
ಕೋಲಾರ ಮಾ,೧೨- ವಿಜ್ಞಾನವು ನಿತ್ಯ ಜೀವನದಲ್ಲಿ ಹೆಚ್ಚು ಬಳಕೆಯಾಗುತ್ತಿದ್ದು, ಬದುಕಿನ ಪ್ರತಿ ಹಂತದಲ್ಲೂ ಜ್ಞಾನ ವಿಜ್ಞಾನ ಇಂದು ಹಾಸುಹೊಕ್ಕಾಗಿದೆ, ಹಾಗಾಗಿ ಮೂಡುನಂಬಿಕೆಗಳನ್ನು ದೂರ ಮಾಡಿ ವಿಜ್ಞಾನ ಯುಗದ ಸ್ಪರ್ಧೆಗೆ ವಿದ್ಯಾರ್ಥಿ ಮತ್ತು ಸಮಾಜವನ್ನು ಎಚ್ಚರಮಾಡುವ ಅಗತ್ಯವಿದೆ ಎಂದು ವಿಧಾನ ಪರಿಷತ್ತಿನ ಶಾಸಕರಾದ ಎಂ.ಎಲ್. ಅನಿಲ್ ಕುಮಾರ್ ಅಭಿಪ್ರಾಯಪಟ್ಟರು.
ನಗರದ ತಮ್ಮ ನಿವಾಸದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕದಿಂದ ಏರ್ಪಡಿಸಿದ್ದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಜೀವ ಸದಸ್ಯರಾಗುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.
ಜ್ಞಾನ ವಿಜ್ಞಾನ ಮತ್ತು ತಂತ್ರಜ್ಞಾನ ಇಂದಿನ ಆಧುನಿಕ ವಿಜ್ಞಾನ ಯುಗದ ಹೊಸ ಕಲಿಕೆಯಾಗಿದ್ದು ಈ ಮೂಲಕ ಇಂದಿನ ವಿದ್ಯಾರ್ಥಿಗಳು ಪೈಪೋಟಿ ಯುಗದಲ್ಲಿ ತಮ್ಮನ್ನು ತೊಡಗಿಸಿಕೊಂಡು ಯುವ ವಿಜ್ಞಾನಿಗಳಾಗಬೇಕು. ವಿಜ್ಞಾನ ಯುಗದಲ್ಲಿ ತಮ್ಮನ್ನು ತಾವು ಅರ್ಪಣಾ ಮನೋಭಾವದಿಂದ ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದರು.
ಜ್ಞಾನದ ಬೆಳಕಿನಿಂದ ಅಜ್ಞಾನದ ಕತ್ತಲೆ ತೊಡೆದು ಹಾಕಬಹುದು, ಆದ್ದರಿಂದಲೇ ಭಾರತೀಯರು ವಿವಿಧ ಶುಭಕಾರ್ಯಗಳಿಗೆ ಸಾಂಕೇತಿಕವಾಗಿ ದೀಪವನ್ನು ಹಚ್ಚುತ್ತಾರೆ, ಪೋಷಕರೇ ಅಲ್ಲದೆ ಅಕ್ಷರ ಕಲಿಸಿದ ಗುರುಗಳನ್ನು ಸ್ಮರಿಸುವುದು ಸಹ ಜ್ಞಾನಕ್ಕೆ ನೀಡುವ ಗೌರವ ಎಂದರು.
ಜಿಲ್ಲಾಧ್ಯಕ್ಷ ಜಿ. ಶ್ರೀನಿವಾಸ್ ಮಾತನಾಡಿ ಸಮಿತಿಯ ಬೆಳವಣಿಗೆಯ ಹನ್ನೊಂದು ವರ್ಷದ ಅವಧಿಯಲ್ಲಿ ವಿವಿಧ ರೀತಿಯ ವಿಜ್ಞಾನ ಚಟುವಟಿಕೆಗಳನ್ನು, ವಿಜ್ಞಾನ ಗೀತೆ, ರಸಪ್ರಶ್ನೆ, ಜ್ಞಾನ ಪುಸ್ತಕಗಳ ಪ್ರದರ್ಶನ, ಮೂಲಕ ಜಾಗೃತಿ ಉಂಟು ಮಾಡುತ್ತಿದ್ದು ಮಾರ್ಚ್ ೩೧ರ ವರೆಗೆ ಜಿಲ್ಲೆಯ ಆಸಕ್ತ ವಿಜ್ಞಾನ ಪ್ರೇಮಿಗಳು ಸದಸ್ಯತ್ವ ಆಂದೋಲನದಲ್ಲಿ ಭಾಗವಹಿಸಿ ಸಕ್ರಿಯ ಸದಸ್ಯರಾಗುವಂತೆ ಅವರು ಕೋರಿದರು.
ಸಮಿತಿಯ ಕ್ರಿಯಾಶೀಲ ಕಾರ್ಯಕರ್ತ ಪ್ರಶಸ್ತಿಯನ್ನು ಶಾಸಕರಿಂದ ಜಿಲ್ಲಾ ಸಂಚಾಲಕ ಡಿ.ಎನ್.ಮುಕುಂದ, ಕೋಶಾಧ್ಯಕ್ಷ ಜಗನ್ನಾಥ್ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಸಮಿತಿಯ ಉಪಾದ್ಯಕ್ಷರಾದ ರೇಣುಕ, ಪದ್ಮಾವತಿ, ಸಿ.ವಿ.ನಾಗರಾಜ್, ಸುರೇಶ್ ಕುಮಾರ್ ಭಾಗವಹಿಸಿದ್ದರು.