ಬದುಕಿನ ಮಾರ್ಗದರ್ಶಿ ಭಗವದ್ಗೀತೆ :ಪಂ.ಗೋಪಾಲಾಚಾರ್ಯ

ಕಲಬುರಗಿ ನ 21 : ಭಗವದ್ಗೀತೆಯು ಬದುಕಿಗೆ ಮಾರ್ಗದರ್ಶಿಯಾಗಿದೆ ಎಂದು ಪಂಡಿತ. ಗೋಪಾಲಾಚಾರ್ಯ ಅಕಮಂಚಿ ಅವರು ಹೇಳಿದರು.
ಜಯತೀರ್ಥ ಜಗರದ ಲಕ್ಷ್ಮೀ ನಾರಾಯಣ ಮಂದಿರದಲ್ಲಿ ಗೀತಾ ಜಯಂತಿ ನಿಮಿತ್ತ ಭಗವದ್ಗೀತೆ ಕುರಿತು ಭಾನುವಾರ ಪ್ರವಚನ ನೀಡಿದ ಅವರು, ಗೀತೆಯಲ್ಲಿ ಮಾನವೀಯ ಮೌಲ್ಯ ಅಡಗಿದೆ ಎಂದರು.
ಕುರುಕ್ಷೇತ್ರದ ಯುದ್ಧ ಸಂದರ್ಭದಲ್ಲಿ ಪಾಂಡವರ ಬಲಿಷ್ಠ ಸೈನ್ಯವನ್ನು ನೋಡಿದ ದುರ್ಯೋಧನ ಭಯದಿಂದ ದ್ರೋಣಾಚಾರ್ಯರ ಬಳಿ ತೆರಳಿ ನಮ್ಮ ಸೇನಾ ನಾಯಕರಾದ ಭೀಷ್ಮಾಚಾರ್ಯರನ್ನು ರಕ್ಷಿಸುವ ವಿಧಾನ ತಿಳಿಸು ಎಂದು ಕೇಳುತ್ತಾನೆ. ಮೊದಲು ಕ್ರಿಯಾಪದ ಬಳಕೆ ಮಾಡುವುದು ದುಃಖದ ಮತ್ತು ಭಯದ ಸಂದರ್ಭದಲ್ಲಿ, ದುರ್ಯೋಧನ ಇಲ್ಲಿ ಮೊದಲು ಕ್ರಿಯಾಪದವನ್ನು ಬಳಕೆ ಮಾಡಿದ್ದಾನೆ. ಅಂದರೆ ಆತನಲ್ಲಿ ಭಯ ತುಂಬಿದೆ ಎಂದರ್ಥ ಎಂದರು.ದ್ರುಪದ ಪುತ್ರ ದೃಷ್ಟದ್ಯುಮ್ನ ನಾಯಕತ್ವದಲ್ಲಿ ಸಿದ್ಧವಾಗಿರುವ ಪಾಂಡವರ ಸೈನ್ಯವನ್ನು ನೋಡು ಎಂದು ಹೇಳುತ್ತಾನೆ. ನೇರವಾಗಿ ದೃಷ್ಟದ್ಯುಮ್ನ ಎನ್ನಬಹುದಿತ್ತು ಆದರೆ ದ್ರುಪದ ಪುತ್ರ ಎನ್ನಲು ಕಾರಣವಿದೆ. ದ್ರೋಣಾಚಾರ್ಯರು ದ್ರುಪದ ರಾಜನಿಗೆ ಅವಮಾನ ಮಾಡಿರುತ್ತಾರೆ. ಆ ಸೇಡು ತೀರಿಸಿಕೊಳ್ಳಲು ದ್ರೋಣಾಚಾರ್ಯರನ್ನು ಕೊಲ್ಲುವ ಪುತ್ರನನ್ನು ಬೇಕು ಎಂದು ತಪಸ್ಸು ಮಾಡಿ ದೃಷ್ಟದ್ಯುಮ್ನನನ್ನು ಮಗನನ್ನಾಗಿ ಪಡೆದಿರುತ್ತಾನೆ. ನಿನ್ನನ್ನು ಕೊಲ್ಲುವುದಕ್ಕಾಗಿಯೇ ಜನಿಸಿದ ದೃಷ್ಟದ್ಯುಮ್ನನ ನಾಯಕತ್ವದಲ್ಲಿರುವ ಸೈನ್ಯವನ್ನು ನೋಡು ಎನ್ನುತ್ತಾನೆ. ಅಧರ್ಮದಿಂದ ನಡೆದರೆ ಧೈರ್ಯ ಕಳೆದು ಕೊಳ್ಳಬೇಕಾಗುತ್ತದೆ ಎಂಬುದನ್ನು ದುರ್ಯೋಧನ ತೋರಿಸಿಕೊಟ್ಟಿದ್ದಾನೆ. ಪಾಂಡವರು ಧರ್ಮಯುದ್ಧಕ್ಕೆ ಮುಂದಾಗಿದ್ದರಿಂದ ಅವರಲ್ಲಿ ಯಾವ ಭಯವಿರಲಿಲ್ಲ ಎಂದು ಹೇಳಿದರು.
ಪ್ರಮುಖರಾದ ಬಾಲಕೃಷ್ಣ ಲಾತೂರಕರ್, ರವಿ ಲಾತೂರಕರ್, ಅನೀಲ ಕುಲಕರ್ಣಿ, ಅಪ್ಪಾರಾವ ಟಕ್ಕಳಕಿ,ಸುರೇಶ್ ಕುಲಕರ್ಣಿ, ಧನೇಶ,ವಿನುತ ಜೋಷಿ,ಜಯತೀರ್ಥ ಶರ್ಮಾ,ವೆಂಕಟರಾವ್,ಲಕ್ಷ್ಮಣ ರಾವ್,ಗೋವಿಂದ ರಾವ್ ಹಾಗೂ ಭಜನಾ ಮಂಡಳಿಯ ಅಧ್ಯಕ್ಷೆ ಜ್ಯೋತಿ ಲಾತೂರಕರ್,ವಿದ್ಯಾ ಆದ್ಯ,ಜ್ಯೋತಿ ಚೌದರಿ ಮತ್ತು ಬಡಾವಣೆಯ ಭಕ್ತರು ಉಪಸ್ಥಿತರಿದ್ದರು.