ಬದುಕಿನ ಪರಾಕಾಷ್ಠತೆಗೆ ಕಾಯಕ ನಿಷ್ಠೆ ಅಗತ್ಯ

ಸೊರಬ. ಮಾ.8: ಮಾನವನು ತನ್ನ ಬದುಕಿನಲ್ಲಿ  ಆಧ್ಯಾತ್ಮದ ಪರಕಾಷ್ಟತೆಯನ್ನು ಹೊಂದಬೇಕಾದರೆ ಕಾಯಕ ನಿಷ್ಠೆ ಅಗತ್ಯವೆಂದು ಜಡೆ ಸಂಸ್ಥಾನ ಮಠದ   ಹಾಗೂ ಸೊರಬ ಮುರುಗ ಮಠದ ಡಾ. ಮಹಾಂತ ಸ್ವಾಮೀಜಿ ಹೇಳಿದರು.ಪಟ್ಟಣದ ಮುರುಗಮಠದಲ್ಲಿ ಮಂಗಳವಾರ  ಹೋಳಿ ಹುಣ್ಣಿಮೆ ಪ್ರಯುಕ್ತ 207 ನೇ ಮಾಸಿಕ ಶಿವಾನುಭವ ಕಾರ್ಯಕ್ರಮವನ್ನು ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿಯನ್ನು ಹಮ್ಮಿಕೊಳ್ಳಲಾಗಿತ್ತು. ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ಕಾಯಕವೆಂಬುದು ಮಾನವನ ಅವಿಭಾಜ್ಯ ಅಂಗವಾಗಿದ್ದು ಬದುಕಿಗಾಗಿ ಕಾಯಕವನ್ನು ಮಾಡಲೇಬೇಕು ಆ  ಮೂಲಕ ಕಾಯಕತ್ವದಲ್ಲಿ ದೈವತ್ವವನ್ನು ಕಾಣಬೇಕು. ಕಾಯಕ ನಿಷ್ಠೆ ಹೊಂದಿದಾಗ ಮಾತ್ರ ಬದುಕಿನ ಪರಾಕಾಷ್ಠತೆಯನ್ನು ತಲುಪಲು ಸಾಧ್ಯ ಎಂದ ಅವರು ಹೋಳಿ ಹುಣ್ಣಿಮೆಯು ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಕರ್ತೃತ್ವ ಮಹತ್ವವನ್ನು  ಸಾರುವ ಧಾರ್ಮಿಕ ಸಂಪ್ರದಾಯದ ಹಬ್ಬವಾಗಿದ್ದು ನಿಸರ್ಗದಲ್ಲಿ ಬದಲಾಗುವ ರೀತಿಯಲ್ಲಿ ಮಾನವನ ಬದುಕಿನಲ್ಲಿ ವಿನೂತನವಾದ ಬದಲಾವಣೆಗಳು ಉಂಟಾಗುವ ಮೂಲಕ ಪೂರಕವಾದ ಚಿಂತನಾಶೀಲತೆಯನ್ನ ಮೈಗೂಡಿಸಿಕೊಳ್ಳಲು ಸಾಧ್ಯವಾಗುತ್ತದೆ  ಬದುಕಿನ ಒತ್ತಡದ  ನಡುವೆಯೂ ಕಾಯಕವನ್ನು ಮರೆಯದೆ ಕಾಯಕದ ಮೂಲಕ ದೈವತ್ವದ ಪ್ರೇರಣೆಯನ್ನು ಹೊಂದಬಹುದು ನಮ್ಮೊಳಗಿನ ಅಂತರ್ ಭಾವದ ಚಿಂತನೆಯನ್ನ ಹೊರಹಾಕಲು ಇಂತಹ ಧಾರ್ಮಿಕ ಆಚರಣೆಗಳು ಬುನಾದಿಯನ್ನು ಹಾಕುತ್ತವೆ ಎಂದರು. ಕಾರ್ಯಕ್ರಮದಲ್ಲಿ ವೀರಶೈವ ಸಂಘಟನೆಯ ಮಧ್ಯ ಕರ್ನಾಟಕ ಪ್ರದೇಶದ ಅಧ್ಯಕ್ಷ ಸಿ.ಪಿ. ಈರೇಶ ಗೌಡ, ಡಿ ಶಿವಯೋಗಿ ದೂಪದ ಮಠ, ಯುವರಾಜ ಸ್ವಾಮಿ, ಮಲ್ಲಿಕಾರ್ಜುನ ಗೌಡ ತ್ಯಾವಗೋಡು, ಮಲ್ಲಿಕಾರ್ಜುನ ಸ್ವಾಮಿ, ಅಕ್ಕನ ಬಳಗದ ಜಯಮಾಲಾ, ಶಾಂತಮ್ಮ, ರೂಪ, ಸುಧಾ, ಪುಷ್ಪ, ಲತಾ ಮಹೇಶ್, ಉಮಾದೇವಿ, ಅನಿತಾ, ಹೇಮಾವತಿ ಮೊದಲಾದವರಿದ್ದರು.