ತಾನೆ ಅಂತರಂಗದಲ್ಲಿ ಸಂತೋಷವಾಗಿ ತುಂಬುತ್ತಾನೆ ಇದುವೇ ದೇವರು.
  ಎಲ್ಲೆಲ್ಲಿ ಏನೇನು ಕಂಡಿತು ಅಲ್ಲಲ್ಲಿ ದೇವರು ಇವರು ದೇವನನ್ನು ಕಂಡಲ್ಲಿ ನಾವೆಲ್ಲ ಬದುಕುತ್ತಿದ್ದೇವೆ. ನೋಡುವ ನೋಟ ಬದಲಾಗಲಿ ಇಲ್ಲಿರುವುದು ಅದೇ ಸೂರ್ಯ ಅದೇ ಚಂದ್ರ ಅದೇ ನಕ್ಷತ್ರಗಳು.
  ಒಬ್ಬ ಹುಡುಗ ದೇವನನ್ನು ಹುಡುಕಲು ಹೊರಟ.
  ಯಾರೋ ಹೇಳಿದರು ಬೆಟ್ಟ ಗುಡ್ಡದಲ್ಲಿ ಇರುವನು ಎಂದು, ಬೆಟ್ಟಗುಡ್ಡಗಳಲ್ಲೆಲ್ಲ ಓಡಾಡಿದ ಅಲ್ಲಿಯೂ ಸಿಗಲಿಲ್ಲ. ಸಮುದ್ರದ ದಂಡೆಯಲ್ಲಿ ಹೋದ ಅಲ್ಲಿಯೂ ಸಿಗಲಿಲ್ಲ, ದಟ್ಟವಾದ ಪ್ರಶಾಂತವಾದ ಕಾಡಿನ ಮಧ್ಯದಲ್ಲಿ ಹೋದ ಅಲ್ಲಿಯೂ ದೇವರು ಸಿಗಲಿಲ್ಲ. ನಿರಾಶೆಯಿಂದ ಮರಳಿ ಹುಡುಗ ವಾಪಸ್ಸು ಬರುತ್ತಿರಲು ಅಲ್ಲೊಬ್ಬ ಸಂನ್ಯಾಸಿ ಯಮುನಾ ನದಿಯ ತೀರದಲ್ಲಿ ಹಾಡುತ್ತಾ ನಲಿಯುತ್ತಾ ಕುಣಿದಾಡುತ್ತಿದ್ದ ಅವರೇ ಹರಿದಾಸರು. ಹುಡುಗ ಹರಿದಾಸರನ್ನು ಕಂಡು ಕಾಲಿಗೆ ಬಿದ್ದು ವಂದಿಸಿದ. ಹರಿದಾಸರಿಗೆ ಕೇಳಿದ ಗುರುಗಳೇ ನಾನು ದೇವರನ್ನು ಕಾಣಲು ಬೆಟ್ಟಗುಡ್ಡಗಳು ತಿರುಗಾಡಿದೆ ಸಮುದ್ರತೀರದಲ್ಲಿ ಓಡಾಡಿದೆ, ಕಾಡು ಮೇಡುಗಳಲ್ಲಿ ಸುತ್ತಿದೆ ಎಲ್ಲಿಯೂ ನನಗೆ ದೇವರು ಸಿಗಲಿಲ್ಲ. ನೀವು ದೇವರನ್ನು ಕಂಡವರು ನೀವೇ ಹೇಳಿ ದೇವರು ಎಲ್ಲಿರುವನು ಎಂದು ಕೇಳಿದನು. ಆಗ ಹರಿದಾಸರು, ನನ್ನ ಹಾಡುಗಳಲ್ಲಿ ದೇವರು ನನ್ನ ಹಾಡುಗಳನ್ನು ಕೇಳು, ದೇವ ನಾದವಾಗಿ ಬರುತ್ತಾನೆ ಹಾಡುಗಳ ರೂಪದಲ್ಲಿ, ರಾಗ-ತಾಳದ ರೂಪದಲ್ಲಿ ದೇವನಿರುವನು.
  ದೇವ ಸಂತೋಷವಾಗಿರುತ್ತಾನೆ ದೇವನನ್ನು ಹುಡುಕಾಡುವುದಲ್ಲ ದೇವರನ್ನು ಕಾಣುವುದು, ಗುರುತಿಸುವುದು. ಅಲ್ಲೆಲ್ಲೋ ಇದ್ದಾನೆಂದು ಹುಡುಕುವುದಿಲ್ಲ ಇಲ್ಲಿಯೇ ಇರುವನೆಂದು ಕಾಣುವುದು ಗುರುತಿಸುವುದು.
  ಹರಿದಾಸರು ಹಾಡುತ್ತಿದ್ದರೆ ಕೃಷ್ಣ ಕುಣಿಯುತ್ತಿದ್ದ ಎಂದು ಹೇಳುತ್ತಾರೆ ಹಾಗೆ ದೇವರನ್ನು ಕಾಣುವುದು. ಆಗ ಯುವಕ ನಾನು ಕಂಡೆ ಗುರುಗಳೇ ದೇವನನ್ನು ಭಗವಂತನನ್ನು ನೋಡಿದೆ ಎಂದು ಹೇಳಿದ.
  ಆಗ ಹರಿದಾಸರು ಕೇಳಿದರು ಎಲ್ಲಿ ಕಂಡೆ?
