ಬದುಕಿಗೊಂದು ಗುರಿ ಗುರು ಇಲ್ಲದವ ನಿಜವಾದ ಬಡವ :  ರಂಭಾಪುರಿ ಶ್ರೀ 

ಹರಿಹರ.ಜು.೧; ಜ್ಞಾನ ಶಕ್ತಿಯನ್ನು ನೀಡಿದರೆ ನಡತೆ ಗೌರವವನ್ನು ತಂದು ಕೊಡುತ್ತದೆ. ದುಡ್ಡಿಲ್ಲದವ ಬಡವನಲ್ಲ. ಬದುಕಿಗೊಂದು ಗುರಿ ಮತ್ತು ಗುರು ಇಲ್ಲದವನು ನಿಜವಾದ ಬಡವನೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು ನಗರದ ಜಗದ್ಗುರು ರೇಣುಕಾಚಾರ್ಯ ಮಂದಿರ ಹಳೇಪೇಟೆ ಶ್ರೀ ಬಸವೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಜರುಗಿದ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜಾ ಹಾಗೂ ಜನ ಜಾಗೃತಿ ಧರ್ಮ ಸಮಾರಂಭದ 2ನೇ ದಿನ ಆಶೀರ್ವಚನ ನೀಡುತ್ತಿದ್ದರು.ಬಣ್ಣ ಮತ್ತು ಸುವಾಸನೆ ಹೇಗೆ ಹೂವಿಗೆ ಮೆರಗು ನೀಡುತ್ತವೆಯೋ ಅದೇ ರೀತಿ ಒಳ್ಳೆಯ ಗುಣ ನಡತೆಗಳು ಮನುಷ್ಯನ ವ್ಯಕ್ತಿತ್ವಕ್ಕೆ ಮೆರಗು ತರುತ್ತವೆ. ದೇವರ ಮುಂದೆ ಹಚ್ಚುವ ದೀಪ ದೇವರಿಗೆ ಬೆಳಕು ಕೊಡುವುದಕ್ಕಲ್ಲ. ಆದರೆ ನಮ್ಮಲ್ಲಿರುವ ಕತ್ತಲೆಯನ್ನು ಕಳೆದು ಹೃದಯ ಮತ್ತು ಮನಸ್ಸನ್ನು ಬೆಳಗಿಸಲು ಎಂಬುದನ್ನು ಮರೆಯಬಾರದು. ಉತ್ತಮ ನಡೆ ನುಡಿ ನಮ್ಮ ಜೀವನದ ನಿಜವಾದ ಆಸ್ತಿಗಳು. ಅರ್ಥ ಮಾಡಿಕೊಳ್ಳುವ ಮನಸ್ಸು, ಕ್ಷಮಿಸುವ ಗುಣ, ಕೈ ಜೋಡಿಸುವ ಸ್ನೇಹ, ಸಮಾಧಾನ ಮಾಡುವ ಒಂದು ಹೃದಯ ಮನುಷ್ಯ ಜೀವನದ ನಿಜವಾದ ಆಸ್ತಿಗಳೆಂದು ಶ್ರೀ ಜಗದ್ಗುರು ರೇಣುಕಾಚಾರ್ಯ ನಿರೂಪಿಸಿದ್ದನ್ನು ಯಾರೂ ಮರೆಯಬಾರದೆಂದರು.ಮಳಲಿಮಠದ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಮಾನವೀಯ ಸಂಬAಧಗಳು ಸಡಿಲಗೊಳ್ಳುತ್ತಿರುವ ಇಂದಿನ ಸಂದರ್ಭದಲ್ಲಿ ಧರ್ಮವೊಂದೇ ಆಶಾಕಿರಣ. ಅರಸನಿಲ್ಲದ ರಾಜ್ಯ ಹಿರಿಯರಿಲ್ಲದ ಮನೆ, ದೇವರಿಲ್ಲದ ಗುಡಿ ಮತ್ತು ಗುರುವಿಲ್ಲದ ಮಠ ಜಲವಿಲ್ಲದ ಭಾವಿಯಂತೆ ವ್ಯರ್ಥ. ಅರಿವು ಆಚರಣೆಗಳ ಮೂಲಕ ಬದುಕು ಕಟ್ಟಿಕೊಳ್ಳಬೇಕೆಂದರು. ಹರಿಹರ ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಡಾ.ಸವಿತಾ ಡಾ.ಮಹೇಶ ‘ರಂಭಾಪುರಿ ಬೆಳಗು’ ಬಿಡುಗೆ ಮಾಡಿದರು.ಹರಪನಹಳ್ಳಿ ಕ್ಷೇತ್ರದ ಶಾಸಕಿ ಲತಾ ಮಲ್ಲಿಕಾರ್ಜುನ, ಮತ್ತು ವೀರೇಶ ಹನಗವಾಡಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.ಕಾಂತರಾಜ ಮತ್ತು ಸಂಗಡಿಗರಿAದ ಸಂಗೀತ ಸೌರಭ ಜರುಗಿತು. ಕೊಂಡಜ್ಜಿ ಪಂಚಾಕ್ಷರಿ ಸ್ವಾಗತಿಸಿದರು. ಉಪನ್ಯಾಸಕ ಗುರುಬಸವರಾಜಯ್ಯ ನಿರೂಪಿಸಿದರು.ಬೆಳಿಗ್ಗೆ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಭಕ್ತರಿಗೆ ಶುಭ ಹಾರೈಸಿದರು.ಕುಮಾರಪಟ್ಟಣದ ಶ್ರೀಮತಿ ಪುಷ್ಪಾವತಿ-ನಾಗರಾಜ ಚಕ್ರಸಾಲಿ ಮತ್ತು ಮಕ್ಕಳು ಅನ್ನ ದಾಸೋಹ ನೆರವೇರಿಸಿದರು