ಬದುಕಿಗೆ ಬೆಳಕು ಕೊಡುವ ಶಕ್ತಿ ಧರ್ಮಕ್ಕೆ ಇದೆ :  ರಂಭಾಪುರಿ ಶ್ರೀ

oplus_2

ಸಂಜೆವಾಣಿ ವಾರ್ತೆ

ಶಿವಮೊಗ್ಗ.ಮೇ.31 ; ಮನುಷ್ಯನ ಉಜ್ವಲ ಭವಿಷ್ಯಕ್ಕೆ ಧರ್ಮಾಚರಣೆ ಅಗತ್ಯ ಇದೆ. ಆಡುವ ಮಾತು ಧರ್ಮವಲ್ಲ. ಆಡಿದಂತೆ ನಡೆಯುವುದೇ ನಿಜವಾದ ಧರ್ಮ. ಬದುಕಿಗೆ ಬೆಳಕು ಕೊಡುವ ಶಕ್ತಿ ಧರ್ಮಕ್ಕೆ ಇದೆ ಹೊರತು ಬೇರೆ ಯಾವುದಕ್ಕೂ ಇಲ್ಲವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು  ತಾಲೂಕಿನ ಬಿ ಬೀರನಹಳ್ಳಿ ಗ್ರಾಮದಲ್ಲಿ ಜರುಗಿದ ಇಷ್ಟಲಿಂಗ ಪೂಜೆ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರುವೀರಶೈವ ಧರ್ಮ ಅತ್ಯಂತ ಪ್ರಾಚೀನ ಧರ್ಮವಾಗಿದ್ದು ಇದಕ್ಕೊಂದು ಭವ್ಯ ಪರಂಪರೆ ಇತಿಹಾಸ ಇದೆ. ಪರಶಿವನ ಆದೇಶದಂತೆ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಕೊಲ್ಲಿಪಾಕಿ ಸೋಮೇಶ್ವರಾದಿ ಪಂಚ ಶಿವಲಿಂಗಗಳಿAದ ಅವತರಿಸಿ ಭೂಮಂಡಲದಲ್ಲಿ ವೀರಶೈವ ಧರ್ಮವನ್ನು ಸ್ಥಾಪಿಸಿದರು ಸಕಲ ಜೀವಾತ್ಮರಿಗೆ ಸದಾ ಒಳಿತನ್ನೆ ಬಯಸಿದ ವೀರಶೈವ ಧರ್ಮ ಆಯಾ ಕಾಲ ಘಟ್ಟಗಳಲ್ಲಿ ಬೆಳೆದುಕೊಂಡು ಬಂದಿದೆ. ಎಷ್ಟೋ ಜನರು ಧರ್ಮವನ್ನು ಜಾತಿಗೆ ಜೋಡಿಸಿ ಧರ್ಮದ ವಿಶಾಲ ತತ್ವಕ್ಕೆ ಅಪಚಾರ ಮಾಡುತ್ತಿದ್ದಾರೆ. ಜಾತಿ ಎಂದೂ ಧರ್ಮವಾಗಲಾರದು. ಧರ್ಮದಲ್ಲಿರುವ ದೂರ ದೃಷ್ಟಿ ಜಾತಿಯಲ್ಲಿ ಇಲ್ಲ. ಧರ್ಮ ಸಂಸ್ಕೃತಿ ಎತ್ತಿ ಹಿಡಿಯುವ ವಿಶಾಲ ಮನೋಭಾವ ಎಲ್ಲರಲ್ಲೂ ಬೆಳೆದು ಬರಬೇಕಾಗಿದೆ. ಈ ನಿಟ್ಟಿನಲ್ಲಿ ಶ್ರೀ ಜಗದ್ಗುರು ರಂಭಾಪುರಿ ಧರ್ಮಪೀಠ ನಿರಂತರವಾಗಿ ಶ್ರಮಿಸುತ್ತಿದೆ. ನಗರ ಮತ್ತು ಹಳ್ಳಿ ಪ್ರದೇಶಗಳಲ್ಲದೆ ಎಲ್ಲ ಕಡೆ ಸಂಚರಿಸಿ ಜನ ಜಾಗೃತಿಯನ್ನು ಉಂಟು ಮಾಡುತ್ತಿದೆ. ಬೀರನಹಳ್ಳಿ ಗ್ರಾಮದ ಮಠದ ನಾಗಯ್ಯನವರು ಮತ್ತು ಅವರ ಮಕ್ಕಳು ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮ ಸಮಾರಂಭ ಏರ್ಪಡಿಸಿರುವುದು ಸಂತೋಷದ ಸಂಗತಿ ಎಂದರು.ಈ ಪವಿತ್ರ ಸಮಾರಂಭದಲ್ಲಿ ಮಳಲಿಮಠದ ಡಾ ನಾಗಭೂಷಣ ಶಿವಾಚಾರ್ಯರು ಹಾಗೂ ಚನ್ನಗಿರಿ ಹಿರೇಮಠದ ಡಾ ಕೇದಾರ ಶಿವಶಾಂತವೀರ ಶಿವಾಚಾರ್ಯರು ಪಾಲ್ಗೊಂಡು ಧರ್ಮೋಪದೇಶವನ್ನು ಮಾಡಿದರು. ದಾವಣಗೆರೆ ದುಗ್ಗತ್ತಿ ಮಠದ ಪ್ರಶಾಂತ್ ನಿರೂಪಿಸಿದರು.