  ಆಗ ಯುವಕ ಹೇಳಿದ ನಿಮ್ಮಲ್ಲೇ ಕಂಡೆ ನೀವೇ ದಾಸರು ನೀವೇ ದೇವರು. ನೀವು ದೇವರು ಎಲ್ಲಿರುವನು ಎಂದು ಹೇಳಲಿಲ್ಲ ತೋರಿಸಿಕೊಟ್ಟಿರುವಿರಿ ಎಂದನು. ಬುಕ ಮುಂದೆ ಹೋಗಿ ಶ್ರೇಷ್ಠ ಜ್ಞಾನಿಯಾಗುತ್ತಾನೆ.
  ಹಾಗೆ ಕಾಣುವ ಗುರುತಿಸುವ ರೀತಿಯಲ್ಲಿ ದೇವರನ್ನು ಕಾಣುವುದು. ದಿವಾ ಏನೆಂದು ತಿಳಿದುಕೊಂಡರೆ ದೇವನಿರುವನು, ಆತ ಮರೆಯಾಗಿರುವುದಿಲ್ಲ ವ್ಯಕ್ತವಾಗಿರುವುದೆಲ್ಲ ದೇವರು ಅವ್ಯಕ್ತವಾಗುವುದೆಲ್ಲ ದೇವರು.
  ಕಾಣುವುದೆಲ್ಲ ದೇವರು ಕಾಣದ್ದೆಲ್ಲ ದೇವರು. ಮನುಷ್ಯನೇ ನಿನ್ನ ಕಣ್ಣು ಮನ ಎಲ್ಲವೂ ಸ್ವಚ್ಛವಾಗಿರಲಿ ಸುಖವಾಗಿರಲಿ.ಹಗಲು ರಾತ್ರಿ ಏನು ವಿಸ್ತಾರವಾದ ಗಗನ ಎಂತಹ ನಕ್ಷತ್ರಗಳು ಒಂದಲ್ಲ ಎರಡಲ್ಲ ಕೋಟಿಕೋಟಿ ನಕ್ಷತ್ರಗಳು ಎಂತಹ ಸೌಂದರ್ಯ ಕತ್ತಲೆಯೊಳಗೆ ಸೌಂದರ್ಯ. ಮನುಷ್ಯನೇ ಕತ್ತಲೆಯೊಳಗೂ ಸೌಂದರ್ಯ, ಕಣ್ಣು ಮುಚ್ಚು ಶಾಂತಿಯನ್ನು ಕಾಣು ಶಾಂತಿಯ ರೂಪದಲ್ಲಿಯೇ ದೇವರು. ಕತ್ತಲೆ ಎಷ್ಟು ಅದ್ಭುತ ಕತ್ತಲೆಯಲ್ಲಿಯೇ ಚಂದ್ರಾದಿ ನಕ್ಷತ್ರಗಳು ಕಾಣುವುದು. ಬೆಳಕು ಕಾಣುವುದು ಹಗಲಿನಲ್ಲಿ ರವಿ ಬೆಳಕು ಕೊಡುವನು. ರಾತ್ರಿಯಲ್ಲಿ ಚಂದ್ರಾದಿ ನಕ್ಷತ್ರಗಳು. ಕತ್ತಲೆ ಇರುವುದರಿಂದಲೇ ನಾವು ಬದುಕಿದ್ದೇವೆ, ಈ ಜಗತ್ತು ನಾಶವಾಗುವುದರಿಂದ ತಡೆದಿದ್ದೇ ಕತ್ತಲು. ಅದಕ್ಕೆ ದೇವರು ಹೇಳಿದ ನಾನು ಅರ್ಧ ಕತ್ತಲಾಗಿ ಬರುತ್ತೇನೆ ಅರ್ಧ ಬೆಳಕಾಗಿ ಬರುತ್ತೇನೆ. ಕತ್ತಲೆಯಲ್ಲು ನನ್ನ ಕಾಣು ಬೆಳಕಲ್ಲು ನನ್ನ ಕಾಣು.
  ವ್ಯಕ್ತಿ ಹಗಲು ದುಡಿದು ದುಡಿದು ಮನೆಗೆ ಬಂದು ರಾತ್ರಿಯಾದೊಡನೆ ಕಣ್ಣು ಮುಚ್ಚಿ ಮಲಗಿದ ಎಂದರೆ ಏನು ಆನಂದ ಏನು ಸಂತೋಷ.
  ಒಬ್ಬ ಪಾಶ್ಚಿಮಾತ್ಯ ಸಂತ ಹೇಳಿದ ಮನುಷ್ಯನೇ ಹಗಲೆಲ್ಲಾ ದುಡಿ ಪರಿಶ್ರಮ ಮಾಡು ಸಾಯಂಕಾಲ ಬಂದು ನೆರಳಿನಲ್ಲಿ ವಿಶ್ರಾಂತಿ ಮಾಡು ಮನಸ್ಸಿಗೆ ಏನನ್ನು ತರಬೇಡ. ಏನನ್ನು ಹುಡುಕಬೇಡ ಅಲ್ಲಿಯೇ ದೇವರು ಅದೇ ಧರ್ಮ ಎಂದನು. ಅದರಲ್ಲಿಯೇ ಸೌಂದರ್ಯ ಅದರಲ್ಲಿಯೇ ಶಾಂತಿ ಅಲ್ಲಿಯೇ ದೇವರು.

ಸಂಗ್ರಹ : ಸಿದ್ದಲಿಂಗ ಶಿವಯೋಗಿ ಸ್ವಾಮಿ ಉಚ್ಚ
ತಾ. ಭಾಲ್ಕಿ ಜಿ. ಬೀದರ