ಬದುಕಿನ ಉನ್ನತಿಗೆ ಆಧ್ಯಾತ್ಮದ ಅರಿವು ಮುಖ್ಯ :  ರಂಭಾಪುರಿ ಶ್ರೀ

ಸಂಜೆವಾಣಿ ವಾರ್ತೆ

ಹರಿಹರ.ಜೂ.೩೦; ಬೆಟ್ಟದಷ್ಟು ಸಂಪತ್ತಿದ್ದರೂ ಮಾನಸಿಕ ಶಾಂತಿ ನೆಮ್ಮದಿಗೆ ಧರ್ಮವೇ ಮೂಲ. ಬದುಕಿನ ಉತ್ಕರ್ಷತೆಗೆ ಸ್ವಲ್ಪಾದರೂ ಆಧ್ಯಾತ್ಮದ ಅರಿವು ಆಚರಣೆ ಮುಖ್ಯವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು ನಗರದ ಜಗದ್ಗುರು ರೇಣುಕಾಚಾರ್ಯ ಮಂದಿರ ಹಳೇಪೇಟೆ ಶ್ರೀ ಬಸವೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಜರುಗಿದ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಜೀವನದಲ್ಲಿ ಕಷ್ಟಗಳು ಬರುವುದು ಸುಖಾಗಮನದ ಹೆಗ್ಗುರುತು. ಕಷ್ಟ ಕಾಲದಲ್ಲೂ ಸಹ ಧರ್ಮಾಚರಣೆಯನ್ನು ಆಚರಿಸಿಕೊಂಡು ಬರುವವನೇ ನಿಜವಾದ ಧರ್ಮಾತ್ಮ. ಭೌತಿಕ ಬದುಕಿನಲ್ಲಿ ಎಷ್ಟೇ ಸಂಪತ್ತು ಇದ್ದರೂ ತೃಪ್ತಿ ಇರುವುದಿಲ್ಲ. ಆಶೆಗಳು ಒಂದಾದ ನಂತರ ಇನ್ನೊಂದು ಬರುತ್ತಲೇ ಇರುತ್ತವೆ. ಸಂತೃಪ್ತಿ ಸಮಾಧಾನದಿಂದ ಬದುಕುವುದೇ ಮಾನವನ ಧ್ಯೇಯವಾಗಬೇಕು. ಭಗವಂತ ಕೊಟ್ಟ ಈ ಬದುಕು ಸಾರ್ಥಕವಾಗಬೇಕಾದರೆ ಧರ್ಮಾಚರಣೆ ಅವಶ್ಯಕವಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಸತ್ಯ ಶುದ್ಧ ಬದುಕಿಗೆ ಧರ್ಮದ ದಶವಿಧ ಸೂತ್ರಗಳನ್ನು ಬೋಧಿಸಿದ್ದಾರೆ. ಇಷ್ಟಲಿಂಗ ಪೂಜಿಸುವುದರಿಂದ ಸಕಲ ದೇವಾನುದೇವತೆಗಳನ್ನು ಪೂಜೆ ಮಾಡಿದ ಫಲ ಪ್ರಾಪ್ತವಾಗುತ್ತದೆ ಎಂದರು. ಶಾಸಕ ಬಿ.ಪಿ.ಹರೀಶ ಧರ್ಮ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ನವ ನಾಗರೀಕತೆಗೆ ಮನುಷ್ಯ ಸೋತು ಧಾರ್ಮಿಕ ಆಚರಣೆ ಆದರ್ಶಗಳನ್ನು ನಿರ್ಲಕ್ಷö್ಯ ಮಾಡುತ್ತಿದ್ದಾನೆ. ಇದರಿಂದಾಗಿ ಸಮಾಜದಲ್ಲಿ ಸಾಮರಸ್ಯ ಶಾಂತಿ ಇಲ್ಲದಂತಾಗಿದೆ. ಜನ ಸಮುದಾಯದಲ್ಲಿ ಅರಿವು ಮೂಡಿಸಲು ಇಂಥ ಸಮಾರಂಭಗಳ ಅವಶ್ಯಕತೆಯಿದೆ. ಶ್ರೀ ರಂಭಾಪುರಿ ಜಗದ್ಗುರುಗಳು ನಿರಂತರ ಧರ್ಮ ಜಾಗೃತಿ ಮಾಡುತ್ತಿರುವುದು ಭಕ್ತ ಸಂಕುಲದ ಸೌಭಾಗ್ಯ ಎಂದರು. ಜುಂಜಪ್ಪ ಹೆಗ್ಗಪ್ಪನವರ, ಕೊಂಡಜ್ಜಿ ಈಶ್ವರಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.ಹರಪನಹಳ್ಳಿ ತೆಗ್ಗಿನಮಠದ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ವೀರಶೈವ ಧರ್ಮ ಸಕಲರಿಗೂ ಒಳಿತನ್ನೇ ಮಾಡುತ್ತಾ ಬಂದಿದೆ. ಶಿಕ್ಷಣದ ಜೊತೆಗೆ ಸಂಸ್ಕಾರ ಕೊಡುವ ಕೆಲಸ ನಡೆಯಬೇಕು. ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಆಹಾರ ಆರೋಗ್ಯ ಆಧ್ಯಾತ್ಮ ಮುಖ್ಯವೆಂದರು. ಎನ್.ಇ.ಸುರೇಶಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರಿ ಗೌರಿಶ್ರೀ-ಗೌರಿ ಮತ್ತು ಶಾಂಭವಿ ಇವರಿಂದ ಭರತನಾಟ್ಯ ಜರುಗಿತು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ಗಂಗಾಧರ ಹಿರೇಮಠರಿಂದ ಪ್ರಾರ್ಥನೆ ಜರುಗಿತು. ಶ್ರೀಮತಿ ರತ್ನ ಸಾಲಿಮಠ ಮತ್ತು ಎ.ಎಮ್.ರಾಜಶೇಖರ ನಿರೂಪಿಸಿದರು.ಪ್ರಾಥ:ಕಾಲದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ನಡೆಸಿದ ಇಷ್ಟಲಿಂಗ ಮಹಾಪೂಜೆಯಲ್ಲಿ ಭಕ್ತರು ಪಾಲ್ಗೊಂಡು ಆಶೀರ್ವಾದ ಪಡೆದರು.ಶ್ರೀಮತಿ ರತ್ನಮ್ಮ ಮತ್ತು ಕೊಂಡಜ್ಜಿ ಈಶ್ವರಪ್ಪ ಕುಟುಂಬದವರಿAದ ಅನ್ನ ದಾಸೋಹ ಸೇವೆ ಜರುಗಿತು.