ಬದುಕಿನ ನಿಜವಾದ ಸಂಪತ್ತು ಎಂದರೆ ಅಧ್ಯಾತ್ಮ ಸಾಧನೆ : ಹಾರಕೂಡ ಶ್ರೀ

ಬೀದರ್;ಮಾ.8: ಬದುಕಿನ ನಿಜವಾದ ಸಂಪತ್ತು ಎಂದರೆ ಅಧ್ಯಾತ್ಮ ಸಾಧನೆ, ಅದು ಸದ್ಗುರುವಿನಿಂದ ಸತ್ಸಂಗದಿಂದ ಪ್ರಾಪ್ತವಾಗುತ್ತದೆ.
ಆತ್ಮದ ಔನತ್ಯವೇ ಬದುಕಿನ ನಿಜವಾದ ಐಶ್ವರ್ಯ ಎಂದು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಯದಲಾಪುರ ಗ್ರಾಮದ ಅಖಂಡ ಹರಿನಾಮ ಸಪ್ತಾಹ ಮತ್ತು ಶ್ರೀ ಸಂತ ಜ್ಞಾನೇಶ್ವರ ಪಾರಾಯಣ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಪೂಜ್ಯರು ಚಿಂತೆಯಿಂದ ಕೊರಗದೆ ಚಿಂತನ ಶೀಲರಾಗಿ ಬದುಕನ್ನು ಸಂಭ್ರಮಗೊಳಿಸಬೇಕಾದರೆ ಭಕ್ತಿ ಪಾರಾಯಣದಂತಹ ಧರ್ಮ ಕಾರ್ಯಗಳು ಆಧ್ಯಾತ್ಮಿಕ ಪುಷ್ಟಿ ನೀಡುತ್ತವೆ.
ಅಹಂಕಾರ ನಾಶವಾಗಿ ಸುಜ್ಞಾನದ ಬೆಳಕು ಮೂಡಿ ಅಂಗ ಲಿಂಗವಾಗಿ ರೂಪಗೊಳ್ಳುತ್ತದೆ. ಸಂತ ಮಹಾಂತರ ಸಂಗದಲ್ಲಿ ಕಳೆದ ಒಂದು ಕ್ಷಣ ನೂರು ವರ್ಷಗಳ ಜಪತಪಗಳಿಗಿಂತಲೂ ಶ್ರೇಷ್ಠವಾದದು.
ಸಂತರ ದಿವ್ಯ ವಾಣಿಯಲ್ಲಿನ ಅದ್ಭುತ ಶಕ್ತಿಯಿಂದ ಜಗದೊಡೆಯ ಭಗವಂತನ ಪಡೆಯಲು ಸಾಧ್ಯವಾಗುತ್ತದೆ. ಜ್ಞಾನೇಶ್ವರ ಭಕ್ತಿ ಪಾರಾಯಣ ಶ್ರವಣದಿಂದ ಸರ್ವರಿಗೂ ಸನ್ಮಂಗಳವಾಗಲಿ ಎಂದು ಹಾರೈಸಿದರು.
ನಾಗೇಂದ್ರ ರೆಡ್ಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು.
ವೆಂಕಟರೆಡ್ಡಿ ರಮೇಶ ಮೇತ್ರಿ, ನಾಗರೆಡ್ಡಿ, ಶಿವಾಜಿ ವಾಡೆಕರ, ಮಲ್ಲಣ್ಣ ಒಳಕಿಂಡಿ ಉಪಸ್ಥಿತರಿದ್ದರು.